ಬೆಂಗಳೂರು(ಮಾ.06): ರಾಜ್ಯದಲ್ಲಿ ಸರಕು ಸಾಗಣೆ ವಾಹನಗಳಲ್ಲಿ ನಿಯಮ ಬಾಹಿರವಾಗಿ ಪ್ರಯಾಣಿಕರನ್ನು ಸಾಗಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಂಬಂಧ ಸಾರಿಗೆ ಇಲಾಖೆ ಹಾಗೂ ಗೃಹ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ತಿಳಿಸಿದ್ದಾರೆ. 

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಸದಸ್ಯ ಆರ್‌.ಪ್ರಸನ್ನ ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಲು ಅವಕಾಶವಿಲ್ಲ. ಈ ಸಂಬಂಧ ಸಾರಿಗೆ ಇಲಾಖೆ ಹಾಗೂ ಗೃಹ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸುವುದಾಗಿ ಹೇಳಿದ್ದಾರೆ.

ಮ್ಯಾಕ್ಸಿ ಕ್ಯಾಬ್‌ ಹಾಗೂ ಇತರೆ ವಾಹನಗಳಲ್ಲಿ ನಿಗದಿತ ಪ್ರಯಾಣಿಕರಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸುವ ವಾಹನಗಳಿಂದ ದಂಡ ವಸೂಲಿ ಮಾಡಲಾಗುತ್ತಿದೆ. 12 ಪ್ಲಸ್‌ 1 ಆಸನ ಸಾಮರ್ಥ್ಯದ ಮ್ಯಾಕ್ಸಿಕ್ಯಾಬ್‌ಗಳಲ್ಲಿ ಹೆಚ್ಚುವರಿ ಆಸನ ಅಳಡಿಸಿಕೊಂಡಿದ್ದರೆ ಅಥವಾ ಅಳವಡಿಸಿಕೊಳ್ಳಲು ಇಚ್ಛಿಸಿದರೆ ನೋಂದಣಿ ಪ್ರಮಾಣ ಪತ್ರದಲ್ಲಿ ಹೆಚ್ಚುವರಿ ಆಸನಗಳ ಸಂಖ್ಯೆ ನಮೂದಿಸಿ ಹೊಸ ನೋಂದಣಿ ಪತ್ರ ನೀಡಲು ನೋಂದಣಿ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ. ವಾಹನದ ಚಕ್ರದ ಅಳತೆ ಆಧರಿಸಿ 16 ಪ್ಲಸ್‌ 1ರಿಂದ 20 ಪ್ಲಸ್‌ 1 ಆಸನದ ವರೆಗೆ ಮಾರ್ಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಸಾರಿಗೆ ಇಲಾಖೆಗೆ ತೆರಿಗೆ ರೂಪದಲ್ಲಿ ಆದಾಯವೂ ಬರಲಿದೆ ಎಂದರು.

"ನಮ್ಮ ಕಾರ್ಗೋ” ಸೇವೆ ಲೋಕಾರ್ಪಣೆಗೊಳಿಸಿದ ಸಿಎಂ ಯಡಿಯೂರಪ್ಪ

ಇದಕ್ಕೂ ಮುನ್ನ ಮಾತನಾಡಿದ ಆರ್‌. ಪ್ರಸನ್ನಕುಮಾರ್‌, ನಿಯಮದ ಪ್ರಕಾರ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಆದರೂ ಅಕ್ರಮವಾಗಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಗಾರ್ಮೆಂಟ್ಸ್‌ ನೌಕರರನ್ನು ಕುರಿಗಳ ಹಾಗೆ ತುಂಬಿಕೊಂಡು ಹೋಗಲಾಗುತ್ತಿದೆ. ಒಂದು ವೇಳೆ ಅಪಘಾತಗಳಾಗಿ ಪ್ರಾಣಹಾನಿಯಾದರೆ ಯಾರು ಹೊಣೆ, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಸ್‌ ನಿಲ್ದಾಣ ಶೌಚಾಲಯ ಸ್ವಚ್ಛತೆ ಹೊಣೆ ಖಾಸಗಿಗೆ

ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ವ್ಯಾಪ್ತಿಯ ಬಸ್‌ ನಿಲ್ದಾಣಗಳ ಶೌಚಾಲಯಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ತಿಳಿಸಿದರು.
ಜೆಡಿಎಸ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರಿಗೆ ನಿಗಮಗಳ ವ್ಯಾಪ್ತಿಯ ಎಲ್ಲ ಬಸ್‌ ನಿಲ್ದಾಣಗಳ ಮೂತ್ರಾಲಯ ಹಾಗೂ ಶೌಚಾಲಯಗಳ ಸ್ವಚ್ಛತೆ ನಿರ್ವಹಣೆಯನ್ನು ನೋಂದಾಯಿತ ಸ್ವಚ್ಛತಾ ಗುತ್ತಿಗೆದಾರರಿಗೆ ಟೆಂಡರ್‌ ನೀಡಲಾಗುತ್ತಿದೆ. ಗುತ್ತಿಗೆದಾರರು ಇಲ್ಲದ ಬಸ್‌ ನಿಲ್ದಾಣಗಳಲ್ಲಿ ಸ್ಥಳೀಯ ವ್ಯವಸ್ಥೆಯಡಿ ಸ್ವಚ್ಛತೆ ನಿರ್ವಹಿಸಲಾಗುತ್ತಿದೆ. ಈ ಶೌಚಾಲಯಗಳಲ್ಲಿ ಸ್ವಚ್ಛತೆ ನಿರ್ವಹಣೆ ಕೊರತೆಯಿದೆ. ಹೀಗಾಗಿ ಈ ಶೌಚಾಲಯಗಳನ್ನು ಹೊರಗುತ್ತಿಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿಯ 66, ಬಿಎಂಟಿಸಿಯ 16 ಹಾಗೂ ಈಶಾನ್ಯ ಸಾರಿಗೆ ನಿಗಮದ 31 ಬಸ್‌ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಗೃಹ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಸಚಿವರು, ನಾಲ್ಕು ರಸ್ತೆ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ 551 ಬಸ್‌ ನಿಲ್ದಾಣಗಳಿವೆ. ಕೆಎಸ್‌ಆರ್‌ಟಿಸಿಯ 165 ಬಸ್‌ ನಿಲ್ದಾಣಗಳ ಪೈಕಿ 99 ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಗೃಹ ನಿರ್ಮಿಸಲಾಗಿದೆ. ಬಿಎಂಟಿಸಿಯ ವ್ಯಾಪ್ತಿಯಲ್ಲಿ 14, ವಾಯುವ್ಯ ಸಾರಿಗೆ ನಿಗಮದ 177 ಬಸ್‌ ನಿಲ್ದಾಣಗಳ ಪೈಕಿ 159 ಬಸ್‌ ನಿಲ್ದಾಣ ಹಾಗೂ ಈಶಾನ್ಯ ಸಾರಿಗೆ ನಿಗಮದ 154 ಬಸ್‌ ನಿಲ್ದಾಣಗಳ ಪೈಕಿ 123 ಬಸ್‌ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಗೃಹ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಡೀಸೆಲ್ ದರ ಏರಿಕೆ: ಬಸ್ ಟಿಕೇಟ್ ದರ ಹೆಚ್ಚಳ ಬಗ್ಗೆ ಸ್ಪಷ್ಟನೆ ಕೊಟ್ಟ ಸವದಿ

ಕಾಲಿಡಲೂ ಅಸಹ್ಯ- ಶಾಸಕ:

ಇದಕ್ಕೂ ಮುನ್ನ ಮಾತನಾಡಿದ ಕೆ.ಟಿ. ಶ್ರೀಕಂಠೇಗೌಡ, ಸರ್ಕಾರಿ ಬಸ್‌ ನಿಲ್ದಾಣಗಳಲ್ಲಿ ಶೌಚಾಲಯಗಳಿಗೆ ಕಾಲಿಡಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಸೂಕ್ತ ನಿರ್ವಹಣೆ ಇಲ್ಲದೆ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಉತ್ತಮ ನಿರ್ವಹಣೆಯೊಂದಿಗೆ ಸ್ವಚ್ಛತೆ ಕಾಪಾಡಬೇಕು. ಅದೇ ರೀತಿ ಬಸ್‌ ನಿಲ್ದಾಣಗಳಲ್ಲಿ ಬೆಂಗಳೂರು ಸ್ಯಾಟಲೆಟ್‌ ಬಸ್‌ ನಿಲ್ದಾಣದ ಮಾದರಿಯಲ್ಲಿ ಎಲ್ಲ ಕಡೆ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು. ಜತೆಗೆ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಶಾಪಿಂಗ್‌ ಮಾಲ್‌ ಇತರೆ ಸೌಲಭ್ಯಗಳನ್ನು ಕಲ್ಪಿಸಿದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ, ನಿಗಮಕ್ಕೆ ಆದಾಯ ಸಹ ಬರಲಿದೆ, ಸಾರ್ವಜನಿಕರಿಗೂ ಇದರಿಂದ ಉಪಯೋಗವಾಗಲಿದೆ ಎಂದು ಸಲಹೆ ನೀಡಿದರು.