ನಮ್ಮ ಭಾರತೀಯ ಸೇನೆ ಎಂಥದ್ದೇ ಸಂದರ್ಭದಲ್ಲಿ ದೇಶವನ್ನು ರಕ್ಷಿಸಿದೆ. ಪಾಕಿಸ್ತಾನದ ವಿರುದ್ಧ ದಾಳಿ ನಡೆಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.
ಬೆಂಗಳೂರು (ಮೇ.15): ನಮ್ಮ ಭಾರತೀಯ ಸೇನೆ ಎಂಥದ್ದೇ ಸಂದರ್ಭದಲ್ಲಿ ದೇಶವನ್ನು ರಕ್ಷಿಸಿದೆ. ಪಾಕಿಸ್ತಾನದ ವಿರುದ್ಧ ದಾಳಿ ನಡೆಸಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.
ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಬೆಳವಣಿಗೆಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಿಸಿದ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಡವಳಿಕೆಯನ್ನು ತೀವ್ರವಾಗಿ ಟೀಕಿಸಿದರು.
ಎಲ್ಲರಿಗಿಂತಲೂ ಮೋದಿ ಸುಪ್ರೀಂ ಎಂದು ಭಾವಿಸಿದ್ದಾರೆಯೇ?
ಪಹಲ್ಗಾಮ್ ಘಟನೆಯ ನಂತರ ಪ್ರಧಾನಮಂತ್ರಿ ಮೋದಿ ಸೌದಿ ಅರೇಬಿಯಾದಿಂದ ವಾಪಸ್ ಬಂದರು, ಬಿಹಾರಕ್ಕೆ ಹೋಗಿ ಚುನಾವಣಾ ಭಾಷಣ ಮಾಡಿದರು. ಆದರೆ ಆಲ್ ಪಾರ್ಟಿ ಮೀಟಿಂಗ್‌ಗೆ ಬರಲಿಲ್ಲ. ಒಂದು ಸುದ್ದಿಗೋಷ್ಠಿ ಕೂಡ ನಡೆಸಲಿಲ್ಲ. ಇದು ದೇಶಕ್ಕೆ ಯಾವ ಸಂದೇಶ ಕೊಡುತ್ತದೆ? ಎಲ್ಲರಿಗಿಂತಲೂ ಮೋದಿ ಸುಪ್ರೀಂ ಎಂದು ಭಾವಿಸಿದ್ದಾರೆಯೇ? ಎಂದು ತೀವ್ರವಾಗಿ ಟೀಕಿಸಿದರಲ್ಲದೇ ಕದನ ವಿರಾಮ ಘೋಷಣೆಯನ್ನು ವಿರೋಧಿಸಿದರು.
ಇದನ್ನೂ ಓದಿ: Interview | ಪಹಲ್ಗಾಂಗೆ ಮೋದಿ ಯಾಕೆ ಹೋಗಲಿಲ್ಲ? : ಸಂತೋಷ್ ಲಾಡ್
'ಪಾಕಿಸ್ತಾನ ಬೇಡಿಕೊಂಡಿತು ಹೀಗಾಗಿ ಕದನ ವಿರಾಮ ಘೋಷಿಸಲಾಯಿತು'ಎಂದಿದ್ದಾರೆ. ಆದರೆ ಘೋಷಣೆಯಾದ ನಂತರವೂ ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡಿತು. ಇದರ ಬಗ್ಗೆ ಯಾಕೆ ಚರ್ಚೆಯಾಗಲಿಲ್ಲ. ಸೌದಿ ಅರೇಬಿಯಾದಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ನಾನೇ ಕದನ ವಿರಾಮ ಮಾಡಿಸಿದೆ' ಎಂದು ಪದೇಪದೆ ಹೇಳಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದೊಂದಿಗೆ ವ್ಯಾಪಾರದ ವ್ಯಾಪಾರ ಮಾಡುವುದಾಗಿ ಹೇಳಿ ಕದನ ವಿರಾಮ ಘೋಷಿಸಲು ಕಾರಣವಾಗಿದ್ದೇನೆ ಎಂದು ಟ್ರಂಪ್ ಹೇಳಿಕೊಂದಿದ್ದಾರೆ. ಆದರೆ ಪ್ರಧಾನಮಂತ್ರಿ ಮೋದಿ ಈ ಬಗ್ಗೆ ಏಕೆ ಮೌನವಾಗಿದ್ದಾರೆ? ಎಂದು ಆಕ್ಷೇಪಿಸಿದರು.
ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ:
140 ಕೋಟಿ ಜನರು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂದು ಬಯಸಿದ್ದರು. ಆದರೆ ಟ್ರಂಪ್ ಹೇಳಿದಂತೆ ಭಾರತ ಕೇಳುತ್ತಿದೆ. ಬಿಜೆಪಿಯವರು ತಿರಂಗಾ ಯಾತ್ರೆ ಬಿಟ್ಟು ಟ್ರಂಪ್ ಯಾತ್ರೆ ಮಾಡಲಿ. 11 ವರ್ಷಗಳಿಂದ ಮೋದಿಯವರದ್ದೇ ಕ್ಯಾಮರಾ, ಅವರು ಹೇಳಿದ್ದೇ ಮಾತು. ಪಂಚಾಯತಿಯಿಂದ ಸಂಸತ್‌ವರೆಗೆ ಅವರನ್ನೇ ತೋರಿಸಲಾಗುತ್ತಿದೆ. ಇದು ಪಬ್ಲಿಸಿಟಿಗಾಗಿ ಯುದ್ಧವನ್ನೇ ಮಾಡಿದಂತಿದೆ. ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಅನಿಸುತ್ತಿಲ್ವಾ? ಎಂದು ತೀಕ್ಷ್ಣವಾಗಿ ಟೀಕಿಸಿದರು.
ರಾಹುಲ್ ಗಾಂಧಿಗೆ ಬೆಂಬಲ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕದನ ವಿರಾಮಕ್ಕೆ ಕಾರಣವೇನು ಈ ವಿಷಯದಲ್ಲಿ ಚರ್ಚೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಯುದ್ಧದ ವೇಳೆ ನಾವು ಪ್ರಧಾನಮಂತ್ರಿ ಮೋದಿಗೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ಬಹುಶಃ ಇಷ್ಟು ಬೆಂಬಲ ಯಾರಿಗೂ ಸಿಕ್ಕಿರಲಿಲ್ಲ. ಆದರೆ, ಕದನ ವಿರಾಮ ಏಕಾಏಕಿ ಘೋಷಿಸಿದ್ದೇಕೆ? ಯಾರ ಒತ್ತಡದಿಂದ ಘೋಷಿಸಲಾಯ್ತು? ಅಮೆರಿಕಾದ ಮಧ್ಯಪ್ರವೇಶದಿಂದಲೇ ಇದು ಆಯಿತೇ? ಅಮೆರಿಕ ಹೇಳಿದಂತೆ ಮೋದಿ ಕೇಳುತ್ತಾರೆ? ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಬೇಕು' ಎಂದು ಒತ್ತಾಯಿಸಿದರು.
ಪಾಕಿಸ್ತಾನದ ಶರಣಾಗತಿಯ ಪ್ರಶ್ನೆ
"ಪಾಕಿಸ্তಾನ ಶರಣಾಗಿದೆ ಎಂದು ಮೋದಿ ಹೇಳಿದ್ದಾರೆ. ಆದರೆ ಕದನ ವಿರಾಮಕ್ಕೆ ಯಾಕೆ ಒಪ್ಪಿಕೊಳ್ಳಬೇಕು? ಘೋಷಣೆ ಮಾಡುವ ಮುಂಚೆ ಜನರ ಅಭಿಪ್ರಾಯ ಕೇಳಬೇಕಾಗಿಲ್ಲವೇ? ಯುದ್ಧವಾಗಬೇಕು, ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂದು ದೇಶದ ಜನರು ಬಯಸಿದ್ದರು. ಆದರೆ, ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಕ್ಕೆ ಸರಿಯಾದ ಕಾರಣವನ್ನು ಪ್ರಧಾನಮಂತ್ರಿಗಳು ತಿಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ ಸಚಿವರು. ಪಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಒಬ್ಬ ಭದ್ರತಾ ಸಿಬ್ಬಂದಿಯೂ ಇರಲಿಲ್ಲ. ಶ್ರೀನಗರದಲ್ಲಿ ಹೆಜ್ಜೆ ಹೆಜ್ಜೆಗೂ ಚೆಕ್‌ಪೋಸ್ಟ್ ಇದೆ, ಆದರೆ ಈ ದಾಳಿ ಹೇಗೆ ಸಾಧ್ಯವಾಯಿತು? ಕೇಂದ್ರ ಗೃಹ ಸಚಿವರ ರಾಜೀನಾಮೆಯನ್ನು ಯಾರೂ ಕೇಳುತ್ತಿಲ್ಲ. ಇಂತಹ ದೊಡ್ಡ ಘಟನೆಯಾದರೂ ಪ್ರಧಾನಮಂತ್ರಿಗಳು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಾರೆ ಎಂದರೆ ಏನು ಹೇಳಬೇಕು? ಎಂದು ಕಿಡಿಕಾರಿದರು.
ಇದನ್ನೂ ಓದಿ: Pahalgam terror attack: 'ಈಗ ಮಾತಾಡಿದ್ರೆ ರಾಜಕೀಯ ಆಗುತ್ತೆ..' ಉಗ್ರರ ದಾಳಿ ಬಗ್ಗೆ ಸಂತೋಷ್ ಲಾಡ್ ಹೇಳಿದ್ದೇನು?
ನಮ್ಮ ದೇಶವನ್ನು ವ್ಯಾಪಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆಯೇ?
ಇಂದಿರಾ ಗಾಂಧಿಯವರ ಆಡಳಿತದಲ್ಲೂ ಅಮೆರಿಕ ಮಧ್ಯಪ್ರವೇಶಿಸಲು ಹವಣಿಸಿತು ಆದರೆ ಇಂತಹ ಒತ್ತಡಗಳಿಗೆ ತಲೆಕೆಡಿಸಿಕೊಳ್ಳಲಿಲ್ಲ. ಮೋದಿಯವರು ಆ ರೀತಿಯ ತೀರ್ಮಾನ ಕೈಗೊಳ್ಳಬೇಕಿತ್ತು. ಯುದ್ಧ ಯಾಕೆ ಬೇಡ? ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದು ತಪ್ಪೇ? ಈ ಬಗ್ಗೆ ಸಂಸತ್‌ನಲ್ಲಿ ಸುದೀರ್ಘ ಚರ್ಚೆ ನಡೆಯಬೇಕು. ಪ್ರಧಾನಮಂತ್ರಿಗಳು ದೇಶದ ಜನರಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಸಂತೋಷ್ ಲಾಡ್ ಅವರ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿಯಿಂದ ಈ ಆ ಆರೋಪಗಳಿಗೆ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್‌ನಲ್ಲಿ ತಿಳಿಸಿ!


