ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ (ನ.13): ರಾಜ್ಯ ಕಾಂಗ್ರೆಸ್‌ನಲ್ಲಿ ನ.20ಕ್ಕೆ ಕಾಂತ್ರಿಯಾಗುತ್ತದೆ ಎಂಬ ಚರ್ಚೆ ಬೆನ್ನೆಲ್ಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿ ಪ್ರವಾಸ ಕೈಗೊಂಡಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಮುಖ್ಯಮಂತ್ರಿ ಬದಲಾವಣೆ ಕೂಗು ಜೋರಾಗಿ ಕೇಳಿಬರುತ್ತಿದೆ. ಇದರ ನಡುವೆಯೇ ಸಚಿವ ಸುಂಪುಟ ಪುನಾರಚನೆ ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಲಿದ್ದಾರೆ ಎಂಬ ಹೇಳಿಕೆ ರಾಜ್ಯ ರಾಜಕಾರಣಲ್ಲಿ ಬಿರುಗಾಳಿ ಎಬ್ಬಿಸಿತ್ತು.
ಈ ಎಲ್ಲ ರಾಜಕೀಯ ಬೆಳವಣಿಗೆಗೆಳ ಮಧ್ಯೆ ಸಚಿವ ಸತೀಶ್ ಅವರು ದೆಹಲಿ ಪ್ರವಾಸ ಕೈಗೊಂಡು ಸುರ್ಜೇವಾಲಾ ಅವರ ಮನೆಗೆ ಭೇಟಿ ನೀಡಿ, ಪ್ರಸ್ತುತ ರಾಜ್ಯ ರಾಜಕಾರಣದ ಕುರಿತು ಮಹತ್ವದ ಚರ್ಚೆ ನಡೆಸಿ಼ದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ಪುನಾರಚನೆ, ಮುಖ್ಯಮಂತ್ರಿ ಬದಲಾವಣೆ ಕುರಿತು ಸಚಿವರು, ಶಾಸಕರು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಏತ್ಮಧ್ಯೆ, ದೆಹಲಿಯ ಸುರ್ಜೇವಾಲಾ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಸಚಿವ ಜಾರಕಿಹೊಳಿ ಅವರು ರಾಜ್ಯ ರಾಜಕೀಯ, ನಾಯಕತ್ವ ಬದಲಾವಣೆ ಸೇರಿದಂತೆ ಮತ್ತಿತರ ಮಹತ್ವದ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ಹಿಡಿತ ಹೊಂದಿರುವ ಸಚಿವ ಸತೀಶ ಜಾರಕಿಹೊಳಿ ಅವರು ಪ್ರಭಾವಿ ನಾಯಕರಾಗಿಯೂ ಹೊರಹೊಮ್ಮಿದ್ದಾರೆ. ಪಕ್ಷದ ಹೈಕಮಾಂಡ್‌ನೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಸ್ಥಾನಕ್ಕೂ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಈಗ ಸಿಎಂ ಪಟ್ಟಕ್ಕೆ ಅವರು ಪೈಪೋಟಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನವೆಂಬರ್ 20ರ ಕ್ರಾಂತಿ ನಡುವೆಯೇ ಈ ಮಹತ್ವದ ಭೇಟಿ ಭಾರೀ ಚರ್ಚೆಗೆ ಎಡೆಮಾಡಿದೆ. ಅಲ್ಲದೇ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ರಾಜ್ಯ ರಾಜಕಾರಣದಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳುವ ಪ್ರಯತ್ನವನ್ನು ಸಚಿವ ಸತೀಶ್ ಜಾರಕಿಹೊಳಿ ಮಾಡುತ್ತಿದ್ದಾರೆ ಎಂಬ ಚರ್ಚೆಗಳು ಕಾಂಗ್ರೆಸ್ ವಲಯಲ್ಲಿ ಕೇಳಿಬರುತ್ತಿವೆ.
ದಿಢೀರ್ ದೆಹಲಿ ಪ್ರವಾಸ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇದೀಗ ಸತೀಶ ಜಾರಕಿಹೊಳಿ ದಿಢೀರ್ ದೆಹಲಿ ಪ್ರವಾಸ ಕೈಗೊಂಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಇತ್ತೀಚೆಗೆ, ಸಚಿವ ಸತೀಶ ಜಾರಕಿಹೊಳಿ ಅವರು ಮೂರು ದಿನ ದೆಹಲಿ ಪ್ರವಾಸ ಕೈಗೊಂಡಿದ್ದರು. ಆದರೆ, ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ನಾಯಕರ ಲಭ್ಯವಾಗದ ಕಾರಣ ತಮ್ಮ ದೆಹಲಿ ಪ್ರವಾಸವನ್ನು ಮುಂದೂಡಿದ್ದರು.
