ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು ೧೩,೦೦೦ ಶಿಕ್ಷಕರ ನೇಮಕಾತಿಯನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಘೋಷಿಸಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಬಳ್ಳಾರಿ: ಮುಂಬರುವ ದಿನಗಳಲ್ಲಿ 13 ಸಾವಿರ ಶಿಕ್ಷಕರ ನೇಮಕಾತಿ ಆರಂಭಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ನಮ್ಮ ಸರ್ಕಾರ ಶಾಲೆಗಳಿಗೆ ಮೂಲಭೂತ ಸೌಕರ್ಯ, ಗುಣಮಟ್ಟ ಶಿಕ್ಷಣದ ಬೋಧನೆಗೆ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಸಲು ನಿರ್ಧರಿಸ ಲಾಗಿದೆ. ಇದಕ್ಕೆ ಮುಖ್ಯಮಂತ್ರಿಯವರು ಸಮ್ಮತಿ ನೀಡಿದ್ದಾರೆ. ಹೆಚ್ಚಿನ ಶಿಕ್ಷಕರನ್ನು ಭಾಗಕ್ಕೆ ನೀಡಲಾಗುತ್ತಿದೆ ಎಂದು ಹೇಳಿದರು.
ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ:
ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಶೇಷ ಜವಾಬ್ದಾರಿ ವಹಿಸಲಾಗಿದ್ದು, ಶಾಲಾ ಸಮಯ ಹೊರತುಪಡಿಸಿ, ಸಂಜೆ ಸಮಯದಲ್ಲೂ ಮಕ್ಕಳಿಗೆ ವಿಶೇಷ ತರಗತಿಗಳ ಮೂಲಕ ಅಭ್ಯಾಸಿಸಲು ಮಾಡುತ್ತಿದ್ದಾರೆ ಎಂದರು. ರಾಜ್ಯದ ಶಾಲೆಗಳಲ್ಲಿ ಶಿಕ್ಷಕರಿಗೆ ಮುಖಚಹರೆ ಆಧಾರಿತ ಹಾಜರಾತಿ ಕಡ್ಡಾಯವಾಗಿ ಮಾಡಲಾಗುತ್ತಿದ್ದು, ಈಗಾ ಗಲೇ ಈ ಕುರಿತು ಪ್ರಾಯೋಗಿಕ ಹಂತ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ನೀಡಬೇಕು ಎಂದು ಹೇಳಿದರು.
ಮಕ್ಕಳ ಜೊತೆ ಬಿಸಿಯೂಟ ಸವಿದ ಮಧು ಬಂಗಾರಪ್ಪ
ಬಳ್ಳಾರಿ ನಗರದ ಪಟೇಲ್ ನಗರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಭೇಟಿ ನೀಡಿದ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳ ಜತೆ ಕುಳಿತು ಮಧ್ಯಾಹ್ನದ ಬಿಸಿಯೂಟ ಸವಿದರು. ಊಟದಲ್ಲಿ ಅನ್ನ, ಸಾಂಬಾರು ಜತೆಗೆ ಉಪ್ಪಿನಕಾಯಿ ಮತ್ತು ಮೊಟ್ಟೆ ನೀಡಲಾಗಿತ್ತು. ಇದೇ ವೇಳೆ ಊಟದ ರುಚಿಯ ಬಗ್ಗೆ ಮಕ್ಕಳನ್ನು ಕೇಳಿದರು. ಇದಕ್ಕೂ ಮುನ್ನ 7ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಶಾಲೆಯ ಶೈಕ್ಷಣಿಕ ಗುಣಮಟ್ಟ, ಆರೋಗ್ಯ ಹಾಗೂ ಶಾಲೆಯಲ್ಲಿ ದೊರೆಯುತ್ತಿರುವ ಸೌಕರ್ಯಗಳ ಕುರಿತು ಅಭಿಪ್ರಾಯ ಪಡೆದುಕೊಂಡರು.
ಮಕ್ಕಳು ದಿನಾಲೂ ಶಾಲೆಗೆ ಬರಬೇಕು. ಯಾವುದೇ ಕಾರಣಕ್ಕೂ ಶಾಲೆಗೆ ತಪ್ಪಿಸಬಾರದು. ಮನೆಯಲ್ಲಿ ಶಾಲೆಗೆ ಹೋಗಲು ಅಡ್ಡಿಪಡಿಸಿದರೆ, ನಾನು ತಪ್ಪದೇ ಶಾಲೆಗೆ ಹೋಗುತ್ತೇನೆ ಎಂದು ಹೇಳಬೇಕು. ಶಾಲೆಯಲ್ಲಿ ದೊರೆಯುವ ಶಿಕ್ಷಣ ಪಡೆದು, ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸಾಧಕರ ಪುಸ್ತಕಗಳನ್ನು ಓದಿ ಪ್ರೇರಣೆ ತೆಗೆದುಕೊಳ್ಳಬೇಕು. ಮಕ್ಕಳ ಭವಿಷ್ಯದ ಮೇಲೆ ಪೋಷಕರು ಸಾಕಷ್ಟು ಕನಸು ಕಂಡಿರುತ್ತಾರೆ. ಪೋಷಕರ ಕನಸು ನನಸಾಗಿಸಬೇಕು. ಓದಿನ ಜತೆಗೆ ಆರೋಗ್ಯದ ಕಡೆಗೂ ಗಮನ ನೀಡಬೇಕು. ಉನ್ನತ ಶಿಕ್ಷಣ ಪಡೆದುಕೊಂಡು ದೊಡ್ಡ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂವಿಧಾನ ಪೀಠಿಕೆ ಓದು:
ಸಂವಿಧಾನ ಪೀಠಿಕೆ ಯಾರು ಹೇಳುತ್ತೀರಾ ಎಂದು ಸಚಿವ ಎಸ್. ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳಿಗೆ ಕೇಳಿದಾಗ, ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ರಿತಿಕಾ ಅವರು ಸಂವಿಧಾನ ಪೀಠಿಕೆಯನ್ನು ವಿಸ್ತಾರವಾಗಿ ವಾಚನ ಮಾಡಿದಳು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತ ಡಾ. ಆಕಾಶ ಶಂಕರ, ಡಿಡಿಪಿಐ ಬಿ. ಉಮಾದೇವಿ, ವಿಷಯ ಪರಿವೀಕ್ಷಕಿ ವೇದಾವತಿ, ಶಾಲೆಯ ಮುಖ್ಯಗುರು ಜಯಶ್ರೀ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ ಇದ್ದರು.
