Lakshmi hebbalkar Interview: ಸಿಟಿ ರವಿಯನ್ನು ನಾನು ಕ್ಷಮಿಸಿದರೆ ನನ್ನನ್ನಾರೂ ಕ್ಷಮಿಸಲ್ಲ!
ಸಿ.ಟಿ.ರವಿ ನಿಂದನೆ ಮಾತುಗಳಿಂದ ತುಂಬಾ ನೊಂದಿರುವ ನಾನು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ. ಲಕ್ಷಾಂತರ ಮಹಿಳೆಯರನ್ನು ಪ್ರತಿನಿಧಿಸಿರುವ ಸಚಿವೆ ನಾನು. ನಾನೇ ಕ್ಷಮಿಸಿದರೆ ಸಮಾಜ ನನ್ನನ್ನು ಕ್ಷಮಿಸುವುದಿಲ್ಲ.
ಶ್ರೀಶೈಲ ಮಠದ
ಈ ಬಾರಿಯ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಗಿಂತ ಹೆಚ್ಚು ಸುದ್ದಿ ಮಾಡಿದ್ದು ಬಿಜೆಪಿ ಶಾಸಕ ಸಿ.ಟಿ.ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವಣ ವಾಗ್ಯುದ್ಧ. ಸಿ.ಟಿ.ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಪ್ರಯೋಗ ಮಾಡಿದ್ದಾರೆಂಬ ಆರೋಪ, ದೂರು-ಪ್ರತಿ ದೂರಿನ ಪರಿಣಾಮ ಸುವರ್ಣಸೌಧದಿಂದಲೇ ಪೊಲೀಸರು ರವಿ ಅವರನ್ನು ಹೊತ್ತೊಯ್ದಾಗ ನಡೆದ ಹೈಡ್ರಾಮಾ ಮುಗಿದು ವಾರ ಕಳೆದರೂ ವಿವಾದ ಮಾತ್ರ ತಣ್ಣಗಾಗಿಲ್ಲ. ಆರೋಪ-ಪ್ರತ್ಯಾರೋಪ, ಸವಾಲು-ಪ್ರತಿ ಸವಾಲುಗಳ ಭರಾಟೆಯಿಂದ ದಿನದಿಂದ ದಿನಕ್ಕೆ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಇದೀಗ ಸಿಐಡಿ ಪ್ರವೇಶವೂ ಆಗಿದೆ. ಈ ಪ್ರಕರಣದಲ್ಲಿ ನನ್ನ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ಸಿ.ಟಿ.ರವಿ ವಾದಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೇಲೆ ಅನ್ಯಾಯ ನಡೆದಿದೆ ಎಂದೂ ಹೇಳುತ್ತಿದ್ದಾರೆ. ಆದರೆ, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ತಮ್ಮ ಗೌರವಕ್ಕೆ ಚ್ಯುತಿ ತಂದ ಸಿ.ಟಿ.ರವಿ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಬೆಳಗಾವಿ ಎಐಸಿಸಿ ಅಧಿವೇಶನದ ಸಿದ್ಧತೆಯ ಒತ್ತಡದ ನಡುವೆಯೂ ಸಿ.ಟಿ.ರವಿ ಪದ ಬಳಕೆಯಿಂದ ತಮಗೆ ಆಗಿರುವ ನೋವು ಹಾಗೂ ಮುಂದಿನ ಹೋರಾಟ ಸೇರಿ ಹಲವು ವಿಷಯಗಳ ಬಗ್ಗೆ ‘ಕನ್ನಡಪ್ರಭ’ ಜತೆ ಮುಖಾಮುಖಿ ಮಾತನಾಡಿದ್ದಾರೆ.
ಸಿ.ಟಿ.ರವಿ ಹಾಗೂ ನಿಮ್ಮ ನಡುವಿನ ವಾಗ್ಯುದ್ಧಕ್ಕೆ ಕಾರಣವೇನು? ಪರಿಷತ್ತಲ್ಲಿ ಅಂದು ನಡೆದಿದ್ದಾದರೂ ಏನು?
ಕೇಂದ್ರ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಡಾ। ಅಂಬೇಡ್ಕರ್ ಕುರಿತು ಆಡಿದ ಮಾತಿನ ಬಗ್ಗೆ ಪರಿಷತ್ತಿನಲ್ಲಿ ಕೊನೆಯ ದಿನ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಸಿ.ಟಿ.ರವಿ ಅವರು ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಪದೇ ಪದೇ ಅವಹೇಳನಕಾರಿಯಾಗಿ ನಿಂದಿಸುತ್ತಿದ್ದರು. ಇದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದಾಗ ಸಿ.ಟಿ.ರವಿ ಅವರು ನಾಗರಿಕತೆ ಮರೆತು, ತಾನೊಬ್ಬ ಪರಿಷತ್ ಸದಸ್ಯ ಎಂಬುದರ ಅರಿವೂ ಇಲ್ಲದೆ ಅತ್ಯಂತ ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದರು. ಒಬ್ಬ ಸಚಿವೆಗೆ ಸದನದಲ್ಲೇ ಹೀಗೆ ಹೇಳಿದ್ದು ಇಡೀ ಹೆಣ್ಣು ಕುಲಕ್ಕೆ ಆದ ಅವಮಾನವಲ್ಲವೇ?
ಸಿ.ಟಿ.ರವಿ ಬಂಧನ, ಪೊಲೀಸರ ವರ್ತನೆ ಹಿಂದೆ ಡಿಕೆ ಶಿವಕುಮಾರ ಕೈವಾಡವಿದೆ: ಈಶ್ವರಪ್ಪ ಆರೋಪ
ಅವರು (ಸಿ.ಟಿ. ರವಿ) ನಾನು ಪ್ರಾಸ್ಟಿ** ಪದ ಬಳಸಿಲ್ಲ. ಫ್ರಸ್ಟ್ರೇಟ್ ಪದ ಬಳಸಿದ್ದೀನಿ ಎಂದಿದ್ದಾರಲ್ಲಾ?
-ಅವರು ಈಗ ಸುಳ್ಳು ಹೇಳುತ್ತಿದ್ದಾರೆ. ಅವರ ಶಬ್ದ ಪ್ರಯೋಗದ ಬಗ್ಗೆ ಎಲ್ಲರ ಬಳಿಯೂ ವಿಡಿಯೋ ದಾಖಲೆಯಿದೆ. ಒಂದು, ಎರಡು ಬಾರಿಯಲ್ಲ 10 ಬಾರಿ ಅತ್ಯಂತ ಕೆಟ್ಟ ಪದ ಬಳಸಿ ನನ್ನ ತೇಜೋವಧೆ ಮಾಡಿದರು.
ಸಭಾಪತಿಯವರೇ ಸಿ.ಟಿ.ರವಿ ಅವರಿಗೆ ಕ್ಲೀನ್‌ಚಿಟ್ ಕೊಟ್ಟು ವಿವಾದಕ್ಕೆ ಅಂತ್ಯ ಹಾಡಲು ಹೇಳಿದ್ದಾರೆ ಅಲ್ಲವೇ?
ನನಗೆ ಆಗಿರುವ ಅವಮಾನ, ಮನಸ್ಸಿಗೆ ಆಗಿರುವ ಘಾಸಿ ನನಗೆ ಮಾತ್ರ ಗೊತ್ತು. ನನ್ನನ್ನು ನೋಡಿ ಎಷ್ಟೋ ಮಹಿಳೆಯರು ರಾಜಕಾರಣಕ್ಕೆ ಬರಲು ಸ್ಫೂರ್ತಿ ಪಡೆದಿದ್ದಾರೆ. ಸದನದಲ್ಲಿ ಒಬ್ಬ ಸಚಿವೆಗೆ ಇಂತಹ ಪದ ಬಳಸಿದವರನ್ನು ಸುಮ್ಮನೆ ಬಿಡಬೇಕಾ? ನಾವು ಇದನ್ನು ಸಹಿಸಿಕೊಳ್ಳಬೇಕಾ?
ಖುದ್ದು ಸಭಾಪತಿ ಹೊರಟ್ಟಿ ಅವರೇ ವಿಡಿಯೋ ಫೇಕ್ ಅಂತಾರಲ್ಲ?
ನಮ್ಮ ಬಳಿ ದಾಖಲೆಗಳಿವೆ. ದಾಖಲೆ ಸಮೇತವಾಗಿ ನಾವು ಮಾತನಾಡುತ್ತಿದ್ದೇವೆ. ನಾನು ಮತ್ತೆ ಸಭಾಪತಿ ಅವರಿಗೆ ದೂರು ಕೊಡುತ್ತೇನೆ. ಪೊಲೀಸ್ ತನಿಖೆ ಬೇಗ ಆಗಬೇಕು. ಎಫ್ಎಸ್ಎಲ್ ವರದಿ ಬೇಗ ಬಹಿರಂಗವಾಗಬೇಕು.
ಇದು ಪೊಲೀಸರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಭಾಪತಿ ಹೊರಟ್ಟಿ ಅವರು ಹೇಳಿದ್ದಾರೆ? ಮುಂದಿನ ಆಯ್ಕೆಗಳೇನು?
ಪೊಲೀಸರು ಏನು ಮಾಡಬೇಕೋ ಅದನ್ನು ಮಾಡಿದ್ದಾರೆ. ನಾನು ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತುತ್ತೇನೆ. ಅಷ್ಟೇ ಅಲ್ಲ ಸಿ.ಟಿ.ರವಿ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ. ಸಾಧ್ಯವಾದರೆ ಇಬ್ಬರನ್ನೂ ಭೇಟಿ ಮಾಡಿ ಘಟನೆ ವಿವರಿಸಿ ನ್ಯಾಯ ಕೇಳುತ್ತೇನೆ.
ಸತೀಶ ಜಾರಕಿಹೊಳಿ ಅವರೇ ‘ಆಗಿದ್ದು ಆಗಿದೆ ಕೇಸು ಮುಗಿಸುವುದು ಒಳ್ಳೆಯದು’ ಅಂತಿದ್ದಾರೆ. ಇದಕ್ಕೆ ಏನಂತೀರಿ?
ಸತೀಶ ಜಾರಕಿಹೊಳಿ ಅವರು ನಮ್ಮ ಹಿರಿಯ ನಾಯಕರು. ನಮ್ಮ ಹಿತದೃಷ್ಟಿಯಿಂದ ನನಗೆ ಸಲಹೆ ನೀಡಿರಬಹುದು. ಘಟನೆಯಿಂದ ನನ್ನ ಮನಸಿಗೆ ಎಷ್ಟೊಂದು ಆಘಾತವಾಗಿದೆ ಎಂಬುದು ನನಗೆ ಮಾತ್ರ ಗೊತ್ತು. ಅದನ್ನು ಊಹಿಸಲು ಯಾರಿಗೂ ಸಾಧ್ಯ ಇಲ್ಲ.
ನಿಮ್ಮ ಹೋರಾಟಕ್ಕೆ ಪಕ್ಷದ ನಾಯಕರ ಬೆಂಬಲವಿಲ್ಲ. ನೀವು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಅರ್ಥ ಬರುವುದಿಲ್ಲವೇ?
ಹಾಗೇನೂ ಇಲ್ಲ. ನನ್ನ ಹೋರಾಟಕ್ಕೆ ಪಕ್ಷದ ನಾಯಕರು ಮತ್ತು ಸರ್ಕಾರ ಬೆಂಬಲ ನೀಡಿದೆ. ಸದಾ ನನ್ನ ಬೆಂಬಲಕ್ಕೆ ನಿಲ್ಲುತ್ತದೆ ಎಂಬ ವಿಶ್ವಾಸವೂ ನನಗಿದೆ. ಇದರಲ್ಲಿ ಎರಡನೇ ಮಾತೇ ಇಲ್ಲ.
ಪರಿಷತ್ ಸದಸ್ಯರಾದ ಸಿ.ಟಿ ರವಿ ಅವರನ್ನು ಕೊಲೆಗಾರ ಎಂದಿದ್ದೀರಿ. ಅದನ್ನು ಸಮರ್ಥಿಸಿಕೊಳ್ಳುತ್ತೀರಾ?
-ನಮ್ಮ ನಾಯಕರ ಕುರಿತು ಮಾತನಾಡಿದಾಗ ನಾನು ಸುಮ್ಮನೆ ಕುಳಿತುಕೊಳ್ಳಲು ಹೇಗೆ ಸಾಧ್ಯ? ರಾಹುಲ್ ಗಾಂಧಿ ಅವರೊಬ್ಬ ಡ್ರಗ್ ಅಡಿಕ್ಟ್ ಎಂದು ಪದೇ ಪದೇ ಹೇಳಿದಾಗ ನೀವು ಅಪಘಾತ ಮಾಡಿ ಮೂವರನ್ನು ಕೊಲೆ ಮಾಡಿದ್ದೀರಲ್ಲ ಎಂದು ಹೇಳಿದ್ದು ನಿಜ. ನನ್ನ ಮಾತಿನಿಂದ ನಾನು ಹಿಂದೆ ಸರಿದಿಲ್ಲ. ಹಾಗಂತ 10 ಬಾರಿ ಅತ್ಯಂತ ಕೆಟ್ಟ ಪದ ಬಳಸಿ ನನ್ನ ತೇಜೋವಧೆ ಮಾಡುತ್ತಾರಾ?
ಒಂದೊಮ್ಮೆ ಸಿ.ಟಿ.ರವಿ ಅವರು ಕ್ಷಮೆ ಕೇಳಿದರೆ ಸುಮ್ಮನಾಗುತ್ತೀರಾ?
-ಖಂಡಿತವಾಗಿಯೂ ಇಲ್ಲ. ಸಿ.ಟಿ.ರವಿ ನಿಂದನೆ ಮಾತುಗಳಿಂದ ತುಂಬಾ ನೊಂದಿರುವ ನಾನು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ. ಲಕ್ಷಾಂತರ ಮಹಿಳೆಯರನ್ನು ಪ್ರತಿನಿಧಿಸಿರುವ ಸಚಿವೆ ನಾನು. ನಾನೇ ಕ್ಷಮಿಸಿದರೆ ಸಮಾಜ ನನ್ನನ್ನು ಕ್ಷಮಿಸುವುದಿಲ್ಲ.
- ನಾನು ಆ ಪದವನ್ನೇ ಬಳಸಿಲ್ಲ ಎಂದು ಸಿ.ಟಿ.ರವಿ ಹೇಳುತ್ತಿದ್ದಾರಲ್ಲಾ?
ಸಿ.ಟಿ.ರವಿ ಈಗ ಸುಳ್ಳು ಹೇಳುತ್ತಿದ್ದಾರೆ. ಅವರು ಆ ಪದ ಬಳಸಿಲ್ಲ ಎಂದು ಶ್ರೀಕ್ಷೇತ್ರ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಮಾಡಿ ಹೇಳಲಿ.
ಸಿ.ಟಿ.ರವಿ ಅವರನ್ನು ಸುವರ್ಣಸೌಧದಿಂದಲೇ ಅಕ್ರಮವಾಗಿ ಬಂಧಿಸಿ ಏಳೆಂಟು ಗಂಟೆ ಕಾಲ ಪೊಲೀಸರು ಸುತ್ತಾಡಿಸಿದರು ಎಂದು ಬಿಜೆಪಿಯವರು ದೂರುತ್ತಿದ್ದಾರೆ. ಇದು ಸರ್ಕಾರಕ್ಕೆ ಕಪ್ಪು ಚುಕ್ಕೆ ಅಲ್ಲವೇ?
ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಅದು ಅವರ ಕೆಲಸ. ಇದರಿಂದಾಗಿ ಸರ್ಕಾರಕ್ಕೆ ಕಪ್ಪುಚುಕ್ಕೆ ಬರುವ ಪ್ರಶ್ನೆಯೇ ಇಲ್ಲ.
ತಮ್ಮನ್ನು ಎನ್ಕೌಂಟರ್ ಮಾಡಲು ಯತ್ನಿಸಲಾಗಿದೆ ಎಂದೂ ರವಿ ಆರೋಪಿಸಿದ್ದಾರೆ?
ಸಿ.ಟಿ.ರವಿ ಅವರಿಗೆ ಏನಾಗಿದೆ? ಗಾಯ ಎಷ್ಟಾಗಿದೆ? ಪೊಲೀಸರು ಎನ್ಕೌಂಟರ್ ಮಾಡುತ್ತಿದ್ದರು ಎನ್ನಲು ಅವರಿಗೆ ನಾಚಿಕೆ ಆಗಲ್ಲವೇ? ಇಡೀ ಕರ್ನಾಟಕದ ಜನತೆ ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ಇದು ಪ್ರಕರಣದ ದಾರಿ ತಪ್ಪಿಸುವ ಕೆಲಸವಷ್ಟೇ.
ಸಚಿವರ ಪ್ರಭಾವದಿಂದ ನಾನು ಪ್ರತಿದೂರು ಕೊಟ್ಟರೂ ಪೊಲೀಸರು ಸ್ವೀಕರಿಸಿಲ್ಲ ಎಂಬುದು ಸಿ.ಟಿ. ರವಿ ಆರೋಪ. ಇದರಲ್ಲಿ ನಿಜಾಂಶ ಇಲ್ಲವೇ?
ಖಂಡಿತಾ ಸುಳ್ಳು. ನಾನು ಯಾರ ಮೇಲೂ ಪ್ರಭಾವ ಬೀರುವ ಕೆಲಸ ಮಾಡಿಲ್ಲ. ವಿನಾಕಾರಣ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.
ಒಬ್ಬ ಪರಿಷತ್ ಸದಸ್ಯರನ್ನು ಪೊಲೀಸರು ರಾತ್ರಿಯಿಡೀ ಸುತ್ತಾಡಿಸುವ ಅಗತ್ಯವೇನಿತ್ತು?
ಸಿ.ಟಿ. ರವಿ ಅವರ ಸುರಕ್ಷತೆ ದೃಷ್ಟಿಯಿಂದ ಠಾಣೆಯಿಂದ ಠಾಣೆಗೆ ರಾತ್ರಿಯಿಡೀ ಸುತ್ತಾಡಿಸಿರುವುದಾಗಿ ಪೊಲೀಸರೇ ಸ್ಪಷ್ಟಪಡಿಸಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಸಿ.ಟಿ.ರವಿ ಜೊತೆಗೆ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ. ಠಾಣೆ ಹೊರಗೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರಲ್ಲ. ಇದಕ್ಕೂ ನನಗೆ ಏನು ಸಂಬಂಧ?
ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಪ್ರಬಲ ನಾಯಕಿಯಾಗಿ ಬೆಳೆಯುತ್ತಿರುವ ನಿಮಗೆ ಈ ವಿವಾದ ಅಡ್ಡಿ ಆಗುವುದಿಲ್ಲವೇ?
ಲಕ್ಷಾಂತರ ಮಹಿಳೆಯರ ಪ್ರತಿನಿಧಿಯಾಗಿರುವ ನಾನು ಸಂಪುಟದಲ್ಲಿರುವ ಏಕೈಕ ಮಹಿಳೆ. ಸಚಿವೆಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಚಾರಿತ್ರ್ಯಹರಣ ಮಾಡಿದರೆ, ಸ್ವಾಭಿಮಾನ ಕೆಣಕಿದರೆ ಸುಮ್ಮನಿರಲು ಹೇಗೆ ಸಾಧ್ಯ? ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ.
ಸಿಟಿ ರವಿ ಪ್ರಕರಣ ಸಿಐಡಿಗೆ ಒಪ್ಪಿಸಿದ ಸರ್ಕಾರ, ನೀವು ಹೇಳಿದಂತೆ ವರದಿ ಕೊಡ್ತಾರೆ ಎಂದ ವಿಪಕ್ಷ!
ಹಿಂದೆ ಬಿಜೆಪಿ ನಾಯಕರು ನಿಮ್ಮ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಿದ್ದು ಇದೆಯೆ?
- ರಾಜಕಾರಣದಲ್ಲಿ ದ್ವೇಷ ಭಾಷಣಗಳು ಸಾಮಾನ್ಯ. ಆದರೆ, ಇದುವರೆಗೂ ಇಂಥ ನೀಚ ಪದ ಬಳಕೆ, ಕೆಟ್ಟ ರಾಜಕೀಯ ನೋಡಿಲ್ಲ. ವಿಧಾನ ಪರಿಷತ್ ಅಂದರೆ ಬುದ್ಧಿವಂತರ ಚಾವಡಿ ಅಂತಾರೆ. ಆದರೆ ಅಲ್ಲಿ ಆಗಿದ್ದೇನು? ಈವರೆಗೂ ಯಾರೂ ನನ್ನ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಿರಲಿಲ್ಲ. ಇದೇ ಮೊದಲು.
ಅಂತಿಮವಾಗಿ ಈ ಪ್ರಕರಣದಲ್ಲಿ ನಿಮಗೆ ಸಿಗುವ ವಿಶ್ವಾಸ ಇದೆಯೇ?
ಖಂಡಿತವಾಗಿಯೂ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ನ್ಯಾಯ ಸಿಗುವವರೆಗೂ ಎಲ್ಲಾ ರೀತಿಯ ಹೋರಾಟ ಮುಂದುವರೆಸುತ್ತೇನೆ. ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ. ಹೆಣ್ಣನ್ನು ಕೀಳಾಗಿ ನೋಡುವ, ನೀಚ ಭಾಷೆ ಬಳಕೆ ಮಾಡುವವರಿಗೆ ಬುದ್ಧಿ ಕಲಿಸಲೇ ಬೇಕು. ಇದರಲ್ಲಿ ನನಗೆ ನ್ಯಾಯ ಸಿಗಲಿದೆ. ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ.