ಮಹದಾಯಿ ಐತೀರ್ಪು ಜಾರಿಗೆ ಕೇಂದ್ರ ಪ್ರಾಧಿಕಾರ:‘ಪ್ರವಾಹ್’ ಪ್ರಾಧಿಕಾರ ರಚನೆ
ಮಹದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮಹದಾಯಿ ನದಿ ನೀರು ನಿರ್ವಹಣೆ ಮತ್ತು ಯೋಜನೆ ಕುರಿತು ನಿಗಾ ವಹಿಸುವ ಉದ್ದೇಶದಿಂದ ಹೊಸ ಪ್ರಾಧಿಕಾರ ‘ಪ್ರವಾಹ್’ ರಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
ನವದೆಹಲಿ (ಫೆ.23): ಮಹದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮಹದಾಯಿ ನದಿ ನೀರು ನಿರ್ವಹಣೆ ಮತ್ತು ಯೋಜನೆ ಕುರಿತು ನಿಗಾ ವಹಿಸುವ ಉದ್ದೇಶದಿಂದ ಹೊಸ ಪ್ರಾಧಿಕಾರ ‘ಪ್ರವಾಹ್’ ರಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಮತ್ತಿತರರು ಸ್ವಾಗತಿಸಿದ್ದಾರೆ. ಇದರಿಂದ ಕರ್ನಾಟಕದ ಪಾಲಿನ ನೀರು ಬಳಸುವ ಯೋಜನೆ ಅನುಷ್ಠಾನಕ್ಕೆ ಮತ್ತಷ್ಟುಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ‘ಮಹದಾಯಿ ಪ್ರವಾಹ್’ Mahadayi Prawah’ ( Progressiver River Auuthority For Welfare and Harmony) ಪ್ರಾಧಿಕಾರ ರಚನೆಗೆ ಒಪ್ಪಿಗೆ ನೀಡಿದೆ. ಈ ಪ್ರಾಧಿಕಾರ ಮಹದಾಯಿ ನದಿ ನೀರು ಯೋಜನೆ ಅನುಷ್ಠಾನ, ಮಹದಾಯಿ ನೀರಿನ ಹಂಚಿಕೆ ಕುರಿತು ನ್ಯಾಯಮಂಡಳಿಯ ನಿರ್ಣಯ ಅನುಸರಣೆ ಮತ್ತು ಅನುಷ್ಠಾನಕ್ಕೆ ಈ ಪ್ರಾಧಿಕಾರದಿಂದ ಅನುಕೂಲವಾಗಲಿದೆ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಮೂರು ರಾಜ್ಯಗಳು ಕೂಡ ಪ್ರಾಧಿಕಾರದ ಸದಸ್ಯರಾಗಿರುತ್ತಾರೆ.
ಮಹದಾಯಿ: ತಡೆಯಾಜ್ಞೆ ಕೋರಿ ಗೋವಾ ಸಲ್ಲಿಸಿದ್ದ ಅರ್ಜಿ ವಜಾ
ಮಹದಾಯಿ ನ್ಯಾಯಾಧಿಕರಣ ತನ್ನ ತೀರ್ಪಿನಲ್ಲಿ ಪ್ರಾಧಿಕಾರ ರಚನೆ ಬಗ್ಗೆ ಪ್ರಸ್ತಾಪಿಸಿತ್ತು. ಅದರಂತೆ ಕೇಂದ್ರ ಸಂಪುಟ ಈ ಪ್ರಾಧಿಕಾರ ರಚನೆಗೆ ಒಪ್ಪಿಗೆ ನೀಡಿದೆ. ಮೂರು ರಾಜ್ಯಗಳಿಂದ ಮೂವರು ಸದಸ್ಯರ ಜೊತೆ ಮೂರು ತಜ್ಞರು ಹಾಗೂ ಒಬ್ಬ ಅಧ್ಯಕ್ಷರು ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಅಧ್ಯಕ್ಷರು ಹಾಗೂ ತಜ್ಞರನ್ನು ನೇಮಿಸಲಿದೆ.
ಮಹದಾಯಿ ನದಿ ನೀರು ವಿವಾದ ನ್ಯಾಯಮಂಡಳಿಯು 2018ರಲ್ಲಿ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆಯಾಗಿತ್ತು. ಇದರಲ್ಲಿ 3.9 ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ ಬಳಸುವ ಉದ್ದೇಶದಿಂದ ಕಳಸಾ-ಬಂಡೂರಿ ನಾಲಾಗಳ ಮೂಲಕ ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯ ಕೆಲ ಪ್ರದೇಶಗಳಿಗೆ ಪೂರೈಸಲು ಕರ್ನಾಟಕ ಸರ್ಕಾರ ಉದ್ದೇಶಿಸಿತ್ತು. ಇತ್ತೀಚೆಗಷ್ಟೇ ಕಳಸಾ-ಬಂಡೂರಿ ನಾಲಾ ಯೋಜನೆಯ ಪರಿಷ್ಕೃತ ಡಿಪಿಆರ್ಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಪರಿಸರ ಅನುಮತಿ ಸಿಗುವುದೊಂದೇ ಬಾಕಿ ಇದೆ. ಪರಿಸರ ಅನುಮತಿ ಸಿಕ್ಕರೆ ಕರ್ನಾಟಕಕ್ಕೆ ನಾಲಾ ಯೋಜನೆ ಆರಂಭಿಸಲು ಅನುಕೂಲವಾಗಲಿದೆ.
ಮೋದಿಗೆ ಧನ್ಯವಾದ: ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ನಡುವೆ ನೀರು ಹಂಚಿಕೆ ಮಾಡುವ ನಿಟ್ಟಿನಲ್ಲಿ ಈ ಪ್ರಾಧಿಕಾರದಿಂದ ಅನುಕೂಲವಾಗಲಿದೆ. ಪ್ರಾಧಿಕಾರ ಸ್ಥಾಪನೆಗೆ ಅನುಮತಿ ನೀಡಿದ ಪ್ರಧಾನಿ ಮೋದಿ ಮತ್ತು ಕೇಂದ್ರ ಜಲಶಕ್ತಿ ಮಂತ್ರಿ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಧನ್ಯವಾದಗಳು. ಇದೊಂದು ಸ್ವಾಗತಾರ್ಹ ಕ್ರಮ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಏನು ಪ್ರಯೋಜನ?
- 2018ರಲ್ಲಿ ಕರ್ನಾಟಕಕ್ಕೆ ಮಹದಾಯಿ ನದಿಯಲ್ಲಿ 13.4 ಟಿಎಂಸಿ ನೀರು ಹಂಚಿಕೆ ಮಾಡಿದ್ದ ನ್ಯಾಯಾಧಿಕರಣ
- ಪ್ರಾಧಿಕಾರ ರಚಿಸುವಂತೆ ಐತೀರ್ಪಿನಲ್ಲೇ ಸೂಚನೆ ನೀಡಿದ್ದ ಟ್ರಿಬ್ಯುನಲ್
- ಅದರಂತೆ ಈಗ ಕೇಂದ್ರದಿಂದ ಪ್ರಾಧಿಕಾರ ರಚನೆ: ಯೋಜನೆ ಜಾರಿಯಲ್ಲಿ ಮಹತ್ವದ ಪ್ರಗತಿ
- ಯಾವುದೇ ಹೆಜ್ಜೆ ಮುಂದಿಡಬಾರದು ಎಂಬ ಗೋವಾದ ಮನವಿಗೆ ಕೇಂದ್ರದಲ್ಲಿ ದೊಡ್ಡ ಹಿನ್ನಡೆ
ಮಹದಾಯಿ ಯೋಜನೆ ಹಂತ ಹಂತವಾಗಿ ಅನುಷ್ಠಾನ: ಸಿಎಂ ಬೊಮ್ಮಾಯಿ
ಮಹದಾಯಿ ಪ್ರವಾಹ್ ರಚನೆಯ ತೀರ್ಮಾನ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನ್ಯಾಯಾಧಿಕರಣದ ತೀರ್ಪುಗಳ ಜಾರಿಗೆ ಇದು ಮಹತ್ವದ ಹೆಜ್ಜೆಯಾಗಿದೆ. ಕರ್ನಾಟಕದ ಯೋಜನೆ ಜಾರಿಗೂ ಅನುಕೂಲವಾಗಲಿದೆ. ಪ್ರಾಧಿಕಾರದ ರಚನೆಯು ಮುಂದಿನ ಹೆಜ್ಜೆ ಇಡಲು ನಮಗೆ ಸಹಕಾರಿಯಾಗಲಿದೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ