ಕಾಂಗ್ರೆಸ್‌ ಪಕ್ಷದೊಳಗೆ ಯಾವುದೇ ಕ್ರಾಂತಿಯೂ ಇಲ್ಲ, ಏನೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ಹೇಳಿದ್ದಾರೆ. ಹಾಗಿದ್ದ ಮೇಲೆ ಯಾವ ಕ್ರಾಂತಿಯೂ ಇಲ್ಲ, ಏನೂ ಇಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರು (ನ.09): ಕಾಂಗ್ರೆಸ್‌ ಪಕ್ಷದೊಳಗೆ ಯಾವುದೇ ಕ್ರಾಂತಿಯೂ ಇಲ್ಲ, ಏನೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ಹೇಳಿದ್ದಾರೆ. ಹಾಗಿದ್ದ ಮೇಲೆ ಯಾವ ಕ್ರಾಂತಿಯೂ ಇಲ್ಲ, ಏನೂ ಇಲ್ಲ. ನಾನೂ ಹಿಂದಿನಿಂದಲೂ ಅದನ್ನೇ ಹೇಳುತ್ತಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್‌ ಜಾರಕಿಹೊಳಿ ಅವರು, ರಾಜ್ಯ ಸರ್ಕಾರ ಅಥವಾ ಕಾಂಗ್ರೆಸ್‌ ಪಕ್ಷದೊಳಗೆ ಯಾವುದೇ ಕ್ರಾಂತಿ ನಡೆಯುವುದಿಲ್ಲ ಎಂದು ಎಲ್ಲ ನಾಯಕರು ಹೇಳಿದ್ದಾರೆ. ಎಲ್ಲರೂ ಇಲ್ಲ ಎಂದ ಮೇಲೆ ಇನ್ನೇನಿದೆ. ಯಾವ ಕ್ರಾಂತಿಯೂ ಇಲ್ಲ, ಏನೂ ಇಲ್ಲ. ನಾನೂ ಅದನ್ನೇ ಹೇಳುತ್ತಿದ್ದೇನೆ ಎಂದು ಹೇಳಿದರು.

ನಾನು ಸದ್ಯ ದೆಹಲಿಗೆ ಹೋಗುತ್ತಿಲ್ಲ: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ದೆಹಲಿ ಪ್ರವಾಸ ಕೊನೆಗಳಿಗೆಯಲ್ಲಿ ರದ್ದುಗೊಂಡಿದ್ದು, ಈ ಬಗ್ಗೆ ಅವರೇ ಪ್ರತಿಕ್ರಿಯಿಸಿ ‘ಸದ್ಯ ನಾನು ದೆಹಲಿಗೆ ಹೋಗುವುದಿಲ್ಲ. ಜಿಲ್ಲೆಯಲ್ಲಿಯೇ ಇರುತ್ತೇನೆ. ಅವಶ್ಯಕತೆ ಬಂದಾಗ ದೆಹಲಿಗೆ ಹೋಗುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರದಿಂದ 3 ದಿನ ದೆಹಲಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದ ಸತೀಶ್ ಜಾರಕಿಹೊಳಿ ತಮ್ಮ ದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ನವೆಂಬರ್‌ನಲ್ಲಿ ಕ್ರಾಂತಿ ನಡೆಯುತ್ತದೆ ಎಂಬ ವದಂತಿ ನಡುವೆಯೇ ಸತೀಶ ಅವರ ದೆಹಲಿ ಪ್ರವಾಸ ತೀವ್ರ ಕುತೂಹಲ ಕೆರಳಿಸುವಂತೆ ಮಾಡಿತ್ತು. ಆದರೆ, ಬಿಹಾರದಲ್ಲಿ ನಡೆಯುತ್ತಿರುವ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್‌ ಲಭ್ಯವಾಗದ ಕಾರಣ ತಮ್ಮ ದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದ್ದು, ಪ್ರಸ್ತುತ ಸತೀಶ್‌ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಪ್ರವಾಸ ಮುಂದುವರೆಸಿದ್ದಾರೆ.

ಬೆಳಗಾವಿ ಜಿಲ್ಲಾ ವಿಭಜನೆ ಕುರಿತು ಶೀಘ್ರದಲ್ಲಿ ನಿರ್ಧಾರ

ಬೆಳಗಾವಿ ಜಿಲ್ಲಾ ವಿಭಜನೆ ಪರ ನಾವು ಇದ್ದೇವೆ. ಶೀಘ್ರದಲ್ಲಿಯೇ ಸರ್ಕಾರ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ವಿಭಜನೆ ಆಗಬೇಕೆಂದು ಜಿಲ್ಲೆಯ ಎಲ್ಲಾ ನಾಯಕರು ಸರ್ಕಾರಕ್ಕೆ ತಿಳಿಸಿದ್ದೇವೆ. ನಾನು ಸರ್ಕಾರಕ್ಕೆ ಒತ್ತಡ ಹಾಕಿದ್ದೇನೆ. ಆದಷ್ಟು ಬೇಗ ಸರ್ಕಾರ ಈ ಕುರಿತು ನಿರ್ಧಾರ ಕೈಗೊಳ್ಳುತ್ತದೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಮಳೆ ನಿಲ್ಲದ ಕಾರಣ ರಸ್ತೆ ದುರಸ್ತಿ ಮಾಡಲು ಆಗುತ್ತಿಲ್ಲ. ಬಹಳಷ್ಟು ರಸ್ತೆಗಳು ಹಾಳಾದ ಬಗ್ಗೆ ನಮ್ಮ ಗಮನಕ್ಕೂ ಇದೆ. ಇಷ್ಟೊತ್ತಿಗೆ ಮಳೆ ನಿಲ್ಲಬೇಕಾಗಿತ್ತು. ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ರಸ್ತೆ ದುರಸ್ತಿಗೆ ಕೈಗೊಳ್ಳಲಾಗಿದೆ. ಮಳೆ ನಿಂತ ಮೇಲೆ ಬೆಳಗಾವಿಯಲ್ಲೂ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್, ಕೆಪಿಸಿಸಿ ಕಾರ್ಯದರ್ಶಿ ಸುನೀಲ್‌ ಹಣಮನ್ನವರ ಇದ್ದರು.