ಬೆಂಗಳೂರು [ನ.09]:  ಶಿಕ್ಷಕ ಸಮುದಾಯಕ್ಕೆ ಈ ಮೊದಲಿದ್ದಂತೆಯೇ ಸಾಂದರ್ಭಿಕ ರಜೆ (ಸಿಎಲ್)ಗಳನ್ನು 10 ರಿಂದ 15 ದಿನಗಳಿಗೆ ಹೆಚ್ಚಳ ಮಾಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರನ್ನು ಕೋರಿದ್ದಾರೆ.

ಈ ಕುರಿತು ಶುಕ್ರವಾರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಚಿವರು, ರಾಜ್ಯ ಸರ್ಕಾರಿ ನೌಕರರಿಗೆ ಹಲವು ವರ್ಷಗಳಿಂದ 2ನೇ ಶನಿವಾರ ರಜೆ ನೀಡಲಾಗುತ್ತಿದೆ. ಇತ್ತೀಚೆಗೆ 4 ನೇ ಶನಿವಾರ ಕೂಡ ರಜೆ ಘೋಷಿಸಿದ ಸಮಯದಲ್ಲಿ ಸಾಂದರ್ಭಿಕ ರಜೆಯನ್ನು 15ರಿಂದ 10 ಕ್ಕೆ ಇಳಿಕೆ  ಮಾಡಲಾಗಿದೆ. 

‘ಟಿಪ್ಪು ಪಠ್ಯ ತೆಗೆದು ಹಾಕುವ ಕುರಿತು ಸಿಎಂ ನಿರ್ಧಾರವೇ ಅಂತಿಮ’...

ಈ ನಿಯಮ ಇತರೆ ಸರ್ಕಾರಿ ನೌಕರರಿಗೆ ಅನ್ವಯವಾಗುವಂತೆ ಶಿಕ್ಷಕ ಸಮುದಾಯಕ್ಕೂ ಅನ್ವಯವಾಗುತ್ತಿದೆ. ಆದರೆ, ಶಾಲಾ ಶಿಕ್ಷಕರಿಗೆ 2ನೇ ಮತ್ತು 4ನೇ ಶನಿವಾರವೂ ರಜೆ ಇರುವುದಿಲ್ಲ. ಆದರೂ ಸಾಂದರ್ಭಿಕ ರಜೆಗಳನ್ನು ವಾರ್ಷಿಕ 10 ದಿನಗಳಿಗೆ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಶಿಕ್ಷಕರು ತಮಗೆ ಆಗಿರುವ ಅನ್ಯಾಯದ ಬಗ್ಗೆ ದೂರು ಹೇಳುತ್ತಿದ್ದಾರೆ. 

ಈ ಆಗ್ರಹ ನ್ಯಾಯೋಚಿತವಾಗಿರುವುದರಿಂದ ಶಿಕ್ಷಕ ಸಮುದಾಯಕ್ಕೆ ಅನ್ವಯವಾಗುವಂತೆ 15 ದಿನಗಳ ಸಾಂದರ್ಭಿಕ ರಜೆಗಳನ್ನು ಮೊದಲಿನಂತೆ ಮುಂದುವರೆಸಬೇಕು. ಇದಕ್ಕಾಗಿ ಸರ್ಕಾರದ ರಜಾ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಅವರು ಪತ್ರದಲ್ಲಿ ಕೋರಿದ್ದಾರೆ.