ಫೆ.27ಕ್ಕೆ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ
ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಫೆ.27ರಂದು ಬೆಳಗಾವಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಅವರು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಬೆಳಗಾವಿ (ಫೆ.23): ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಫೆ.27ರಂದು ಬೆಳಗಾವಿಗೆ ಆಗಮಿಸಲಿರುವ ಪ್ರಧಾನಿ ಮೋದಿ ಅವರು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಸುಮಾರು 8 ರಿಂದ 10 ಕಿ.ಮೀ. ರೋಡ್ ಶೋಗಾಗಿ ಯೋಜನೆ ಹಾಕಿಕೊಂಡಿದ್ದು, ಎಸ್ಪಿಜಿಯವರ ಅನುಮತಿ ಅಷ್ಟೇ ಬಾಕಿ ಇದೆ. ವಿಧಾನ ಪರಿಷತ್ ಸದಸ್ಯ ಕೇಶವಮೂರ್ತಿ ಮಾತನಾಡಿ, ಫೆ. 27 ರಂದು ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ ನರೇಂದ್ರ ಮೋದಿ ಅವರ ಅದ್ಧೂರಿ ರೋಡ್ ಶೋ ನಡೆಯಲಿದೆ. ಈ ಕಾರ್ಯಕ್ರಮ ಅವಿಸ್ಮರಣೀಯವಾಗಲಿದೆ. ಬೆಳಗಾವಿ ನಗರದಲ್ಲಿ ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಯಲಿರುವುದರಿಂದ ಬಿಜೆಪಿ ಹಾಗೂ ಜನರಲ್ಲಿ ಉತ್ಸಾಹ ಮೂಡಿದೆ. ನಗರದಲ್ಲಿ ಆಯೋಜಿಸಿರುವ ವಿವಿಧ ಲೋಕಾರ್ಪಣೆ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳು ಹಾಗೂ ಮೋದಿಯವರ ಅಭಿಮಾನಿಗಳು ಭಾಗವಹಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮದ ಬಗ್ಗೆ ಕಾರ್ಯಕರ್ತರೂ ಆಸಕ್ತಿ ತೋರಿದ್ದಾರೆ. ರಾಜ್ಯ ಸರ್ಕಾರ ಹಾಗೂ ಪ್ರಧಾನಿ ಕಚೇರಿಯಿಂದ ರೋಡ್ ಶೋಗೆ ಅನುಮತಿ ಸಿಕ್ಕಿದೆ. ಸ್ಥಳೀಯ ಶಾಸಕರು ಹಾಗೂ ಪಕ್ಷದ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಬೆಳಗಾವಿ ಜಿಲ್ಲೆಯ ಎಲ್ಲ ಕ್ಷೇತ್ರಗಳ ಜನಪ್ರತಿನಿಧಿಗಳ ಸಹಕಾರ ದೊರೆಯುತ್ತಿದೆ. ಈ ರೋಡ್ ಶೋವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲಿದ್ದಾರೆ ಎಂದು ತಿಳಿಸಿದರು.
ಅಧಿವೇಶನದಲ್ಲಿ ಬಿಎಸ್‌ವೈ ವಿದಾಯ ಭಾಷಣ: ವಿಧಾನಸಭೆಯಲ್ಲಿ ಮಾಜಿ ಸಿಎಂ ಭಾವುಕ ನುಡಿ
ಶಾಸಕ ಅಭಯ ಪಾಟೀಲ ಮಾತನಾಡಿ, ಪ್ರಧಾನಿ ಮೋದಿ ಆಗಮನದಿಂದ ಬೆಳಗಾವಿ ಅಷ್ಟೇ ಅಲ್ಲ ಇಡೀ ಉತ್ತರ ಕರ್ನಾಟಕದ ಮೇಲೆ ಪರಿಣಾಮ ಬೀರಲಿದೆ. ಇಡೀ ದೇಶದಲ್ಲಿ ಎಲ್ಲೂ ಆಗದ ಐತಿಹಾಸಿಕ ರೋಡ್ ಶೋ ನಡೆಸಲು ನಾವು ನಿರ್ಧರಿಸಿದ್ದೇವೆ. ಇಡೀ ದೇಶದ ಸಂಸ್ಕೃತಿ ಬಿಂಬಿಸುವ ಯತ್ನವನ್ನು ನಡೆಸಲಾಗುವುದು. ನಾವು 8 ರಿಂದ 10 ಕಿ.ಮೀ. ರೋಡ್ ಶೋಗೆ ಅನುಮತಿ ಕೇಳಿದ್ದೇವೆ. ಎಸ್‌ಪಿಜಿಯವರು ಎಷ್ಟುಕಿ.ಮೀ. ರೋಡ್ ಶೋಗೆ ಒಪ್ಪಿಗೆ ನೀಡುತ್ತಾರೆ ನೋಡಬೇಕು ಎಂದರು. ಮೋದಿಯವರು ಅಂದು ಕಿಸಾನ್ ಸಮ್ಮಾನ್ ಯೋಜನೆ, ಜಲಜೀವನ್ ಮಿಷನ್, ಆಸ್ಪತ್ರೆಗಳು, ರೈಲ್ವೆ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಮಹದಾಯಿ ಐತೀರ್ಪು ಜಾರಿಗೆ ಕೇಂದ್ರ ಪ್ರಾಧಿಕಾರ:‘ಪ್ರವಾಹ್’ ಪ್ರಾಧಿಕಾರ ರಚನೆ
ಹೀಗಿರಲಿದೆ ರೋಡ್ ಶೋ: ಬೆಳಗಾವಿ ಚನ್ನಮ್ಮ ವೃತ್ತದಿಂದ ಮಾಲಿನಿ ಸಿಟಿವರೆಗೆ ರೋಡ್ ಶೋಗೆ ಚಿಂತನೆ ಮಾಡಲಾಗಿದೆ. ಈ ವೇಳೆ ಹತ್ತು ಸಾವಿರ ಮಹಿಳೆಯರು ಭಗವಾ ಪೇಟ ಧರಿಸಿ ಪೂರ್ಣಕುಂಭ ಹೊತ್ತು ಪ್ರಧಾನಿ ಮೋದಿ ಸ್ವಾಗತಿಸಲಿದ್ದಾರೆ. ಮೋದಿರವರು ಪ್ರಧಾನಿ ಆಗುವ ಮೊದಲು ಇದ್ದ ಭಾರತ ಬಳಿಕ ಆದ ಭಾರತದ ಕಲ್ಪನೆ ಕಟ್ಟಿಕೊಡಲಾಗುವುದು. ರೋಡ್ ಶೋ ನಡೆಯುವ ರಸ್ತೆಯ ಅಕ್ಕಪಕ್ಕದಲ್ಲಿ ನೇರ ಕಾರ್ಯಕ್ರಮಕ್ಕೆ ಚಿಂತನೆ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಿಂದ 4 ರಿಂದ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ.