Asianet Suvarna News Asianet Suvarna News

ಎಚ್ಚರ..! ಮತ್ತೆ ಮರುಕಳಿಸಲಿದೆ ಕೊರೋನಾ ಮಹಾಮಾರಿ

ರಾಜ್ಯದಲ್ಲಿ ಸೋಂಕು ಕಾಣಿಸಿಕೊಂಡ ಮಹಿಳೆಯಲ್ಲೇ ಮತ್ತೊಮ್ಮೆ ಸೋಂಕು ಪತ್ತೆಯಾಗುತ್ತಿದ್ದು, ಇದರಿಂದ ಈ ಬಗ್ಗೆ ಅಧ್ಯಯನ ನಡೆಸಲು ಸಚಿವರು ಸೂಚಿಸಿದ್ದಾರೆ. 

Minister Sudhakar Instruct to Clinical Study Over Coronavirus
Author
Bengaluru, First Published Sep 8, 2020, 7:35 AM IST

 ಬೆಂಗಳೂರು (ಸೆ.08): ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದವರಿಗೆ ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವೈದ್ಯಕೀಯ ಅಧ್ಯಯನ (ಕ್ಲಿನಿಕಲ್‌ ಸ್ಟಡಿ) ನಡೆಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಕೊರೋನಾ ಸೋಂಕು ಪರೀಕ್ಷೆಗಳ ಕುರಿತು ಟಾಸ್ಕ್‌ಫೋರ್ಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಫೋರ್ಟಿಸ್‌ ಆಸ್ಪತ್ರೆಯಲ್ಲಿ ಕೊರೋನಾದಿಂದ ಗುಣಮುಖರಾದ 27 ವರ್ಷದ ಮಹಿಳೆಗೆ ತಿಂಗಳ ಬಳಿಕ ಮತ್ತೊಮ್ಮೆ ಸೋಂಕು ದೃಢಪಟ್ಟಿದೆ. ಇತರೆ ದೇಶಗಳಲ್ಲೂ ಇಂತಹ ಅಪರೂಪದ ಪ್ರಕರಣಗಳು ವರದಿಯಾಗಿದ್ದು, ಒಂದೊಂದು ಕಡೆ ಒಂದೊಂದು ಕಾರಣ ಕೇಳಿ ಬಂದಿದೆ. ಬೆಂಗಳೂರಿನಲ್ಲೂ ಇಂತಹ ಪ್ರಕರಣ ಬೆಳಕಿಗೆ ಬಂದಿರುವುದು ಆತಂಕಕಾರಿಯಾಗಿದ್ದು, ಸೂಕ್ಷ್ಮ ರೀತಿಯಲ್ಲಿ ನಿರ್ವಹಿಸಲು ಕೂಡಲೇ ಅಧ್ಯಯನ ನಡೆಸುವಂತೆ ಸೂಚಿಸಿದರು.

ಕೊರೋನಾ ಗೆದ್ದ ನಳಿನ್ ಕುಮಾರ್ ಕಟೀಲ್ , ಆದ್ರೂ ಕೆಲವು ದಿನ ಆಚೆ ಬರಲ್ಲ

ನಿಖರ ಕಾರಣ ಬೇಕು: ಕೊರೋನಾ ಸೋಂಕು ತಗುಲಿ ಗುಣಮುಖನಾದ ವ್ಯಕ್ತಿಯ ದೇಹದಲ್ಲಿ ಪ್ಲಾಸ್ಮಾ ಉತ್ಪಾದನೆಯಾಗಲು ಕನಿಷ್ಠ 15 ದಿನಗಳ ಕಾಲಾವಕಾಶ ಬೇಕು. ಈ ಅವಧಿಯಲ್ಲಿ ಕೆಲವರಿಗೆ ಮತ್ತೊಮ್ಮೆ ಕೊರೋನಾ ಮರುಕಳಿಸುವ ಸಾಧ್ಯತೆ ಇದೆ. ಆದರೆ ಇದೇ ಕಾರಣದಿಂದ ಮರುಕಳಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಯೊಬ್ಬರು ವಿವರಣೆ ನೀಡಿದರು.

ಕೊರೋನಾಗೆ ಭಾರತದಲ್ಲಿ ಸತ್ತ ಡಾಕ್ಟರ್‌ಗಳೆಷ್ಟು ಗೊತ್ತಾ? ...

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಕೆ. ಸುಧಾಕರ್‌, ಮತ್ತೊಮ್ಮೆ ಕೊರೋನಾ ಬರಲು ಕಾರಣ ಏನೆಂಬುದರ ಬಗ್ಗೆ ನಿಖರತೆ ಬೇಕು. ಜೊತೆಗೆ ಇತರೆ ರಾಜ್ಯಗಳಲ್ಲಿ ಇಂಥ ವಿಶೇಷ ಪ್ರಕರಣಗಳಲ್ಲಿ ತೆಗೆದುಕೊಳ್ಳುತ್ತಿರುವ ಚಿಕಿತ್ಸಾ ಕ್ರಮದ ಬಗ್ಗೆ ಶೀಘ್ರವೇ ವರದಿ ಸಲ್ಲಿಸುವಂತೆ ಸೂಚಿಸಿದರು.

ಅಷ್ಟೆಅಲ್ಲದೆ, ಕೋವಿಡ್‌ನಿಂದ ಗುಣಮುಖರಾದವರ ಮೇಲೆ ಯಾವ ರೀತಿ ನಿಗಾ ವಹಿಸಲಾಗುತ್ತಿದೆ? ಅವರು ತೆಗೆದುಕೊಳ್ಳಬೇಕಾದ ಎಚ್ಚರಿಕೆ, ಅನುಸರಿಸ ಬೇಕಾದ ಜೀವನ ಕ್ರಮದ ಬಗ್ಗೆ ಯಾವ ರೀತಿ ಅರಿವು ಮೂಡಿಸಲಾಗಿದೆಯೇ ಎಂದು ಪ್ರಶ್ನಿಸಿದರು.

ನಗರಾಭಿವೃದ್ಧಿ ಸಚಿವರಿಗೆ ಬೂತ್‌ಮಟ್ಟದ ಸಮಿತಿ ಜವಾಬ್ದಾರಿ:

ಕೊರೋನಾ ನಿಯಂತ್ರಣ ಬೂತ್‌ ಮಟ್ಟದಿಂದ ಮಾತ್ರ ಸಾಧ್ಯ ಎಂಬುದನ್ನು ಮೊದಲಿನಿಂದ ಪ್ರತಿಪಾದಿಸಿದ್ದೇನೆ. ಬೂತ್‌ ಮಟ್ಟದಲ್ಲಿ ಸಮಿತಿ ರಚಿಸಿ, ಜಾಗೃತಿ ಮೂಡಿಸುವುದು ಹಾಗೂ ಕೊರೋನಾ ಪರೀಕ್ಷೆ ನಡೆಸುವುದರಿಂದ ಸುಲಭವಾಗಿ ಸೋಂಕು ನಿಯಂತ್ರಿಸಬಹುದು. ಈ ಜವಾಬ್ದಾರಿಯನ್ನು ನಗರಾಭಿವೃದ್ಧಿ ಸಚಿವರಿಗೆ ವಹಿಸಿದರೆ ನಿರ್ವಹಣೆ ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟರು.

Follow Us:
Download App:
  • android
  • ios