*  ರೈತರ ಪಂಪ್‌ಸೆಟ್‌ಗೆ ಮೀಟರ್‌ ಅಳವಡಿಸುವ ಆಲೋಚನೆಯೂ ಇಲ್ಲ*  ನಾಗರಿಕರು, ರೈತರು, ಉದ್ಯಮಿಗಳಿಗೆ ಆತಂಕ ಬೇಡ*  ಸರ್ಕಾರಿ ಕಚೇರಿ, ಬೆಸ್ಕಾಂ ವ್ಯಾಪ್ತಿಯ 1 ಲಕ್ಷ ಕಟ್ಟಡಗಳಿಗೆ ಪ್ರಿಪೇಯ್ಡ್‌ ಮೀಟರ್‌

ಬೆಂಗಳೂರು(ಸೆ.17):  ‘ಯಾವುದೇ ಕಾರಣಕ್ಕೂ ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣ ಮಾಡುವುದಿಲ್ಲ, ಅಂತಹ ಚಿಂತನೆ ಸರ್ಕಾರದ ಮುಂದಿಲ್ಲ’ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಜತೆಗೆ, ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಚಿಂತೆಯೂ ಇಲ್ಲ ಎಂದೂ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಯಶವಂತರಾಯಗೌಡ ಪಾಟೀಲ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣ ಮಾಡಲಾಗುತ್ತದೆ ಎಂಬ ಬಗ್ಗೆ ಸಾರ್ವಜನಿಕರು, ರೈತರು, ಕೈಗಾರಿಕೋದ್ಯಮಿಗಳು ಆತಂಕಗೊಳ್ಳುವುದು ಬೇಡ ಎಂದರು.

‘ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಚಿಂತನೆ ಸಹ ನಮ್ಮ ಮುಂದಿಲ್ಲ. ಆದರೆ ಕೇಂದ್ರ ಸರ್ಕಾರದ ‘ರಿವ್ಯಾಂಪ್ಡ್‌ ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಸ್ಕೀಮ್‌’ (ಆರ್‌ಡಿಎಸ್‌ಎಸ್‌) ಯೋಜನೆಯಡಿ ಪ್ರಿಪೇಯ್ಡ್‌ ಮೀಟರ್‌ಗಳನ್ನು ಮೊದಲನೇ ಹಂತದಲ್ಲಿ ಸರ್ಕಾರಿ ಕಚೇರಿ ಹಾಗೂ ಬೆಸ್ಕಾಂ ವ್ಯಾಪ್ತಿಯಲ್ಲಿ ಒಂದು ಲಕ್ಷ ಕಟ್ಟಡಗಳಿಗೆ ಅಳವಡಿಸಲಾಗುವುದು. ಶೇ. 15ಕ್ಕಿಂತ ಹೆಚ್ಚು ಸರಾಸರಿ ತಾಂತ್ರಿಕ ಹಾಗೂ ವಾಣಿಜ್ಯ ನಷ್ಟಇರುವ ನಗರ ಮತ್ತು ಪಟ್ಟಣಗಳಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ, ಎಲ್ಲ ತಾಲ್ಲೂಕು ಮಟ್ಟದ ಮತ್ತು ಮೇಲ್ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ’ ಎಂದು ಅವರು ವಿವರಿಸಿದರು.

ವಿದ್ಯುತ್‌ ಪೂರೈಕೆ ಖಾಸಗೀಕರಣಕ್ಕೆ ಕೇಂದ್ರ ಸಿದ್ಧತೆ

‘ಆರ್‌ಡಿಎಸ್‌ಎಸ್‌ ಯೋಜನೆಯ ಮಾರ್ಗಸೂಚಿ ಅನ್ವಯ ವಿಸ್ತೃತ ಯೋಜನೆ (ಡಿಪಿಆರ್‌) ಸಿದ್ಧಪಡಿಸಲು ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಪರಿಶೀಲಿಸಲಾಗುತ್ತಿದೆ. ಡಿಪಿಆರ್‌ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಅನುಮೋದನೆ ನಂತರ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ತಿಳಿಸಿದರು.

ಸರ್ಕಾರಿ ಇಲಾಖೆಗಳಿಂದಲೇ 5,798 ಕೋಟಿ ರು. ವಿದ್ಯುತ್‌ ಬಾಕಿ ಬರಬೇಕಿದೆ. ಇಷ್ಟೊಂದು ದೊಡ್ಡ ಮೊತ್ತ ಬಾಕಿ ಇದ್ದರೆ ಇಲಾಖೆಯನ್ನು ನಿರ್ವಹಣೆ ಮಾಡಲು ಆಗುವುದಿಲ್ಲ, ಆದಾಯ ಇಲ್ಲದಿದ್ದರೆ ಸುಧಾರಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಕೈಗಾರಿಕೆಗಳಿಗೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಈಗಾಗಲೇ ಒಂದು ಬಾರಿ ಕೈಗಾರಿಕೋದ್ಯಮಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಅಧಿವೇಶನ ಮುಗಿಯುವುದೊರೊಳಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮತ್ತೊಂದು ಸಭೆ ಕರೆಯಲಾಗುವುದು ಎಂದರು.

‘ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್‌ ನೀಡುವುದರಿಂದ ಎಷ್ಟುಹೊರೆ ಬೀಳುತ್ತದೆ ಎಂಬದನ್ನು ಪರಿಶೀಲಿಸಿ, ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದರು.