ಶಕ್ತಿ ಯೋಜನೆ ಜರಿದ ಮಾಜಿ ಸಿಎಂ ಕುಮಾರಸ್ವಾಮಿಗೆ 8 ಅಂಶಗಳ ಮೂಲಕ ತಿರುಗೇಟು ಕೊಟ್ಟ ಸಚಿವ ರಾಮಲಿಂಗಾರೆಡ್ಡಿ!
ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಬಗ್ಗೆ ಜರಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 8 ಅಂಶಗಳ ಮೂಲಕ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಜ.03): ಕಲ್ಯಾಣ ಕರ್ನಾಟಕದ ಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬಸ್‌ನ ಬಾಗಿನಲ್ಲಿ ನೇತಾಡುತ್ತಾ ಶಾಲೆ, ಕಾಲೇಜುಗಳಿಗೆ ಹೋಗುತ್ತಿರುವ ವಿಡಿಯೋ ಹಂಚಿಕೊಂಡು ರಾಜ್ಯ ಸರ್ಕಾರದ ಮೇಲೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆದಿದ್ದರು. ಇದಕ್ಕೆ 8 ಅಂಶಗಳನ್ನು ವರೆದು ತಿರುಗೇಟು ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ನಿಷ್ಕ್ರಿಯತೆಯನ್ನು ಬಟಾ ಬಯಲು ಮಾಡಿದ್ದಾರೆ.
ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು, 'ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್ ರೂಪಿಸಿ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೂ ಎರವಾಗಿವೆ. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ ಎಂದು ಹೊರಟ ಆ ಪಕ್ಷದ ಸರಕಾರ, ಅವರು ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ. ಇದು ಕರ್ನಾಟಕದ ಮಾದರಿ. ಶಕ್ತಿ ಯೋಜನೆಯ ಪರಿಣಾಮ ನಿತ್ಯವೂ ಶಾಲೆಗೆ ಹೋಗಬೇಕಾಗಿರುವ ಮಕ್ಕಳಿಗೆ ಬಸ್ಸುಗಳಲ್ಲಿ ಪ್ರಯಾಣಕ್ಕೆ ಸ್ಥಳಾವಕಾಶ ಸಿಗುತ್ತಿಲ್ಲ. ಶಿಕ್ಷಕರು, ಕಾರ್ಮಿಕರಿಗೂ ಇದೇ ದುಸ್ಥಿತಿ. ಶಕ್ತಿ ಯೋಜನೆ ಬಗ್ಗೆ ನನ್ನ ತಕರಾರು ಇಲ್ಲ. ಆದರೆ, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ. ರಾಜ್ಯ ಸರಕಾರ ಕೂಡಲೇ ಈ ಬಗ್ಗೆ ತುರ್ತುಕ್ರಮ ವಹಿಸಿ, ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ನನ್ನ ಆಗ್ರಹವಾಗಿದೆ' ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ಮುಂಜಾನೆ ಕೊರೆಯುವ ಚಳಿಗೆ ಹೆಚ್ಚುತ್ತಿರುವ ಅಪಘಾತ; ರಾತ್ರಿ ಪಾಳಿ ಚಾಲಕರಿಗೆ ಥರ್ಮೋ ಫ್ಲಾಸ್ಕ್ ನೀಡಲು KSRTC ನಿರ್ಧಾರ
ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿಯೇ ಎಂಟು ಅಂಶಗಳನ್ನು ಬರೆದು ಪೋಸ್ಟ್ ಮಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರೇ,
1. ಸಾರಿಗೆ ಸಂಸ್ಥೆಗಳ ಅಭಿವೃದ್ಧಿಯ ಎರಡು ಮುಖಗಳು ಅಂದರೆ, ಕಾಲಕಾಲಕ್ಕೆ ನೇಮಕಾತಿ ಹಾಗೂ ಹೊಸ ಬಸ್ಸುಗಳ ಸೇರ್ಪಡೆ.
2. ಆದರೆ ದುರಂತವೆಂದರೆ, ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13,888 ಹುದ್ದೆಗಳು ಖಾಲಿ ಇದ್ದರೂ (ನಿವೃತ್ತಿ ಇನ್ನಿತರೆ ಕಾರಣಗಳಿಂದ) ಒಂದೇ ಒಂದು ನೇಮಕಾತಿ ಆಗಿಲ್ಲ. ನಮ್ಮ ಸರ್ಕಾರ ಸಾರಿಗೆ ಸಂಸ್ಥೆಗಳಲ್ಲಿ 8,900 ಖಾಯಂ ನೇಮಕಾತಿಗೆ ಚಾಲನೆ ನೀಡಿದೆ.
3. ಮತ್ತೊಂದು ಮಹಾ ದುರಂತವೆಂದರೆ, ಸಂಸ್ಥೆಯಲ್ಲಿರುವ ಕೆಲವು ಡಕೋಟಾ ಬಸ್ಸುಗಳು, ಕಳೆದ 5 ವರ್ಷಗಳಲ್ಲಿ ಬಸ್‌ಗಳ ಸೇರ್ಪಡೆ ಆಗಿಲ್ಲ. ಕಳಪೆ ಸ್ಥಿತಿಯ ಬಸ್ಸುಗಳನ್ನು ಕಾರ್ಯಾಚರಣೆ ಮಾಡುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಸಾಧುವಲ್ಲದ ಕಾರಣ, ನಿಷ್ಕ್ರಿಯಗೊಳಿಸುವ ಕಾರ್ಯ ಒಂದೆಡೆಯಾದರೆ, 900 ಬಸ್ಸುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಕೂಡ ನಡೆದಿದೆ.
4. ಇದರೊಂದಿಗೆ ಸಾರಿಗೆ ಸಂಸ್ಥೆಗಳಲ್ಲಿ 5,900 ಹೊಸ ಬಸ್ಸುಗಳನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ನಾಲ್ಕು ನಿಗಮಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆ ತ್ವರಿತಗತಿಯಲ್ಲಿ ಸಾಗಿದೆ.
5. ಸಾರಿಗೆ ಸಂಸ್ಥೆಗಳು ಪ್ರತಿದಿನ 1,58,000 ಟ್ರಿಪ್ ಗಳನ್ನು ಕಾರ್ಯಾಚರಣೆಗೊಳಿಸುತ್ತಿವೆ. ಬಸ್ಸುಗಳ ಕಾರ್ಯಾಚರಣೆ ತೊಂದರೆಯಾಗಿರುವಂತಹ ಒಂದೆರಡು ಘಟನೆಗಳು ಈ ಹಿಂದೆಯೂ ವರದಿಯಾಗುತ್ತಿದ್ದವು. ಆದರೆ ಶಕ್ತಿ ಯೋಜನೆ ತರುವಾಯ, ಈ ಯೋಜನೆಯ ಯಶಸ್ಸನ್ನು ಸಹಿಸದೆ, ಈ ರೀತಿಯ ಒಂದೆರಡು ಘಟನೆಗಳಿಗೂ ಕೂಡ ಶಕ್ತಿ ಯೋಜನೆಯನ್ನು ದೂಷಿಸುವಂತಹ ವ್ಯವಸ್ಥಿತ ಅಪಪ್ರಚಾರವನ್ನು ವಿಪಕ್ಷಗಳು ಮಾಡುತ್ತಿರುವುದು ವಿಪರ್ಯಾಸ.
6. ಮಾನ್ಯ ಕುಮಾರಸ್ವಾಮಿ ಅವರು ಹೇಳಿದಂತೆ ಶಕ್ತಿ ಯೋಜನೆ ಉಪಯೋಗಿ ಯೋಜನೆ ಎಂದು ಒಪ್ಪಿಕೊಂಡರೂ ಸಹ, ಸಾರ್ವಜನಿಕರಿಗೆ ಸಮಗ್ರ ಸಾರಿಗೆ ಸೌಲಭ್ಯ ಒದಗಿಸುವಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನೇಮಕಾತಿ ಹಾಗೂ ಬಸ್ಸುಗಳ ಸೇರ್ಪಡೆಯಾಗದೇ ಇರುವ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಚಕಾರವೆತ್ತದಿರುವುದು ಆಶ್ಚರ್ಯಕರ ಸಂಗತಿ.
ಅಕ್ರಮ ಸಂಬಂಧದ ತವರಾಗುತ್ತಿದೆಯೇ ಬೆಂಗಳೂರು: 2023ರಲ್ಲಿ ನಡೆದ 207 ಕೊಲೆಗಳಲ್ಲಿ ಅಕ್ರಮ ಸಂಬಂಧದ್ದೇ ಹೆಚ್ಚು!
7. ಶಕ್ತಿ ಯೋಜನೆಯಿಂದ ಮಹಿಳೆಯರು ಪ್ರವಾಸ ಸ್ಥಳಗಳಿಗೆ ಮಾತ್ರ ಮುಗಿಬಿದ್ದಿದ್ದಾರೆ ಎಂದು ಅರ್ಥೈಸುವುದು ಕೆಟ್ಟ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಶಿಕ್ಷಣ, ಉದ್ಯೋಗ, ದೇವರ ದರ್ಶನ ಮುಂತಾದ ಕಾರಣಗಳಿಗಾಗಿ ನಾಡಿನ ಹೆಣ್ಣುಮಕ್ಕಳು ಈ ಯೋಜನೆಯನ್ನು ಉಪಯೋಗಿಸಿಕೊಂಡು ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈ ಯೋಜನೆ ತನ್ನದೇ ಆದ ಕೊಡುಗೆ ನೀಡಿದೆ.
8. ಶಕ್ತಿ ಯೋಜನೆ ಜಾರಿಯಾಗಿ 6 ತಿಂಗಳುಗಳಲ್ಲಿ 126 ಕೋಟಿಗೂ ಅಧಿಕ ಉಚಿತ ಟಿಕೆಟ್ ಪಡೆದು ಪ್ರಯಾಣಿಸಿದ ಪ್ರತಿಯೊಬ್ಬ ಮಹಿಳೆಯರು ಪ್ರವಾಸಿ ಸ್ಥಳಕ್ಕೆ ಹೋಗಿದ್ದಾರೆ ಎಂಬುದು ಅಕ್ಷಮ್ಯ. ಇದರಲ್ಲಿ ಶಾಲಾ ಕಾಲೇಜಿಗೆ, ಉದ್ಯೋಗಕ್ಕೆ, ಮನೆಕೆಲಸ, ಗಾರ್ಮೆಂಟ್ ಫ್ಯಾಕ್ಟರಿಗೆ ಹೋಗುವ ವಿದ್ಯಾರ್ಥಿನಿಯರು/ ಮಹಿಳೆಯರು ಸೇರಿದ್ದಾರೆ ಎಂಬುದನ್ನು ಮಾನ್ಯ ಶ್ರೀ ಕುಮಾರಸ್ವಾಮಿಯವರು ಮರೆಯಬಾರದು.
ಒಟ್ಟು ಎಂಟು ಅಂಶಗಳನ್ನು ಬರೆದು ಅದರಲ್ಲಿ ಬಿಜೆಪಿ ಸರ್ಕಾರ ತಪ್ಪು ಮಾಡಿರುವುದನ್ನು ಎತ್ತಿ ತೋರಿಸಿದ್ದಾರೆ. ಜೊತೆಗೆ, ನೀವು ಮಾಜಿ ಮುಖ್ಯಮಂತ್ರಿಗಳಾಗಿ ಕಳೆದ ಅವಧಿಯಲ್ಲಿ ಆಡಳಿತ ನಡೆಸಿದ ಬಿಜೆಪಿ ಬಗ್ಗೆ ಟೀಕೆ ಮಾಡಿಲ್ಲ ಎಂಬುದನ್ನು ಹೆಚ್.ಡಿ. ಕುಮಾರಸ್ವಾಮಿಗೆ ತಿಳಿಸುವ ಮೂಲಕ ಶಕ್ತಿ ಯೋಜನೆಯಿಂದ ಮಹಿಳಾ ಸಬಲೀಕರಣ ಆಗುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಚುನಾವಣೆ ಲಾಭಕ್ಕಾಗಿ @INCKarnataka ರೂಪಿಸಿ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೂ ಎರವಾಗಿವೆ. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ ಎಂದು ಹೊರಟ ಆ ಪಕ್ಷದ ಸರಕಾರ, ಅವರು ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ. ಇದು ಕರ್ನಾಟಕದ ಮಾದರಿ!! 1/4#ಶಾಲಾ_ಮಕ್ಕಳಲ್ಲಿ_ಹಿತರಕ್ಷಿಸಿ pic.twitter.com/zSS4xTAy2p
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 3, 2024