ಅಧಿವೇಶನದಲ್ಲಿ ಬಿಎಸ್‌ವೈ ವಿದಾಯ ಭಾಷಣ: ವಿಧಾನಸಭೆಯಲ್ಲಿ ಮಾಜಿ ಸಿಎಂ ಭಾವುಕ ನುಡಿ

ಪ್ರತಿಪಕ್ಷಗಳು ಆರೋಪಿಸಿದಂತೆ ನನ್ನನ್ನು ಬಿಜೆಪಿ ಮೂಲೆಗುಂಪು ಮಾಡಿಲ್ಲ. ಯಾರಿಗೂ ಕೊಡದಷ್ಟುಅವಕಾಶ, ಸ್ಥಾನಮಾನ ಹಾಗೂ ಗೌರವವನ್ನು ಬಿಜೆಪಿ ಹಾಗೂ ನರೇಂದ್ರ ಮೋದಿ ನನಗೆ ನೀಡಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. 

former cm bs yediyurappa delivers his farewell speech in karnataka assembly gvd

ವಿಧಾನಸಭೆ (ಫೆ.23): ‘ಪ್ರತಿಪಕ್ಷಗಳು ಆರೋಪಿಸಿದಂತೆ ನನ್ನನ್ನು ಬಿಜೆಪಿ ಮೂಲೆಗುಂಪು ಮಾಡಿಲ್ಲ. ಯಾರಿಗೂ ಕೊಡದಷ್ಟುಅವಕಾಶ, ಸ್ಥಾನಮಾನ ಹಾಗೂ ಗೌರವವನ್ನು ಬಿಜೆಪಿ ಹಾಗೂ ನರೇಂದ್ರ ಮೋದಿ ನನಗೆ ನೀಡಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಹೀಗಾಗಿ ನಾನು ಮೋದಿಗೆ ಸದಾ ಋುಣಿಯಾಗಿರುತ್ತೇನೆ. ನನ್ನ ಕೊನೆಯ ಉಸಿರು ಎಳೆಯುವವರೆಗೂ ಪಕ್ಷ ಸಂಘಟನೆ ಮಾಡುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಇನ್ನು ಅಧಿವೇಶನಕ್ಕೆ ಬರಲು ಸಾಧ್ಯವೇ ಇಲ್ಲ. ಹೀಗಾಗಿ ಇದು ನಾನು ಶಾಸಕನಾಗಿ ಅಧಿವೇಶನದಲ್ಲಿ ಮಾಡುತ್ತಿರುವ ಕೊನೆಯ ಭಾಷಣ ಹಾಗೂ ವಿದಾಯ ಭಾಷಣ’ ಎಂದು ಯಡಿಯೂರಪ್ಪ ನೋವಿನ ಧ್ವನಿಯಲ್ಲಿ ಘೋಷಿಸಿದರು. ಇದಕ್ಕೆ ಪ್ರತಿಪಕ್ಷಗಳ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿ, ‘ನೀವು ಮತ್ತೆ ಈ ಸದನಕ್ಕೆ ಬರಬೇಕು. ಮತ್ತೆ ಚುನಾವಣೆಗೆ ನಿಂತು ಗೆದ್ದುಬರಬೇಕು’ ಎಂದು ಆಗ್ರಹಿಸಿದಾಗ ಶಿರಬಾಗಿ ಕೈ ಮುಗಿಯುವ ಮೂಲಕ ಸದರಿ ಆಗ್ರಹವನ್ನು ಗೌರವಯುತವಾಗಿ ತಿರಸ್ಕರಿಸಿದ ಯಡಿಯೂರಪ್ಪ ಅವರನ್ನು ಕಂಡು ಇಡೀ ಸದನ ಕೆಲ ಕಾಲ ಭಾವುಕತೆಗೆ ಒಳಗಾಯಿತು.

ನನ್ನ ಗೆಲುವಲ್ಲಿ ಬಿಎಸ್‌ವೈ, ವಿಜ​ಯೇಂದ್ರ ಶ್ರಮ ಅಪಾರ: ಸಚಿವ ಕೆ.ಸಿ.ನಾರಾಯಣಗೌಡ

ಇದೇ ವೇಳೆ ಬಜೆಟ್‌ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ‘ನನ್ನನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಮಾತನಾಡುತ್ತಿದ್ದಾರೆ. ಬಿಜೆಪಿ ಹಾಗೂ ನರೇಂದ್ರ ಮೋದಿ ಎಂದೂ ನನ್ನನ್ನು ಕಡೆಗಣಿಸಿಲ್ಲ. ನನಗೆ ನೀಡಿರುವ ಗೌರವ, ಸ್ಥಾನಮಾನ ಮರೆಯಲು ಸಾಧ್ಯವಿಲ್ಲ. ಸದಾ ನಾನು ಮೋದಿಗೆ ಋುಣಿ’ ಎಂದು ಹೇಳಿದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಸತ್ಯ: ‘ನಾನು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ಸಿಕ್ಕಿರುವ ಅವಕಾಶ ಬೇರೆ ಯಾರಿಗೂ ಸಿಕ್ಕಿಲ್ಲ. ಯಾರು ಏನೇ ಹೇಳಿದರೂ ಈ ಬಿ.ಎಸ್‌.ಯಡಿಯೂರಪ್ಪ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದ್ದು, ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಸೂರ್ಯ, ಚಂದ್ರ ಇರುವುದು ಎಷ್ಟುಸತ್ಯವೋ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ’ ಎಂದು ಸ್ಪಷ್ಟಪಡಿಸಿದರು.

ಇದು ವಿದಾಯ ಭಾಷಣ ಅಲ್ಲ: ಇದು ನನ್ನ ಕೊನೆಯ ಭಾಷಣ, ವಿದಾಯ ಭಾಷಣ ಎಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ತಡೆದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ‘ಇದು ನಿಮ್ಮ ಕೊನೆಯ ಭಾಷಣ ಅಲ್ಲ. ನಿಮಗೆ ಗೌರವವಾಗಿ ಬೀಳ್ಕೊಡಲು ಪ್ರತ್ಯೇಕ ವ್ಯವಸ್ಥೆ ಮಾಡುತ್ತೇವೆ. ಅದು ನಿಮ್ಮ ವಿದಾಯ ಭಾಷಣ’ ಎಂದು ಹೇಳಿದರು. ದನಿಗೂಡಿಸಿದ ಸಚಿವ ಜೆ.ಸಿ. ಮಾಧುಸ್ವಾಮಿ, ‘ಇದು ನಿಮ್ಮ ಕೊನೆಯ ಭಾಷಣ ಆಗಲು ಬಿಡಲ್ಲ. ನೀವು ಇನ್ನೂ ಮಾತನಾಡಬೇಕು’ ಎಂದರು.

ಮತ್ತೆ ಚುನಾವಣೆಗೆ ಸ್ಪರ್ಧಿಸಿ: ಪ್ರತಿಪಕ್ಷಗಳ ಒತ್ತಾಯ: ಬಿ.ಎಸ್‌. ಯಡಿಯೂರಪ್ಪ ಅವರು, ‘ಇದು ನನ್ನ ವಿದಾಯ ಭಾಷಣ’ ಎನ್ನುತ್ತಿದ್ದಂತೆ ಎದ್ದು ನಿಂತ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ಜೆಡಿಎಸ್‌ನ ಶಿವಲಿಂಗೇಗೌಡ ಸೇರಿದಂತೆ ಹಲವು ಸದಸ್ಯರು ಮತ್ತೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದರು. ‘ನೀವು ಈ ಸದನದಲ್ಲಿದ್ದರೆ ಅದಕ್ಕೊಂತು ಘನತೆ. ನಿಮ್ಮ ಸಲಹೆ-ಮಾರ್ಗದರ್ಶನ ಈ ಸದನಕ್ಕೆ ಬೇಕು. ಮತ್ತೆ ನೀವು ಚುನಾವಣೆಗೆ ಸ್ಪರ್ಧಿಸಬೇಕು’ ಎಂದು ಒತ್ತಾಯಿಸಿದರು.

ರಾಜಾಹುಲಿ ಎಂದು ರಾಜ್ಯದ ಜನತೆಯಿಂದ ಕರೆಸಿಕೊಂಡ ಬಿಎಸ್‌ವೈ: ಸಂಸದ ಬಿ.ವೈ.​ರಾ​ಘ​ವೇಂದ್ರ

ರಾಜ್ಯಾದ್ಯಂತ ಪ್ರವಾಸ: ಅಧಿವೇಶನ ಮುಗಿದ ಬಳಿಕ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ. ಪ್ರತಿ ವಿಧಾನಸಭಾ ವಾರು ಸಮಾವೇಶ ನಡೆಸುತ್ತೇನೆ. ಕೊನೆಯ ಉಸಿರಿರುವವರೆಗೂ ಪಕ್ಷ ಸಂಘಟಿಸುತ್ತೇನೆ. ಸೂರ್ಯ ಚಂದ್ರರು ಇರುವುದು ಎಷ್ಟುಸತ್ಯವೋ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ಅಷ್ಟೇ ಸತ್ಯ ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಅಧಿವೇಶನ ಮುಗಿದ ಕೂಡಲೇ ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳಿಗೆ ಹೋಗಿ ಬಜೆಟ್‌ನಲ್ಲಿನ ಉತ್ತಮ ಅಂಶಗಳನ್ನು ಜನರಿಗೆ ತಿಳಿಸಬೇಕು. ತನ್ಮೂಲಕ ಚುನಾವಣೆಗೆ ತಯಾರಿ ನಡೆಸಬೇಕು ಎಂದು ಕರೆ ನೀಡಿದರು.

Latest Videos
Follow Us:
Download App:
  • android
  • ios