ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿ

  •  ಸರ್ಕಾರದ ಉಚಿತ ಸೇವೆಗೆ ಸೇತುವೆಯಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆ
  • ವೈದ್ಯರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಕರೆ
  • ಕೊರೋನಾ ವಿರುದ್ಧದ ಯುದ್ಧದಲ್ಲಿ ವೈದ್ಯರೇ ಪ್ರಮುಖ ಯೋಧರು
Minister Sudhakar instruct to good treatment in Govt hospital snr

ಬೆಂಗಳೂರು (ಜೂ.03):  ಕೊರೋನಾ ವಿರುದ್ಧದ ಯುದ್ಧದಲ್ಲಿ ವೈದ್ಯರೇ ಪ್ರಮುಖ ಯೋಧರು. ಸರ್ಕಾರದ ಉಚಿತ ಸೇವೆಗೆ ಸೇತುವೆಯಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆ ದೊರೆಯುವ ಮಟ್ಟಿಗೆ ಕೆಲಸ ಮಾಡಬೇಕು ಎಂದು ನೂತನವಾಗಿ ನೇಮಕಗೊಂಡಿರುವ ವೈದ್ಯರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಕರೆ ನೀಡಿದ್ದಾರೆ.

- ಈ ಮೂಲಕ ಸರ್ಕಾರಿ ಆಸ್ಪತ್ರೆಗಳ ಬಗೆಗಿನ ಜನರ ಮನೋಧೋರಣೆ ಬದಲಿಸಬೇಕು ಎಂದು ಹೇಳಿದರು.

ಆರೋಗ್ಯ ಇಲಾಖೆಯಿಂದ 715 ಹಿರಿಯ ತಜ್ಞರು, 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಸೇರಿದಂತೆ ಒಟ್ಟು 1,763 ವೈದ್ಯರ ನೇಮಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನೂತನ ವೈದ್ಯರನ್ನು ಉದ್ದೇಶಿಸಿ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಬುಧವಾರ ಸುಧಾಕರ್‌ ಮಾತನಾಡಿದರು.

ರಾಜ್ಯದಲ್ಲಿ 30 ಸಾವಿರ ದಾಟಿದ ಕೊರೋನಾ ಸಾವು ...

ಕೊರೋನಾ ಆರ್ಥಿಕ ಸಂಕಷ್ಟದ ನಡುವೆ ಐತಿಹಾಸಿಕ ರೀತಿಯಲ್ಲಿ ರಾಜ್ಯ ಸರ್ಕಾರವು ಕೇವಲ ಐದಾರು ತಿಂಗಳಲ್ಲಿ ವೈದ್ಯರ ನೇರ ನೇಮಕ ಮಾಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಗುಣಮಟ್ಟದ ಸೇವೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವುದಿಲ್ಲ ಎಂಬ ಭಾವನೆ ಜನರಲ್ಲಿದೆ. ಆದರೆ ವಾಸ್ತವವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬಹಳಷ್ಟುಮೂಲ ಸೌಕರ್ಯವಿದೆ.

ಹೊಸ ವೈದ್ಯರು ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ಕೆಲಸ ಮಾಡೇಕು. ಆ ಆಸ್ಪತ್ರೆಯನ್ನು ವಿಶ್ವ ದರ್ಜೆಯ ಆಸ್ಪತ್ರೆಯಾಗಿ ಪರಿವರ್ತಿಸಬೇಕು. ಕಾರ್ಪೊರೇಟ್‌ ವಲಯದ ಮಾದರಿಯಲ್ಲಿ ಕಾರ್ಯನಿರ್ವಹಿಸಿ, ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟಹೆಚ್ಚಿಸುವ ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು.

ಸರ್ಕಾರಿ ಆಸ್ಪತ್ರೆಗೆ ಬಡವರು, ಕೆಳ ಮಧ್ಯಮ ವರ್ಗದ ಜನರು ಬರುತ್ತಾರೆ. ಇಂತಹವರು ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬಾರದೆಂದು ಸರ್ಕಾರ ಉಚಿತ ಸೇವೆ ನೀಡುತ್ತಿದೆ. 1 ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯ ಇರಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ದೇಶದಲ್ಲಿ 1,511 ಮಂದಿಗೆ ಒಬ್ಬ ಅಲೋಪತಿ ವೈದ್ಯ ಇದ್ದಾರೆ ಎಂದು 15ನೇ ವೇತನ ಆಯೋಗ ತಿಳಿಸಿದೆ. ಹೀಗಾಗಿ ಸರ್ಕಾರದ ವೈದ್ಯರ ನೇಮಕ ಕ್ರಮ ಸಕಾಲಿಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿ:

ರಾಜ್ಯದಲ್ಲಿ 2,508 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 204 ಸಮುದಾಯ ಕೇಂದ್ರಗಳಿವೆ. ಹಳ್ಳಿಗಳಲ್ಲಿ ಕಡ್ಡಾಯ ಸೇವೆ ಸಲ್ಲಿಸುವ ಕಾನೂನು ಹೇರಿಕೆಗೆ ಅವಕಾಶ ನೀಡದೆ ವೈದ್ಯರು ಈ ಭಾಗಗಳಲ್ಲಿ ಕೆಲಸ ಮಾಡಬೇಕು. ಇದರಿಂದ ಹಳ್ಳಿ ಜನರು ಆರೋಗ್ಯ ಸೇವೆಗಾಗಿ ದೂರದ ಪ್ರದೇಶಕ್ಕೆ ಪ್ರಯಾಣಿಸುವ ಅಗತ್ಯವೇ ಇರುವುದಿಲ್ಲ ಎಂದರು.

ವೈದ್ಯರೇ ದೇವರು:

ವೈದ್ಯೋ ನಾರಾಯಾಣೋ ಹರಿ ಎಂದರೆ ವೈದ್ಯರೇ ದೇವರು. ಅನಾರೋಗ್ಯಕ್ಕೆ ಒಳಗಾದಾಗ ನೋವು ಕಡಿಮೆ ಮಾಡಿ, ಧೈರ್ಯ ಆತ್ಮವಿಶ್ವಾಸ ತುಂಬುವವರು ವೈದ್ಯರು, ಶ್ರೀಗಂಧದ ಕೊರಡು ತನ್ನನ್ನು ಸವೆಸಿಕೊಂಡಂತೆ ವೈದ್ಯರು ತನು, ಮನ ಅರ್ಪಿಸಿ ಕೆಲಸ ಮಾಡಿದರೂ ಜನರು ವೈದ್ಯರ ಮೇಲೆ ವಿಶ್ವಾಸ ಕಡಿಮೆ ಮಾಡಿಕೊಂಡಿದ್ದಾರೆ. ಈ ಮನಃಸ್ಥಿತಿಯನ್ನು ಬದಲಿಸುವಂತೆ ಕೆಲಸ ಮಾಡಬೇಕು.

ಕೊರೋನಾ ಎರಡನೇ ಅಲೆಯಿಂದ ದೇಶದಲ್ಲಿ 600ಕ್ಕೂ ಹೆಚ್ಚು ವೈದ್ಯರು ಮೃತಪಟ್ಟಿದ್ದಾರೆ. ಇವರೆಲ್ಲರೂ ಕೊರೋನಾ ಯುದ್ಧದಲ್ಲಿ ಹುತಾತ್ಮರಾಧ ಯೋಧರು. ಇಂತಹ ಸನ್ನಿವೇಶ ತಪ್ಪಿಸಲು ವೈದ್ಯರು ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಬಗ್ಗೆಯೂ ಯೋಚಿಸಬೇಕು ಎಂದು ಹೇಳಿದರು. ಈ ವೇಳೆ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಆಯುಕ್ತ ತ್ರಿಲೋಕ್‌ ಚಂದ್ರ ಹಾಜರಿದ್ದರು.

ವೈದ್ಯರ ನೇಮಕಾತಿ ಐತಿಹಾಸಿಕ-ಸುಧಾಕರ್‌

ವೈದ್ಯರ ನೇಮಕಾತಿಯು ಮೂರು ಕಾರಣಗಳಿಂದಾಗಿ ಐತಿಹಾಸಿಕವಾಗಿದೆ ಎಂದು ಸಚಿವ ಸುಧಾಕರ್‌ ಬಣ್ಣಿಸಿದರು. ಇಲಾಖೆಯಿಂದ ಒಂದೇ ಸಲ 1763 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಇಲ್ಲಿಯವರೆಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದಲೇ ಪ್ರಥಮವಾಗಿ ನೇರ ನೇಮಕ ಮಾಡಿಕೊಳ್ಳಲಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ನೇಮಕ ಪ್ರಕ್ರಿಯೆ 6 ತಿಂಗಳೊಳಗೆ ಮುಗಿದಿರುವುದೂ ದಾಖಲೆಯೇ ಎಂದು ಸಚಿವರು ವಿವರಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios