ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2033ಕ್ಕೆ ವಿಮಾನ ಸಂಚಾರ ಆರಂಭ: ಸಚಿವ ಎಂ.ಬಿ. ಪಾಟೀಲ್
ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ಮಾಡುವುದು ಖಚಿತವಾಗಿದ್ದು, ಸುಮಾರು 4,500 ರಿಂದ 5,000 ಎಕರೆ ಭೂಮಿಗಾಗಿ ಹುಡುಕಾಟ ಮಾಡಲಾಗುತ್ತಿದೆ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದರು.
ಬೆಂಗಳೂರು (ಜು.10): ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು ಖಚಿತ. ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣದ ಒಪ್ಪಂದದಂತೆ 2033ರವರೆಗೆ ಬೆಂಗಳೂರಿನ 150 ಕಿ.ಮೀ ವ್ಯಾಪ್ತಿಯಲ್ಲಿ ಬಳಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವಂತಿಲ್ಲ. ಆದರೆ, ನಾವು ಈಗಲೇ ಎಲ್ಲ ಕಾರ್ಯಗಳನ್ನು ಆರಂಭಿಸಿದರೆ, 2033ಕ್ಕೆ ಕಾಮಗಾರಿ ಪೂರ್ಣಗೊಂಡು ವಿಮಾನ ಸಂಚಾರ ಆರಂಭಿಸಬಹುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ದೇಶದ ತಂತ್ರಜ್ಞಾನ ಮತ್ತು ನವೋದ್ಯಮಗಳ ರಾಜಧಾನಿಯೂ ಆಗಿದ್ದು, ಈಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೆಹಲಿ ಮತ್ತು ಮುಂಬೈ ನಂತರ ಅತಿದಟ್ಟಣೆಯಿಂದ ಕೂಡಿರುವ ಮೂರನೇ ಏರ್-ಪೋರ್ಟ್ ಆಗಿದೆ. ಸದ್ಯಕ್ಕೆ ಇಲ್ಲಿ ವರ್ಷಕ್ಕೆ 52 ಮಿಲಿಯನ್ ಪ್ರಯಾಣಿಕರ ಮತ್ತು 0.71 ಮಿಲಿಯನ್ ಟನ್ ಸರಕು ಸಾಗಣೆ ನಿರ್ವಹಣೆ ಆಗುತ್ತಿದೆ. ಇವುಗಳನ್ನು ಕ್ರಮವಾಗಿ 110 ಮಿಲಿಯನ್ ಮತ್ತು 1.10 ಮಿಲಿಯನ್ ಟನ್ ತನಕ ವಿಸ್ತರಿಸಬಹುದಾಗಿದ್ದು, 2035ರ ವೇಳೆಗೆ ಇದು ಗರಿಷ್ಠ ಮಟ್ಟ ತಲುಪಲಿದೆ. ಆದರೆ ಈಗ ಎರಡು ರನ್-ವೇ ಇದ್ದು, ಇದರಲ್ಲಿ ವಿಸ್ತರಣೆ ಸಾಧ್ಯವಿಲ್ಲದಂತಾಗಿದೆ ಎಂದು ವಿವರಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರು ಕಿತ್ತಾಕಲು ಹೆಚ್.ಡಿ.ಕುಮಾರಸ್ವಾಮಿಗೆ ಜನರೇ ಆಶಿರ್ವಾದ ಮಾಡಲ್ಲ: ಸಿಎಂ ಸಿದ್ದರಾಮಯ್ಯ
ಜಾಗತಿಕ ಮಟ್ಟದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ವಾರ್ಷಿಕವಾಗಿ 100 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ. ಇದಕ್ಕಾಗಿ 4,500 ದಿಂದ 5,000 ಎಕರೆ ಭೂಮಿ ಬೇಕಾಗಲಿದ್ದು, ಹಲವು ಅಂಶಗಳನ್ನು ಪರಿಗಣಿಸಿ ಇದನ್ನು ಉನ್ನತ ಮಟ್ಟದ ಸಮಿತಿಯು ಆಖೈರು ಮಾಡಲಿದೆ. ಯಾವ ದೃಷ್ಟಿಯಿಂದ ನೋಡಿದರೂ ಕೆಂಪೇಗೌಡ ಏರ್-ಪೋರ್ಟ್ 2035ರ ವೇಳೆಗೆ ತನ್ನ ಧಾರಣಾಶಕ್ತಿಯ ತುತ್ತತುದಿ ಮುಟ್ಟಲಿದೆ. ನಾವು ಈ ಯೋಜನೆಯನ್ನು ಘೋಷಿಸಿದ ನಂತರವಷ್ಟೇ ತಮಿಳುನಾಡು ಸರಕಾರವು ಹೊಸೂರಿನಲ್ಲಿ ನೂತನ ಏರ್-ಪೋರ್ಟ್ ನಿರ್ಮಿಸುವ ಮಾತುಗಳನ್ನಾಡಲು ಆರಂಭಿಸಿದೆ. ಅದರಿಂದ ನಮಗೇನೂ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನೂತನ ವಿಮಾನ ನಿಲ್ದಾಣ ಬರಬೇಕೆಂದರೆ ಸುತ್ತಮುತ್ತ ಎಲ್ಲೂ ಬೆಟ್ಟಗುಡ್ಡ, ನದಿ/ಸಮುದ್ರಗಳಿರಬಾರದು. ಜತೆಗೆ ಗುಣಮಟ್ಟದ ರಾಜ್ಯ/ರಾಷ್ಟ್ರ ಹೆದ್ದಾರಿ, ರೈಲು ಮತ್ತು ಮೆಟ್ರೋ ಸಂಪರ್ಕ ಇರಬೇಕು. ಅಲ್ಲದೆ, ಕೇವಲ ಪ್ರಯಾಣಿಕರ ಹರಿವಿನ ದಟ್ಟಣೆಯನ್ನು ಪರಿಗಣಿಸಬೇಕೋ ಅಥವಾ ಕೈಗಾರಿಕಾ ಅಗತ್ಯಗಳನ್ನೂ ನೋಡಬೇಕೋ ಎನ್ನುವ ಅಂಶಗಳು ಮುಖ್ಯವಾಗುತ್ತವೆ. ಒಟ್ಟಿನಲ್ಲಿ ರಾಜ್ಯ ಸರಕಾರದ ಮನಸ್ಸಿನಲ್ಲಿ ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ, ದೊಡ್ಡಬಳ್ಳಾಪುರ, ದಾಬಸಪೇಟೆ, ತುಮಕೂರು ಮುಂತಾದ ಸ್ಥಳಗಳಿವೆ ಎಂದು ಮಾಹಿತಿ ನೀಡಿದರು.
ಬಿಬಿಎಂಪಿಯಲ್ಲಿ ಹವಾಮಾನ ಕ್ರಿಯಾಯೋಜನೆ ಫೆಲೋಶಿಪ್ ನೇಮಕಾತಿ; ಮಾಸಿಕ 60 ಸಾವಿರ ರೂ. ಸಂಬಳ
ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಿಸಿರುವ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (ಬಿಐಎಎಲ್) 2033ರವರೆಗೆ 150 ಕಿ.ಮೀ. ಸುತ್ತಳತೆಯಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪಿಸಬಾರದು ಎನ್ನುವ ಷರತ್ತನ್ನು ಹಾಕಿತ್ತು. ಇದು 2033ಕ್ಕೆ ಮುಗಿಯಲಿದೆ. ನಾವು ಈಗಿನಿಂದಲೇ ಕೆಲಸ ಮಾಡಿದರೆ, ಆ ವೇಳೆಗೆ ನೂತನ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಿಯೇ ಬಿಡಬಹುದು. ದೆಹಲಿ ಮತ್ತು ಮುಂಬೈಗಳಲ್ಲಿ ಹಳೆಯ ವಿಮಾನ ನಿಲ್ದಾಣಗಳಿಂದ 35-40 ಕಿ.ಮೀ. ದೂರದಲ್ಲೇ ಎರಡನೆಯ ವಿಮಾನ ನಿಲ್ದಾಣಗಳನ್ನೂ ನಿರ್ಮಿಸಲಾಗಿದೆ. ಇದನ್ನು ಕೂಡ ನಾವು ಪರಿಗಣಿಸಲಿದ್ದೇವೆ. ಒಟ್ಟಿನಲ್ಲಿ ಉದ್ದೇಶಿತ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಎಲ್ಲ ದೃಷ್ಟಿಯಿಂದಲೂ ಮತ್ತಷ್ಟು ಅನುಕೂಲವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.