ಸಚಿವ ಸತೀಶ್ ಜಾರಕಿಹೊಳಿ ದಾವಣಗೆರೆಗೆ ಭೇಟಿ ನೀಡಿ, ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಹಾರ ಚುನಾವಣಾ ಫಲಿತಾಂಶ ಕಾಂಗ್ರೆಸ್‌ಗೆ ಪಾಠವಾಗಿದ್ದು, ಕರ್ನಾಟಕದಲ್ಲಿ ಅಹಿಂದ ಸಂಘಟನೆಯನ್ನು ಬಲಪಡಿಸಲಾಗುವುದು ಎಂದು ಅವರು ಹೇಳಿದರು.
ದಾವಣಗೆರೆ (ನ.15): ಸಿಎಂ ಬದಲಾವಣೆ ನಮ್ಮ ಮಟ್ಟದ ಚರ್ಚೆಯಲ್ಲ. ರಾಜ್ಯದಲ್ಲಿ ಯಾವುದೇ ಕ್ರಾಂತಿ ಇಲ್ಲ ಎಂದು ನಾನು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಇಂದು ದಾವಣಗೆರೆಯ ಹರಿಹರ ತಾಲೂಕಿನ ವಾಲ್ಮೀಕಿ ಗುರುಪೀಠಕ್ಕೆ ತಮ್ಮ ಹೊಸ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಬಸವಂತಪ್ಪ ಹಾಗೂ ದೇವೇಂದ್ರಪ್ಪ ಅವರೊಂದಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಿಎಂ ಬದಲಾವಣೆ ಎಲ್ಲಾ ಕಡೆ ಚರ್ಚೆ ಆಗುತ್ತಿದೆ. ಉತ್ತರ ಕೊಡುವವರು ಯಾರು? ಅದಕ್ಕೆ ಪರಿಹಾರ ಇಲ್ಲ. ರಾಜಕೀಯ ಬೆರಸಿದ್ರೇ ಏನ್ ಮಾಡೋದು? ಎಂದು ಪ್ರಶ್ನಿಸಿದರು.
ಬಿಹಾರಿಗಳ ಮನಸ್ಥಿತಿಯೇ ಬೇರೆ ಕನ್ನಡಿಗರದ್ದೇ ಬೇರೆ:
ಬಿಹಾರ ಚುನಾವಣಾ ಫಲಿತಾಂಶದ ಹಿನ್ನೆಲೆ ಕಾಂಗ್ರೆಸ್‌ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠವಾಗಿದೆ. ಆದರೆ ಬಿಹಾರಿಗಳ ಮನಸ್ಥಿತಿಯೇ ಬೇರೆ, ಕರ್ನಾಟಕದ ಜನರ ಮನಸ್ಥಿತಿಯೇ ಬೇರೆ. ಅಲ್ಲಿ ಎಲ್ಲರನ್ನೂ ಒಗ್ಗೂಡಿಸಲು ಸಾಧ್ಯವಿಲ್ಲ, ಇಲ್ಲಿ ಅಹಿಂದ ಒಗ್ಗೂಡಿಸಬಹುದು. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಎಂದಲ್ಲ, ಎಲ್ಲ ಕಡೆಯೂ ಸಂಘಟನೆ ಮಾಡುತ್ತಿದ್ದೇವೆ ಎಂದರು. ಅಹಿಂದ ಇಡೀ ದೇಶದಲ್ಲಿ ರಾಜ್ಯದಲ್ಲಿ ಇದೆ ಎಲ್ಲಾ ಕಡೆ ಇದೆ. ಉತ್ತರ ಕರ್ನಾಟಕ ಮಧ್ಯ ಕರ್ನಾಟಕ ಎಂದಲ್ಲ, ಎಲ್ಲ ಕಡೆ ಅಹಿಂದ ಸಂಘಟನೆ ಮಾಡುತ್ತಿದ್ದೇವೆ ಎಂದರು.
ಸಸಿ ನೆಟ್ಟು ನೀರುಣಿಸಿ ತಿಮ್ಮಕ್ಕ ಅವರಿಗೆ ಸಂತಾಪ:
ಸಸಿ ನೆಟ್ಟು ನೀರುಣಿಸುವ ಮೂಲಕ ಸಾಲುಮರದ ತಿಮ್ಮಕ್ಕರವರಿಗೆ ಸಚಿವ ಸತೀಶ ಜಾರಕಿಹೊಳಿ ಸಂತಾಪ ಸೂಚಿಸಿದರು. ಈ ವೇಳೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸಾಥ್ ನೀಡಿದರೆ, ಬೆಳ್ಳೂಡಿ ಕಾಗಿನೆಲೆ ಗುರುಪೀಠದಲ್ಲಿ ನಿರಂಜನಾನಂದಪುರಿ ಸ್ವಾಮೀಜಿ ಸಾಥ್ ನೀಡಿದರು.
ಸಾಲುಮರದ ತಿಮ್ಮಕ್ಕರವರು ನಮ್ನನ್ನು ಅಗಲಿದ್ದಾರೆ. ತಿಮ್ಮಕ್ಕ ಎಂದರೆ ಕರ್ನಾಟಕದ ಹೆಮ್ಮೆ ಹಾಗೂ ಐಡೆಂಟಿಟಿ. ಹಳ್ಳಿಯಲ್ಲಿ ಹುಟ್ಟಿ ನಗರದಲ್ಲಿ ಇರದ ಪರಿಸರದ ಬಗ್ಗೆ ಕಾಳಜಿವಹಿಸುತ್ತಿದ್ದರು. ಯಾವುದೇ ಪರಿಸರ ಸಂಬಂಧ ಕಾರ್ಯಕ್ರಮಗಳಿದ್ದರೆ ಮೊದಲು ಅವರನ್ನು ನೆನಪಿಸಿಕೊಳ್ಳುತ್ತೇವೆ. ಅವರ ಹೆಸರಿನ ಮೇಲೆ ಹೆಚ್ಚು ಕಾರ್ಯಕ್ರಮ ನಡೆಯುತ್ತಿದ್ದವು. ಸಾಲುಮರದ ತಿಮ್ಮಕ್ಕ ಮುಂದಿನ ಪೀಳಿಗೆಗೆ ಹಸಿರು ಉಳಿಸಿಹೋಗಿದ್ದಾರೆ ಎಂದು ಸ್ಮರಿಸಿದರು.


