ಇನ್‌ಸ್ಪೆಕ್ಟರ್‌ ಬಗೆಗಿನ ನನ್ನ ಮಾತು ತಿರುಚಲಾಗಿದೆ: ಸಚಿವ ಎಂಟಿಬಿ ನಾಗರಾಜ್‌

‘ನಾನು 70-80 ಲಕ್ಷ ರು. ಕೊಟ್ಟು ಬಾಯಿ ಬಡ್ಕೊಳೋಕೆ ಯಾಕೆ ಬಂದ ಎಂದಿದ್ದೆ. ಅದು ಬಿಟ್ಟು ಏನೂ ಹೇಳಿಲ್ಲ. ವಿಡಿಯೋದಲ್ಲಿ ನಾನು ಮಾತನಾಡಿರುವ ಹೇಳಿಕೆಯನ್ನು ತಿರುಚಲಾಗಿದೆ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್‌ ಸಮಜಾಯಿಷಿ ನೀಡಿದ್ದಾರೆ.

minister mtb nagaraj reaction on inspector nandish death case gvd

ಬೆಂಗಳೂರು (ನ.01): ‘ನಾನು 70-80 ಲಕ್ಷ ರು. ಕೊಟ್ಟು ಬಾಯಿ ಬಡ್ಕೊಳೋಕೆ ಯಾಕೆ ಬಂದ ಎಂದಿದ್ದೆ. ಅದು ಬಿಟ್ಟು ಏನೂ ಹೇಳಿಲ್ಲ. ವಿಡಿಯೋದಲ್ಲಿ ನಾನು ಮಾತನಾಡಿರುವ ಹೇಳಿಕೆಯನ್ನು ತಿರುಚಲಾಗಿದೆ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್‌ ಸಮಜಾಯಿಷಿ ನೀಡಿದ್ದಾರೆ. ಕೆ.ಆರ್‌.ಪುರ ಪೊಲೀಸ್‌ ಇನ್ಸ್‌ಪೆಕ್ಟರ್‌ ನಂದೀಶ್‌ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಒಬ್ಬ ಇನ್ಸ್‌ಪೆಕ್ಟರ್‌ ಆಗಿರುವ ವ್ಯಕ್ತಿ ತಾಲೂಕಿನಲ್ಲಿ 70-80 ಲಕ್ಷ ರು. ನೀಡಿ ಕೆಲಸ ಮಾಡಲು ಆಗುತ್ತಾ? ಯಾರೋ ಹೇಳಿದ್ದನ್ನು ನಾನು ಹೇಳಿಕೊಂಡು ಹೋದೆ. 

ಮೃತ ನಂದೀಶ್‌ನನ್ನು ನಾನು ಭೇಟಿಯೇ ಮಾಡಿರಲಿಲ್ಲ. ಮೃತಪಟ್ಟಾಗ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗುತ್ತಿದ್ದ ವೇಳೆ ಏನಾಯಿತು ಎಂದು ಕೆಲವರನ್ನು ಕೇಳಿದೆ. ಅದಕ್ಕೆ ಅವರು 70-80 ಲಕ್ಷ ರು. ನೀಡಿ ಬಂದಿರುವುದಾಗಿ ಹೇಳಿದ್ದರು. ಅದಕ್ಕೆ ನಾನು 70-80 ಲಕ್ಷ ರು. ಕೊಟ್ಟು ಬಾಯಿ ಬಡ್ಕೊಳೋಕೆ ಯಾಕೆ ಬಂದೆ ಎಂದೆ. ಅದು ಬಿಟ್ಟು ನಾನು ಏನೂ ಹೇಳಿಲ್ಲ. ಸರ್ಕಾರಕ್ಕೆ ಹಣ ಕೊಟ್ಟಿದ್ದಾರೆ ಎಂದೂ ಹೇಳಿಲ್ಲ. ನಂದೀಶ್‌ ಸಾವನ್ನಪ್ಪಿದ್ದಾರೆ. ಅವರೇ ಬಂದು ಹೇಳಬೇಕಷ್ಟೇ’ ಎಂದರು.

ಇನ್‌ಸ್ಪೆಕ್ಟರ್‌ ನಂದೀಶ್‌ ಅನಾರೋಗ್ಯದಿಂದ ಸಾವು: ಸಚಿವ ಆರಗ ಜ್ಞಾನೇಂದ್ರ

ಕೈಮುಗಿದ ಸಚಿವ!: ವಿಡಿಯೋದಲ್ಲಿ ಮಾತನಾಡಿರುವ ಹೇಳಿಕೆಯನ್ನು ತಿರುಚಲಾಗಿದೆ. ಮುಖ್ಯಮಂತ್ರಿಗಳು ತನಿಖೆ ಮಾಡುವುದಾಗಿ ಹೇಳಿದ್ದಾರೆ. ತಪ್ಪಿತಸ್ಥರು ಯಾರೆಂದು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ ಸಚಿವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿ ಕೈ ಮುಗಿದು ತೆರಳಿದರು. ನಮ್ಮ ಸರ್ಕಾರದಲ್ಲಿ ಯಾವುದೇ ಹಣ ಪಡೆದು ಪೋಸ್ಟಿಂಗ್‌ ನೀಡಿಲ್ಲ. 

ಉಚಿತವಾಗಿಯೇ ಪೋಸ್ಟಿಂಗ್‌ ಮಾಡುತ್ತಿದ್ದೇವೆ. ಯಾರು ಯಾರಿಗೂ ಹಣ ಕೊಡಬೇಕಿಲ್ಲ. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ರಾಜೀನಾಮೆ ನೀಡುವಂತೆ ಪ್ರತಿಪಕ್ಷದವರು ಒತ್ತಾಯಿಸುತ್ತಿದ್ದಾರೆ. ಅವರು ಯಾಕೆ ಕೊಡಬೇಕು, ರಾಜೀನಾಮೆ ಕೊಡುವ ಕೆಲಸ ನಾವು ಏನೂ ಮಾಡಿಲ್ಲ. ಹಣ ಕೊಟ್ಟಿರುವ ಮತ್ತು ತೆಗೆದುಕೊಂಡಿರುವ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಾಕ್ಷ್ಯ ನೀಡಲಿ ಎಂದು ಹೇಳಿದರು.

ನ್ಯಾಯಾಂಗ ತನಿಖೆಗಾಗಿ ಕಾಂಗ್ರೆಸ್‌ ಪ್ರತಿಭಟನೆ: ಕೆ.ಆರ್‌.ಪುರಂ ಇನ್‌ಸ್ಪೆಕ್ಟರ್‌ ನಂದೀಶ್‌ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಕಾಂಗ್ರೆಸ್‌ ಭವನದ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮುಖಂಡರು, ಸಚಿವ ಎಂಟಿಬಿ ನಾಗರಾಜ್‌ ಅವರು ‘ನಂದೀಶ್‌ ಅವರು 70-80 ಲಕ್ಷ ನೀಡಿ ಕೆ.ಆರ್‌.ಪುರಂಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ’ ಎಂದು ನೀಡಿರುವ ಹೇಳಿಕೆಯ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ವರ್ಗಕ್ಕೆ ಇನ್ಸ್‌ಪೆಕ್ಟರ್‌ 80 ಲಕ್ಷ ನೀಡಿದ್ದು ಯಾರಿಗೆ?: ಕಾಂಗ್ರೆಸ್‌

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಸ್‌.ಮನೋಹರ್‌ ಮಾತನಾಡಿ, ಶೇ.40 ಪರ್ಸೆಂಟ್‌ ಭ್ರಷ್ಟ ಬಿಜೆಪಿ ಸರ್ಕಾರ ಎಲ್ಲದರಲ್ಲೂ ಲೂಟಿಯಲ್ಲಿ ತೊಡಗಿದೆ. ಲಂಚ ನೀಡದಿದ್ದರೆ ಯಾವ ಕೆಲಸವೂ ಆಗುತ್ತಿಲ್ಲ. ಸರ್ಕಾರ ಎಲ್ಲದರಲ್ಲೂ ಕಮೀಷನ್‌ ಹೊಡೆಯುತ್ತಿದೆ. ಕಣ್ಣು ಕಾಣಿಸದಂತೆ, ಕಿವಿ ಕೇಳಿಸದಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು. ನಂದೀಶ್‌ ಅವರ ಸಾವಿನ ಸಂಬಂಧ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು. ನಂದೀಶ್‌ ಸಾವಿನ ಪ್ರಕರಣವನ್ನು ನೋಡಿದರೆ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ ದೊರೆತಂತಾಗಿದೆ. ಒತ್ತಡ ಇತ್ತು, ಹಾಗಾಗಿ ಹೃದಯಾಘಾತವಾಗಿದೆ ಎಂದು ಕುಟುಂಬದ ಸದಸ್ಯರೇ ಹೇಳಿದ್ದಾರೆ. ಸರ್ಕಾರ ಪ್ರಕರಣ ಮುಚ್ಚಿ ಹಾಕುವ ಶಂಕೆ ಇದೆ. ಆದ್ದರಿಂದ ನ್ಯಾಯಾಂಗ ತನಿಖೆಗೆ ವಹಿಸಿದರೆ ಸತ್ಯ ಹೊರಬರುತ್ತದೆ ಎಂದರು.

Latest Videos
Follow Us:
Download App:
  • android
  • ios