* 30 ದಿನದೊಳಗೆ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸಿ, ಇಲ್ಲದಿದ್ದರೆ ವಿದ್ಯುತ್‌ ಸಂಪರ್ಕ ಕಡಿತ* ಈಗಾಗಲೇ ವಿದ್ಯುತ್‌ ದರ ಹೆಚ್ಚಳದಿಂದ ತತ್ತರಿಸಿರುವ ಗ್ರಾಹಕ* ಈಗ ಮತ್ತೆ ಬೆಸ್ಕಾಂಗೆ ಭದ್ರತಾ ಠೇವಣಿ ಕಟ್ಟುವ ಸಂಕಷ್ಟ

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಮೇ.06): ಬೆಂಗಳೂರು ವಿದ್ಯುತ್‌ ಸರಬರಾಜು ನಿಗಮ (ಬೆಸ್ಕಾಂ) ಗ್ರಾಹಕರಿಗೆ ಸತತ ವಿದ್ಯುತ್‌ ದರ ಏರಿಕೆ ಶಾಕ್‌ ಬೆನ್ನಲ್ಲೇ ಹೆಚ್ಚುವರಿ ಭದ್ರತಾ ಠೇವಣಿ ಪಾವತಿ ಮಾಡುವಂತೆ ನೋಟಿಸ್‌ ಜಾರಿ ಮಾಡಿದೆ. 30 ದಿನಗಳೊಳಗಾಗಿ ಹೆಚ್ಚುವರಿ ಭದ್ರತಾ ಠೇವಣಿ (ಎಎಸ್‌ಡಿ) ಪಾವತಿಸದಿದ್ದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದಾಗಿ ಹೇಳುವ ಮೂಲಕ ಮತ್ತೊಂದು ಶಾಕ್‌ ನೀಡಿದೆ.

ಬೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಕಳೆದ ಒಂದೂವರೆ ವರ್ಷದಲ್ಲಿ ನಾಲ್ಕು ಬಾರಿ ವಿದ್ಯುತ್‌ ದರ ಪರಿಷ್ಕರಣೆಯಾಗಿದೆ. ಇದರಿಂದ ಕೆಲ ಗ್ರಾಹಕರ ವಿದ್ಯುತ್‌ ಬಳಕೆ ಪ್ರಮಾಣ ಸಾಮಾನ್ಯದಂತೆ ಇದ್ದರೂ ವಿದ್ಯುತ್‌ ಬಿಲ್‌ ದುಪ್ಪಟ್ಟಾಗುತ್ತಿದೆ. ಇದ್ದಲ್ಲದೆ, ವರ್ಷದಿಂದ ವರ್ಷಕ್ಕೆ ಗೃಹೋಪಯೋಗಿ ಎಲೆಕ್ಟ್ರಿಕ್‌ ಸಾಧನಗಳ ಹೆಚ್ಚಳ ಮತ್ತಿತರ ಕಾರಣಗಳಿಗೂ ವಿದ್ಯುತ್‌ ಬಿಲ್‌ ಹೆಚ್ಚಾಗುತ್ತದೆ. ಈ ರೀತಿ ಹೆಚ್ಚು ಬಿಲ್‌ ಪಾವತಿಸುತ್ತಿರುವವರೆಲ್ಲರೂ ಹೆಚ್ಚುವರಿ ಬಿಲ್‌ ಪಾವತಿಗೆ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸುವಂತೆ ಬೆಸ್ಕಾಂ ತನ್ನ ಲಕ್ಷಾಂತರ ಗ್ರಾಹಕರಿಗೆ ನೋಟಿಸ್‌ ಜಾರಿ ಮಾಡಿದೆ.

ವಿದ್ಯುತ್‌ ಸಂಪರ್ಕ ಕಡಿತದ ಎಚ್ಚರಿಕೆ:

ಗ್ರಾಮೀಣ ಪ್ರದೇಶ, ನಗರ ಪ್ರದೇಶ ಎರಡೂ ಕಡೆ ವಸತಿ ಹಾಗೂ ವಾಣಿಜ್ಯ ಬಳಕೆಯ ಎರಡೂ ರೀತಿಯ ಗ್ರಾಹಕರಿಗೆ ಬೆಸ್ಕಾಂ ನೋಟಿಸ್‌ ಬಿಸಿ ತೋರಿಸಿದೆ. ಉದಾ: ಗೌರೀಬಿದನೂರು ತಾಲೂಕಿನ ಹಳ್ಳಿಯೊಂದರ ಗ್ರಾಹಕರಿಗೆ ನೋಟಿಸ್‌ ಜಾರಿ ಮಾಡಿರುವ ಬೆಸ್ಕಾಂ, 2021ನೇ ಸಾಲಿನ ಅಧಿಕ ಭದ್ರತಾ ಠೇವಣಿಗಾಗಿ 390 ರುಪಾಯಿಯನ್ನು ತಕ್ಷಣ ಪಾವತಿಸುವಂತೆ ಸೂಚಿಸಿದೆ. ನೋಟಿಸ್‌ ಜಾರಿ ಮಾಡಿದ 30 ದಿನದಲ್ಲಿ ನಗದು/ಡಿಡಿ ರೂಪದಲ್ಲಿ ಪಾವತಿ ಮಾಡಬೇಕು. ಇಲ್ಲದಿದ್ದರೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ವಿದ್ಯುತ್‌ ಸರಬರಾಜು ನಿಯಮಗಳ ಅನ್ವಯ ಕಂದಾಯ ಬಾಕಿ ಎಂದು ಪರಿಗಣಿಸಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು. ಭದ್ರತಾ ಠೇವಣಿ ಬಗ್ಗೆ ಆಕ್ಷೇಪಣೆಗಳಿದ್ದರೆ ನೋಟಿಸ್‌ ತಲುಪಿದ 7 ದಿನಗಳ ಒಳಗಾಗಿ ಕಚೇರಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿದೆ.

ಇನ್ನು ಬೆಂಗಳೂರು ನಗರದ ಹೆಬ್ಬಾಳ ವಿಭಾಗದ ಅಪಾರ್ಚ್‌ಮೆಂಟ್‌ ಒಂದಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಪ್ರಸ್ತುತ ನೀವು .47,120 ಭದ್ರತಾ ಠೇವಣಿ ಪಾವತಿಸಿದ್ದೀರಿ. ಆದರೆ 2021ರ ಸರಾಸರಿ ಎರಡು ತಿಂಗಳ ಎಂಎಂಡಿ (ಎರಡು ತಿಂಗಳ ವಿದ್ಯುತ್‌ ಬಳಕೆ ಬಿಲ್ಲು) .1,43,690 ಆಗಿದೆ. ಹೀಗಾಗಿ ಉಳಿದ .96,570 ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸಬೇಕು. ಇಲ್ಲದಿದ್ದರೆ 30 ದಿನದಲ್ಲಿ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ನೋಟಿಸ್‌ ನೀಡಲಾಗಿದೆ.

ಏನಿದು ಎ.ಎಸ್‌.ಡಿ?

ಬೆಸ್ಕಾಂ ಗ್ರಾಹಕರಿಗೆ ಹೊಸದಾಗಿ ವಿದ್ಯುತ್‌ ಸಂಪರ್ಕ ನೀಡುವಾಗ ಭದ್ರತಾ ಠೇವಣಿ ಪಡೆಯಲಾಗುತ್ತದೆ. ಪ್ರತಿ ವರ್ಷ ವಿದ್ಯುತ್‌ ಬಳಕೆ ಪ್ರಮಾಣದ ಆಧಾರದ ಮೇಲೆ ಭದ್ರತಾ ಠೇವಣಿಯನ್ನು ಹೆಚ್ಚಿಸಿ ಹೆಚ್ಚುವರಿ ಭದ್ರತಾ ಠೇವಣಿ (ಎಎಸ್‌ಡಿ) ಸಂಗ್ರಹಿಸಲಾಗುತ್ತದೆ.

ಉದಾ: 2021ನೇ ವರ್ಷದ 12 ತಿಂಗಳ ಒಟ್ಟು ವಿದ್ಯುತ್‌ ಶುಲ್ಕದ ಮಾಸಿಕ ಸರಾಸರಿ ಶುಲ್ಕವನ್ನು ಪಡೆದು, ಎರಡು ತಿಂಗಳ ಸರಾಸರಿ ಶುಲ್ಕದಷ್ಟುಭದ್ರತಾ ಠೇವಣಿ ಸಂಗ್ರಹಿಸಲಾಗುತ್ತದೆ. ಪ್ರಸ್ತುತ ಠೇವಣಿ ಇರುವ ಮೊತ್ತ ಎರಡು ತಿಂಗಳ ಸರಾಸರಿ ಶುಲ್ಕಕ್ಕಿಂತ ಎಷ್ಟುಕಡಿಮೆ ಇರುತ್ತದೆಯೋ ಅಷ್ಟುಮೊತ್ತವನ್ನು (ಎಎಸ್‌ಡಿ) ಪಾವತಿ ಮಾಡುವಂತೆ ನೋಟಿಸ್‌ ನೀಡಲಾಗುತ್ತದೆ. ಪ್ರತಿ ವರ್ಷ ಮಾಚ್‌ರ್‍-ಏಪ್ರಿಲ್‌ನಲ್ಲಿ ಎಎಸ್‌ಡಿ ಲೆಕ್ಕಾಚಾರ ಮಾಡಿ ನೋಟಿಸ್‌ ಜಾರಿ ಮಾಡಲಾಗುತ್ತದೆ.

ಗ್ರಾಹಕರಿಗೂ ಅನುಕೂಲ: ಬೆಸ್ಕಾಂ

ಈ ಬಗ್ಗೆ ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ಎಎಸ್‌ಡಿ ಎಂಬುದು ಬ್ಯಾಂಕ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್‌, ಬಾಡಿಗೆದಾರರು ಮನೆ ಮಾಲಿಕರಿಗೆ ನೀಡುವ ಮುಂಗಡ ಹಣವಿದ್ದಂತೆ. ಗ್ರಾಹಕರು ಸೂಕ್ತ ಸಮಯದಲ್ಲಿ ವಿದ್ಯುತ್‌ ಬಿಲ್‌ ಪಾವತಿಸದೆ ಇದ್ದಾಗ ಇದನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಕೂಲವಾಗುತ್ತದೆ. ಇದರಿಂದ ಗ್ರಾಹಕರಿಗೂ ಅನುಕೂಲವಾಗಲಿದ್ದು, ಗ್ರಾಹಕರು ವಿದ್ಯುತ್‌ ಬಳಕೆ ಮಾಡಿದ 30 ದಿನಗಳವರೆಗೆ ಪಾವತಿಗೆ ಸಮಯ ನೀಡಲಾಗುತ್ತದೆ. ಠೇವಣಿ ಮೊತ್ತ ಇದ್ದಾಗ 45 ದಿನ ಸಮಯ ಇರುತ್ತದೆ. ಹೀಗಾಗಿ ಸಕಾಲಕ್ಕೆ ಶುಲ್ಕ ಪಾವತಿಸದಿದ್ದರೂ 45 ದಿನ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸುವುದಿಲ್ಲ ಎಂದು ವಿವರಿಸುತ್ತಾರೆ.

ಇನ್ನು ವಸತಿ ಬಳಕೆ ಶುಲ್ಕ .200 ಹಾಗೂ ವಾಣಿಜ್ಯ ಬಳಕೆ ಶುಲ್ಕ .1,000 ಕ್ಕಿಂತ ಹೆಚ್ಚಿದ್ದರೆ ಮಾತ್ರ ಠೇವಣಿ ಸಂಗ್ರಹಿಸಲಾಗುವುದು. ಪ್ರತಿ ವರ್ಷ ಎಎಸ್‌ಡಿ ಹೊರೆಯಿಂದ ತಪ್ಪಿಸಿಕೊಳ್ಳಲು ವಿದ್ಯುತ್‌ ಉಳಿತಾಯದ ಟಿಫ್ಸ್‌ ಪಾಲಿಸಬಹುದು. ಪೀಕ್‌ ಅವರ್‌ನಲ್ಲಿ ವಿದ್ಯುತ್‌ ಬಳಕೆ ಆದಷ್ಟುಕಡಿಮೆ ಮಾಡುವ ಮೂಲಕ ವಿದ್ಯುತ್‌ ಶುಲ್ಕವನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡುತ್ತಾರೆ.