ಬೆಂಗಳೂರು, (ಫೆ.16): ಟಿವಿ, ಬೈಕ್, ಫ್ರಿಡ್ಜ್ ಇದ್ದವರಿಗೆ ಬಿಪಿಎಲ್ ಕಾರ್ಡ್​ ಕೊಡಲ್ಲ ಎಂದು ಎಂದು ಸಚಿವ ಉಮೇಶ್​ ಕತ್ತಿ ಹೇಳಿಕೆ ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಎಚ್ಚೆತ್ತುಕೊಂಡು ಅದನ್ನ ವಾಪಸ್ ಪಡೆದುಕೊಂಡರು. 

ಇದೀಗ ಕಂದಾಯ ಸಚಿವ ಆರ್. ಅಶೋಕ್ ಅವರ ಸರದಿ.  ಸಚಿವರ ಈ ಹೇಳಿಕೆಯಿಂದ ರಾಜ್ಯದ ಪಿಂಚಣಿದಾರರು ಆತಂಕಕ್ಕೆ ಒಳಗಾಗಿದ್ದಾರೆ. 

ಪಿಂಚಣಿ ಹಣ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಹೌದು..ಸತತ 9 ತಿಂಗಳು ಬ್ಯಾಂಕ್​ನಿಂದ ಪಿಂಚಣಿ ಹಣ ವಿತ್​ಡ್ರಾ ಮಾಡದಿದ್ದರೆ ಅಂಥ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಲಾಗುವುದು ಎಂಬ ಕಂದಾಯ ಸಚಿವ ಆರ್.ಅಶೋಕ ಅವರ ಹೇಳಿಕೆ ಗೊಂದಲ ಸೃಷ್ಟಿಸಿದೆ. 

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿರುವ ಸಚಿವರು, ರಾಜ್ಯದಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಸಿಗುತ್ತಿರುವ ಪಿಂಚಣಿಯನ್ನೇ ಜೀವನಾಧಾರ ಮಾಡಿಕೊಂಡಿರುವ ಹಲವರು ಕಂದಾಯ ಸಚಿವರ ಹೇಳಿಕೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಸರ್ಕಾರದಿಂದ ವಿವಿಧ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವವರು 9 ತಿಂಗಳ ಅವಧಿಯಲ್ಲಿ ಹಣವನ್ನು ಡ್ರಾ ಮಾಡದಿದ್ದರೆ ಅಂಥ ಖಾತೆಗಳನ್ನು ಸ್ಥಗಿತಗೊಳಿಸಲು ಬ್ಯಾಂಕುಗಳಿಗೆ ಸೂಚಿಸುತ್ತೇವೆ. ಪ್ರತಿ ವರ್ಷ 4 ಲಕ್ಷ ಹೊಸ ಪಿಂಚಣಿದಾರರು ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಈ ಎಡವಟ್ಟಿನ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.