ವಿಧಾನಸಭೆ (ಮಾ.23):  ರಾಜ್ಯದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌, ಡಾ.ಬಾಬು ಜಗಜೀವನ್‌ರಾಂ ಭವನಗಳ ನಿರ್ಮಾಣ ಸಂಬಂಧ ಶಾಸಕರು ತಮ್ಮ ಕ್ಷೇತ್ರದಲ್ಲಿ ನಿವೇಶನ ಹುಡುಕಿಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಸಮುದಾಯ ವಿಚಾರದಲ್ಲಿ ವಿವಿಧ ಸಮಸ್ಯೆಗಳ ಇತ್ಯರ್ಥಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಿ ಎಂದೂ ಮನವಿ ಮಾಡಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ಈಶ್ವರ್‌ ಖಂಡ್ರೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಮುದಾಯ ಭವನಗಳನ್ನು ನಿರ್ಮಿಸಲು ಹಣಕಾಸಿನ ಕೊರತೆ ಇಲ್ಲ. ಆದರೆ, ಕೆಲವು ಕಡೆ ನಿವೇಶನ ಲಭ್ಯ ಇಲ್ಲ. ಶಾಸಕರು ತಮ್ಮ ಕ್ಷೇತ್ರದಲ್ಲಿ ನಿವೇಶನ ಹುಡುಕಿಕೊಟ್ಟರೆ, ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ಜರುಗಿಸಲಾಗುವುದು. ಸ್ಥಗಿತಗೊಂಡಿರುವ ಭವನಗಳ ಕುರಿತು ಪರಿಶೀಲನೆ ನಡೆಸಲಾಗುವುದು. ಇನ್ನು ಕೆಲವೆಡೆ ಅನುದಾನ ಬಿಡುಗಡೆಯಾಗಬೇಕಾಗಿದ್ದು, ಅದರ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿದ್ದಾರೋ, ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟಪಡಿಸಿಕೊಳ್ಳಬೇಕು. ಸುಳ್ಳು ಮಾಹಿತಿ ನೀಡಿ ಸದನದ ದಿಕ್ಕು ತಪ್ಪಿಸಬಾರದು ಎಂದು ಹೇಳಿದರು. ಆಗ ಶ್ರೀರಾಮುಲು ನೆರವಿಗೆ ಧಾವಿಸಿದ ಗೋವಿಂದ ಕಾರಜೋಳ, ಅಧಿಕಾರಿಗಳು ನೀಡಿರುವ ಮಾಹಿತಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎನ್ನುವುದರಲ್ಲಿ ತಪ್ಪೇನಿದೆ. ಒಂದು ವೇಳೆ ಅಂಕಿ-ಅಂಶಗಳು ಸರಿಯಾಗಿಲ್ಲದಿದ್ದರೆ ಪರಿಶೀಲಿಸಿ ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಮರ್ಥಿಸಿಕೊಂಡರು.

'ಶೀಘ್ರ ನಮ್ಮ ಬೇಡಿಕೆ ಈಡೇರಲಿದೆ ; ರಕ್ತದಲ್ಲಿ ಬರೆದುಕೊಡುವೆ' .

ಆಕ್ಷೇಪ:  ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಪ್ರತಿನಿಧಿಸುವ ಔರಾದ್‌ ವಿಧಾನಸಭಾ ಕ್ಷೇತ್ರಕ್ಕೆ 2019-20ನೇ ಸಾಲಿನಲ್ಲಿ ಒಟ್ಟು 18 ಸೇವಾಲಾಲ್‌ ಭವನಗಳನ್ನು ಮಂಜೂರು ಮಾಡಲಾಗಿದೆ. ಉಳಿದ ಕ್ಷೇತ್ರಗಳಿಗೆ ಭವನಗಳನ್ನು ಮಂಜೂರು ಮಾಡದಿರುವುದಕ್ಕೆ ಜೆಡಿಎಸ್‌ ಸದಸ್ಯ ಬಂಡೆಪ್ಪ ಕಾಶೆಂಪೂರ್‌ ಆಕ್ಷೇಪ ವ್ಯಕ್ತಪಡಿಸಿದರು. ಬೀದರ್‌ ಜಿಲ್ಲೆಯಲ್ಲಿನ ಉಳಿದ ಕ್ಷೇತ್ರಗಳಿಗೂ ಸೇವಾಲಾಲ್‌ ಭವನಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಕಾಂಗ್ರೆಸ್‌ ಸದಸ್ಯ ಈಶ್ವರ್‌ ಖಂಡ್ರೆ, 2017-18ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಬೀದರ್‌ ವ್ಯಾಪ್ತಿಯ 48 ಸ್ಥಳದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌, ಡಾ.ಬಾಬು ಜಗಜೀವನ ರಾಮ್‌ ಭವನಗಳನ್ನು ನಿರ್ಮಾಣ ಮಾಡಲು 5.74 ಕೋಟಿ ರು. ಮಂಜೂರು ಮಾಡಿದ್ದು, ಮೊದಲನೇ ಕಂತಾಗಿ 1.85 ಕೋಟಿ ರು. ಬಿಡುಗಡೆಯಾಗಿದೆ. ಈ ಪೈಕಿ ಕೇವಲ 32 ಲಕ್ಷ ರು. ಮಾತ್ರ ವೆಚ್ಚವಾಗಿದೆ. ಈ ಬಗ್ಗೆ ಸರ್ಕಾರವು ಸ್ಪಷ್ಟಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು, ಪರಿಶೀಲನೆ ನಡೆಸಲಾಗುವುದು ಎಂದರು.