ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಹನುಮ ಮಾಲಾಧಾರಿ ರಾಜು, ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಫೋಟೋ ಹಿಡಿದು ಅಚ್ಚರಿ ಮೂಡಿಸಿದ್ದಾನೆ. ತಾನು ಬಿಷ್ಣೋಯಿ ಅಭಿಮಾನಿ ಎಂದಿರುವ ಆತ, ಬಿಷ್ಣೋಯಿಯಿಂದ ದೇಶ ಉಳಿಯುತ್ತದೆ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.

ಕೊಪ್ಪಳ(ಡಿ.3): ಹನುಮನ ಜನ್ಮಸ್ಥಳವೆಂದು ನಂಬಲಾದ ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಅವರ ಫೋಟೋ ಹಿಡಿದು ಬಂದಿರುವ ಹನುಮ ಮಾಲಾಧಾರಿಯೊಬ್ಬರು ಗಮನ ಸೆಳೆದಿದ್ದಾರೆ.

ನಾನು ಲಾರೆನ್ಸ್ ಬಿಷ್ಣೋಯಿ ಅಭಿಮಾನಿ:

ಹೌದು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕೋಳಿವಾಡ ನಿವಾಸಿಯಾಗಿರುವ ರಾಜು ಎಂಬ ಹನುಮ ಭಕ್ತ ಈ ರೀತಿ ವಿವಾದಾತ್ಮಕ ಫೋಟೋ ಹಿಡಿದು ಅಂಜನಾದ್ರಿಗೆ ಆಗಮಿಸಿದ್ದಾರೆ. 9 ದಿನಗಳ ಕಾಲ ಹನುಮ ಮಾಲೆಯನ್ನು ಧರಿಸಿದ್ದ ರಾಜು, ಬಹಿರಂಗವಾಗಿ ತಾನು ಲಾರೆನ್ಸ್ ಬಿಷ್ಣೋಯಿಯವರ ಅಭಿಮಾನಿ ಎಂದು ಘೋಷಿಸಿಕೊಂಡಿದ್ದಾರೆ.

ಲಾರೆನ್ಸ್ ಬಿಷ್ಣೋಯಿ ಅವರಿಂದ ದೇಶ ಉಳಿಯುತ್ತೆ:

ಲಾರೆನ್ಸ್ ಬಿಷ್ಣೋಯಿ ಅವರಿಂದ ದೇಶ ಉಳಿಯುತ್ತದೆ" ಎಂಬ ಮನೋಭಾವ ತನಗಿದೆ ಎಂದು ರಾಜು ಹೇಳಿಕೊಂಡಿರುವುದು ಭಕ್ತಾದಿಗಳು ಮತ್ತು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಯಾರು ಲಾರೆನ್ಸ್ ಬಿಷ್ಣೋಯ್?

ಲಾರೆನ್ಸ್ ಬಿಷ್ಣೋಯಿ ಭಾರತದ ಒಬ್ಬ ನಟೋರಿಯಸ್ ಗ್ಯಾಂಗ್‌ಸ್ಟರ್. ಹರಿಯಾಣ ಮೂಲದವನಾದ ಲಾರೆನ್ಸ್, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದರೂ, ವಿದ್ಯಾರ್ಥಿ ರಾಜಕೀಯದ ದಿನಗಳಿಂದಲೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವನು. ಇವನ ಮೇಲೆ ಕೊಲೆ, ಸುಲಿಗೆ ಸೇರಿದಂತೆ ನೂರಾರು ಕ್ರಿಮಿನಲ್ ಪ್ರಕರಣಗಳಿವೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಇವನ ಹೆಸರು ಕೇಳಿಬಂದಿತ್ತು, ಮತ್ತು ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದರಿಂದ ಹಾಗೂ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. 

ಪ್ರಸ್ತುತ ಜೈಲಿನಲ್ಲಿದ್ದರೂ ಸಹ ಇವರು ತಮ್ಮ ಸಹಚರರ ಮೂಲಕ ತಮ್ಮ ಅಪರಾಧ ಜಾಲವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಮೇಲಾಗಿ ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡುವ, ದೇಶ ವಿರೋಧಿ ಹೇಳಿಕೆ ನೀಡುವವರಿಗೆ ಬೆದರಿಕೆ ಹಾಕುವುದರಿಂ ಒಂದಷ್ಟು ಹಿಂದೂ ಯುವಕರಿಗೆ ರೋಲ್ ಮಾಡೆಲ್ ಆಗಿ ಕಾಣಿಸಿಕೊಂಂಡಿದ್ದಾರೆ.