ಬೆಂಗಳೂರು (ಏ.06):  ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ವಿಧಿಸಲಾಗಿದೆ. ನಮ್ಮಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದಿದ್ದರೆ ಪ್ರತಿಯೊಬ್ಬರು ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್‌ ಬಳಕೆ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌ ಮನವಿ ಮಾಡಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್‌, ಲಾಕ್‌ಡೌನ್‌ ಜಾರಿಯಿಂದ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಲಾಕ್‌ ಡೌನ್‌ ಆಗಬಾರದು ಎಂದಿದ್ದರೆ ಸಾರ್ವಜನಿಕರು ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಬೇಕು ಎಂದು ಸುಧಾಕರ್‌ ಹೇಳಿದರು.

ರಾಜ್ಯದಲ್ಲಿ ಕೊರೊನಾ 2ನೇ ಅಲೆ ಆರ್ಭಟ: ಏ.5ರ ಅಂಕಿ-ಸಂಖ್ಯೆ ಇಲ್ಲಿದೆ ...

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಆಯಾ ಇಲಾಖೆಯ ಮುಖ್ಯಸ್ಥರೇ ಅನುಷ್ಠಾನ ಮಾಡಬೇಕು. ಕೆಲವು ಕಡೆ ಸಮರ್ಪಕ ಅನುಷ್ಠಾನವಾಗದಿರುವ ಬಗ್ಗೆ ಮಾಹಿತಿ ಬಂದಿದ್ದು ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಮಾಲೋಚಿಸಲಾಗುವುದು ಎಂದು ಸುಧಾಕರ್‌ ತಿಳಿಸಿದ್ದಾರೆ.

ಕೋವಿಡ್‌ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ 8 ರಾಜ್ಯಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಚರ್ಚೆ ನಡೆಸಿದ್ದು ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಕೋವಿಡ್‌ ತಾಂತ್ರಿಕ ಸಮಿತಿ ಜೊತೆ ಸಮಾಲೋಚಿಸಿ ತೀರ್ಮಾನಿಸಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಮೇ ಅಂತ್ಯದವರೆಗೂ ಎಚ್ಚರ:  ಮೇ ಅಂತ್ಯದವರೆಗೂ ಎಚ್ಚರಿಕೆಯಿಂದ ಇರಬೇಕು ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಹೇಳಿದ್ದು ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ನಾವು ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೊರೋನಾ ಸೋಂಕಿತರಿಗೆ ಶೇ.20ರಷ್ಟುಹಾಸಿಗೆ ಕಾದಿರಿಸುವಂತೆ ಸೂಚಿಸಿದ್ದೇವೆ. ಬೆಂಗಳೂರಿನ ಬೌರಿಂಗ್‌ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆ. ಆದರೆ ಕೋವಿಡ್‌ ಹೊರತು ಪಡಿಸಿ ಅನ್ಯ ಕಾಯಿಲೆಗಳು ಕೂಡ ಹೆಚ್ಚುತ್ತಿರುವುದರಿಂದ ಹಾಸಿಗೆ ಸಮಸ್ಯೆ ಎದುರಾಗಿದೆ. ನಮ್ಮ ಇಲಾಖೆಯು ಮುಂಜಾಗೃತೆ ವಹಿಸಿರುವುದರಿಂದ ಹಾಸಿಗೆ ಸಮಸ್ಯೆ ತಲೆದೋರದು ಎಂದು ಸುಧಾಕರ್‌ ಭರವಸೆ ನೀಡಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾನವೀಯತೆಯ ದೃಷ್ಟಿಯಿಂದ ಲಾಕ್‌ ಡೌನ್‌ ಜಾರಿ ಮಾಡಲು ಅವಕಾಶ ನೀಡುತ್ತಿಲ್ಲ. ಮುಂಗಡವಾಗಿ ಟಿಕೆಟ್‌ ಬುಕ್‌ ಮಾಡಲಾಗಿದೆ ಎಂದು ಸಿನಿಮಾ ರಂಗದವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ತುಸು ವಿನಾಯಿತಿ ನೀಡಲಾಗಿದೆ. ಜಿಮ್‌ ಮಾಲೀಕರು ಶೇ. 50ರಷ್ಟುಹಾಜರಾತಿಗೆ ಅವಕಾಶ ನೀಡಬೇಕು ಎಂದು ಕೋರಿದ್ದ ಹಿನ್ನೆಲೆಯಲ್ಲಿ ಅನುಮತಿ ನೀಡಲಾಯಿತು ಎಂದು ಸುಧಾಕರ್‌ ಹೇಳಿದರು.

ಲಸಿಕೆ ಕೊರತೆ ಇಲ್ಲ:  ಕೇಂದ್ರ ಸರ್ಕಾರದಿಂದ 15 ಲಕ್ಷ ಡೋಸ್‌ ಕೋವಿಡ್‌ ಲಸಿಕೆ ಬಂದಿದೆ. 10 ಲಕ್ಷ ಡೋಸ್‌ ಬೆಂಗಳೂರಿಗೆ 5 ಲಕ್ಷ ಡೋಸ್‌ ಬೆಳಗಾವಿಗೆ ಬಂದಿದ್ದು ರಾಜ್ಯದಲ್ಲಿ ಲಸಿಕೆಯ ಕೊರತೆಯಿಲ್ಲ ಎಂದು ಸುಧಾಕರ್‌ ಸ್ಪಷ್ಟಪಡಿಸಿದರು.