* ವಿದ್ಯುತ್ ದರ ಹೆಚ್ಚಿಸಿಲ್ಲ, ಇದು ವೆಚ್ಚ ಹೊಂದಾಣಿಕೆ* ಕಲ್ಲಿದ್ದಲು, ಪೆಟ್ರೋಲ್ ದರ ಹೆಚ್ಚಿರುವುದರಿಂದ ವೆಚ್ಚ ಪರಿಷ್ಕರಣೆ* ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ
ಬೆಂಗಳೂರು(ಜೂ.29): ‘ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆ ದರ ಏರಿಳಿತ ಆಧರಿಸಿ ವೆಚ್ಚ ಹೊಂದಾಣಿಕೆ ಸಾಮಾನ್ಯ ಪ್ರಕ್ರಿಯೆ. ಈ ಹಿನ್ನೆಲೆಯಲ್ಲಿ ಕೆಇಆರ್‌ಸಿ ದರ ಪರಿಷ್ಕರಿಸಿದೆಯೇ ಹೊರತು ಇದು ವಿದ್ಯುತ್ ದರ ಹೆಚ್ಚಳವಲ್ಲ. ದರ ಹೆಚ್ಚಳ ಮಾಡುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ’ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
‘ರಾಜ್ಯ ಸರ್ಕಾರ ಜು.1ರಿಂದ ವಿದ್ಯುತ್ ದರ ಪರಿಷ್ಕರಿಸಲಿದೆ’ ಎಂಬ ಸುದ್ದಿ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ‘ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆದರ ಆಧರಿತ ವೆಚ್ಚ ಹೊಂದಾಣಿಕೆ ಸಾಮಾನ್ಯ ಪ್ರಕ್ರಿಯೆ. ಎಸ್ಕಾಂಗಳ ಇಂತಹ ಪ್ರಸ್ತಾವನೆ ಹಿನ್ನೆಲೆಯಲ್ಲಿ ಕೆಇಆರ್‌ಸಿ ದರ ಪರಿಷ್ಕರಿಸಿದೆ. ಎಸ್ಕಾಂಗಳ ವ್ಯಾಪ್ತಿಯಲ್ಲಿ ಇಂತಹ ವೆಚ್ಚ ಹೊಂದಾಣಿಕೆ ಸಂಪ್ರದಾಯದಂತೆ ನಡೆದು ಬಂದಿದೆ. ಇದನ್ನು ವಿದ್ಯುತ್ ದರ ಹೆಚ್ಚಳ ಎಂದು ಭಾವಿಸಬೇಕಿಲ್ಲ’ ಎಂದು ತಿಳಿಸಿದ್ದಾರೆ.
ಭದ್ರತಾ ಠೇವಣಿ ಹೆಚ್ಚಿಸಿ ಶಾಕ್ ಕೊಟ್ಟ ಬೆಸ್ಕಾಂ, 30 ದಿನದಲ್ಲಿ ಪಾವತಿಯಾಗದಿದ್ದರೆ ವಿದ್ಯುತ್ ಕಟ್!
‘ರಾಜ್ಯದಲ್ಲಿ 13 ಉಷ್ಣ ವಿದ್ಯುತ್ ಸ್ಥಾವರಗಳಿವೆ. ಇವುಗಳ ಕಾರ್ಯ ನಿರ್ವಹಣೆಗೆ ನಿರ್ದಿಷ್ಟಪ್ರಮಾಣದ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಅಗತ್ಯವಿರುತ್ತದೆ. ಇವುಗಳ ಮಾರುಕಟ್ಟೆದರದ ಏರಿಳಿತ ಆಧರಿಸಿ ಎಲ್ಲ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಹೊಂದಾಣಿಕೆ ವೆಚ್ಚ ಪರಿಷ್ಕರಣೆ ನಡೆಯುತ್ತದೆ. ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆದರ ಆಧರಿತ ಹೊಂದಾಣಿಕೆ ವೆಚ್ಚ ಪರಿಷ್ಕರಣೆಗೆ ಎಸ್ಕಾಂಗಳು ಸಲ್ಲಿಸಿದ ಪ್ರಸ್ತಾಪಗೆ ಕೆಇಆರ್‌ಸಿ ಒಪ್ಪಿಗೆ ನೀಡಿದೆ ಅಷ್ಟೆ. ಈ ಎಸ್ಕಾಂಗಳ ವ್ಯಾಪ್ತಿಯಲ್ಲಿ ವೆಚ್ಚ ಹೊಂದಾಣಿಕೆ ನಡೆಸಿದಾಗ ದರ ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು. ಹೀಗಾಗಿ ಈ ಪ್ರಕ್ರಿಯೆಯನ್ನು ವಾರ್ಷಿಕ ದರ ಪರಿಷ್ಕರಣೆ ಜತೆ ತಳಕು ಹಾಕುವ ಅಗತ್ಯವಿಲ್ಲ’ ಎಂದು ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
‘ಈ ಪ್ರಕ್ರಿಯೆಯಿಂದ ವಿದ್ಯುತ್ ದರ ಏರಿಕೆಯಾಗುವುದಿಲ್ಲ. ಆದರೆ, ವಿದ್ಯುತ್ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಬಗ್ಗೆ ಕೆಲವೆಡೆ ತಪ್ಪು ಸಂದೇಶ ರವಾನೆಯಾಗಿದೆ. ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಯಾವುದೇ ವಿದ್ಯುತ್ ಸರಬರಾಜು ಕಂಪನಿಗಳಿಗೂ ಸೂಚನೆ ನೀಡಿಲ್ಲ’ ಎಂದು ಅವರು ತಿಳಿಸಿದ್ದಾರೆ.
