ಬೀದರ್‌ (ಏ.07): ಹಠದಿಂದ ಈ ಸರ್ಕಾರವನ್ನು ಬಗ್ಗಿಸುತ್ತೇನೆ, ಹಠದಿಂದಲೇ ಪಡಕೊಂಡು ತೀರುತ್ತೇವೆ ಎಂಬ ಧೋರಣೆ ಬಿಡಿ. ಸಂಘರ್ಷಕ್ಕೆ ಹೋಗಬಾರದು, ನಾನು ನಿಮ್ಮ ಮಗನಾಗಿ ಕೇಳಿಕೊಳ್ಳುತ್ತೇನೆ ಕೂಡಲೇ ಕರ್ತವ್ಯಕ್ಕೆ ಹಾಜರಾಗಿ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಾರಿಗೆ ಇಲಾಖೆ ನೌಕರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡುವ ವೇಳೆ ಸಾರಿಗೆ ಇಲಾಖೆ ಮುಷ್ಕರ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ನೀವು ಕೇಳುವುದರಲ್ಲಿ ನ್ಯಾಯ ಇದೆ, ನಾನು ಅಲ್ಲಗೆಳೆಯಲ್ಲ. ಆದರೆ ಕೇಳುತ್ತಿರುವ ಸಮಯ ಸಂದರ್ಭ ಸರಿಯಿಲ್ಲ. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಭರವಸೆ ನೀಡಲು ಈ ಸಂದರ್ಭದಲ್ಲಿ ಆಗುವುದಿಲ್ಲ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಅನುಮತಿ ಕೇಳಿದ್ದೇವೆ. ಆಯೋಗ ಅನುಮತಿ ಕೊಟ್ಟರೇ ಈಗಲೇ ಘೋಷಣೆ ಮಾಡುತ್ತೇವೆ, ಇಲ್ಲವಾದಲ್ಲಿ ಮೇ 4ರ ನಂತರ ಕೊಡುತ್ತೇವೆ. ಅಷ್ಟಕ್ಕೂ ಮುಖ್ಯಮಂತ್ರಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದಾರೆ ಎಂದರೆ ಅದು ಅಂತಿಮ ತೀರ್ಮಾನ ಎಂದು ತಿಳಿಸಿದರು.

ಮುಷ್ಕರದ ಅಸ್ತ್ರಕ್ಕೆ ಸಡ್ಡು ಹೊಡೆದ KSRTC, ಹೊಸ ಅಸ್ತ್ರಕ್ಕೆ ಮಣಿಯುತ್ತಾರಾ ಸಿಬ್ಬಂದಿ..? .

ಸಭೆಗೆ ಮುಖಂಡರೇ ಬರಲಿಲ್ಲ:

ಮಂಗಳವಾರ ನೌಕರರ ಸಂಘದ ಮುಖಂಡರ ಸಭೆ ಕರೆದಿದ್ದೆ. ಆಂತರಿಕವಾಗಿ ಸಭೆ ಮಾಡಿ ನಂತರ ಹೇಳುತ್ತೇವೆ ಎಂದವರು ಸಭೆಗೆ ಬರಲಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಮಾತು ಕೇಳದಿದ್ರೆ ಕ್ರಮ:

ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಹಿಂತೆಗೆದುಕೊಳ್ಳಲು ವಿನಂತಿ ಮಾಡಿದ್ದೇನೆ. ಮುಷ್ಕರ ಕೈ ಬಿಡುವ ವಿಶ್ವಾಸವಿದೆ. ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವದನ್ನ ಬಿಟ್ಟು ಪ್ರತಿಭಟನೆ ಮಾಡಿದರೆ ಹೇಗೆ. ಸಾರಿಗೆ ಇಲಾಖೆಯ ಬಸ್‌ಗಳಲ್ಲಿ ಓಡಾಡೋರು ಬಡವರು, ಮಧ್ಯಮ ವರ್ಗವರು. ಪರೀಕ್ಷೆಗಳು ಇವೆ, ಹಳ್ಳಿಯಿಂದ ಬರುವ ಬಡ ಮಕ್ಕಳಿಗೆ ತೊಂದರೆಯಾಗುತ್ತದೆ, ಇದನ್ನೆಲ್ಲವನ್ನು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡ ಸಚಿವರು, ಆದಾಗ್ಯೂ ಮುಷ್ಕರ ಮುಂದುವರೆಸಿದರೆ ಏನು ಕ್ರಮವಹಿಸಬೇಕು ಅದನ್ನು ವಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕೋಡಿಹಳ್ಳಿ ಹೇಳಿಕೆ ಹಿಂದೆ ಹುನ್ನಾರ:

ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿಕೆ ಹಿಂದೆ ಹುನ್ನಾರ ಇದೆ. ಈ ಹುನ್ನಾರದಿಂದ ಈ ಕಾರ್ಯ ನಡೆಯುತ್ತಿದೆ ಅಂತ ನನ್ನ ಅನಿಸಿಕೆ. ಅದಾಗ್ಯೂ ಸಾರ್ವಜನಿಕರಿಗೆ ತೊಂದರೆಯಾಗದಂತೆ 4 ಸಾವಿರ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.