ಪ್ರಧಾನಿ ಮೋದಿ ಹೇಳಿಕೆ ಗಮನಿಸಿದ್ರೆ ನಮ್ಮ ಸರ್ಕಾರ ಅಲುಗಾಡಿಸೋ ಪ್ಲಾನ್ ಮಾಡಿದಂತೆ ಭಾಸವಾಗ್ತಿದೆ : ಸಚಿವ ಕೃಷ್ಣ ಬೈರೇಗೌಡ

ಪ್ರಧಾನಿ ಹೇಳಿಕೆ ಗಮನಿಸಿದರೆ ಅವರು ನಮ್ಮ ಸರ್ಕಾರವನ್ನು ಅಲುಗಾಡಿಸುವ ಆಲೋಚನೆ ಮಾಡಿದಂತೆ ಭಾಸವಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

Minister kriishna byregowda statement agains BJP operation kamala at bagalkote rav

ಬಾಗಲಕೋಟೆ (ನ.6) :  ಪ್ರಧಾನಿ ಹೇಳಿಕೆ ಗಮನಿಸಿದರೆ ಅವರು ನಮ್ಮ ಸರ್ಕಾರವನ್ನು ಅಲುಗಾಡಿಸುವ ಆಲೋಚನೆ ಮಾಡಿದಂತೆ ಭಾಸವಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ, ಸಿಎಂ, ಡಿಸಿಎಂ ಸೇರಿ ಕರ್ನಾಟಕ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಮೋದಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಿಂದೆಯೂ ಒಮ್ಮೆ ಪ್ರಧಾನಿ ನಮ್ಮ ಸರ್ಕಾರವನ್ನು ಅಲುಗಾಡಿಸುವ ಆಲೋಚನೆ ಮಾಡಿದ್ದರು. ಈಗಲೂ ನಾವು ಅದೇ ರೀತಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಪ್ರಧಾನಿಯವರ ಯಾವ ಪ್ರಯತ್ನವೂ ಈಡೇರುವುದಿಲ್ಲ. ನಮ್ಮಲ್ಲಿ ಒಗ್ಗಟ್ಟಿದೆ, ಸಹಮತವಿದೆ, ನಾವೆಲ್ಲರೂ ಒಂದಾಗಿದ್ದೇವೆ ಎಂದು ಹೇಳಿದರು.

 

ನಮ್ಮದು ಪ್ರಪಂಚದಲ್ಲೇ ಮಾದರಿ ಸರ್ಕಾರ: ಸಚಿವ ಕೃಷ್ಣ ಬೈರೇಗೌಡ

ಕೇಂದ್ರದೊಂದಿಗೆ ಸಂಘರ್ಷ ಮಾಡುವ ಉದ್ದೇಶ ನಮಗಿಲ್ಲ:

ರಾಜ್ಯ-ಕೇಂದ್ರ ಸರ್ಕಾರಗಳ ಸಂಘರ್ಷದಲ್ಲಿ ರಾಜ್ಯದ ಜನರಿಗೆ ಅನ್ಯಾಯ ಆಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು, ಕೇಂದ್ರ ಸರ್ಕಾರದೊಂದಿಗೆ ಯಾವುದೇ ರೀತಿಯ ಸಂಘರ್ಷ ಮಾಡುವ ಉದ್ದೇಶ ನಮಗಿಲ್ಲ. ನಿಯಮಬದ್ಧವಾಗಿ ನಮಗೆ ಬರಬೇಕಾದ ಹಣದ ಪ್ರತಿ ಪೈಸೆಯನ್ನು ಪಡೆಯುವುದು ನಮ್ಮ ಹಕ್ಕು. ಅದನ್ನು ನಾವು ರಾಜ್ಯದ ಜನರಿಗೆ ತಲುಪಿಸುತ್ತೇವೆ. ಜನರಿಗೆ ಸಲ್ಲಬೇಕಾದ ಹಣವನ್ನು ಸಂವಿಧಾನ ಬದ್ಧವಾಗಿ ನೀಡುವಂತೆ ನಾವು ಕೇಂದ್ರವನ್ನು ಕೇಳಿದ್ದೇವೆ. ಸೆ.23ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರಕ್ಕೆ 8 ಪತ್ರಗಳನ್ನು ಬರೆದಿದ್ದೇವೆ. ಪ್ರಧಾನಿ ಭೇಟಿಗೆ ಅನುಮತಿ ಕೂಡ ಕೇಳಿದ್ದೇವೆ. ಇಲ್ಲಿ ಯಾವುದೇ ಸಂಘರ್ಷ ಇಲ್ಲ. ನಾವು ನಿಯಮಬದ್ಧವಾಗಿ ಹಕ್ಕೊತ್ತಾಯ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜನರ ಸಂಕಷ್ಟಕ್ಕೆ ನೆರವು ನೀಡಬೇಕಾದದ್ದು ಕೇಂದ್ರದ ಕರ್ತವ್ಯ. ನಮ್ಮ ಮನವಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಬೇಕು. ಬರದ ನೆರಳಿನಲ್ಲಿರುವ ರಾಜ್ಯಕ್ಕೆ ನೆರವು ನೀಡಬೇಕು. ಆಗ ಸಂಘರ್ಷದ ಪ್ರಶ್ನೆಯೇ ಬರುವುದಿಲ್ಲ. ನಾವು ನಮ್ಮ ಜನರ ಪರವಾಗಿ ಹಕ್ಕೊತ್ತಾಯ ಮಾಡದೇ ಸುಮ್ಮನೆ ಕುಳಿತರೆ ನಮ್ಮ ನಾಡಿನ ಜನರಿಗೆ ನಾವು ದ್ರೋಹ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಯಾವುದೇ ಸ್ಥಳದಲ್ಲಿ ಬಂದು ಭೇಟಿಯಾಗುವಂತೆ ನಮಗೆ ಸಮಯಾವಕಾಶ ನೀಡಿದರೂ ನಾವು ಅಲ್ಲಿಗೇ ಹೋಗಿ ಅವರನ್ನು ಭೇಟಿ ಮಾಡಿ ಈ ಕುರಿತು ಮಾತನಾಡುತ್ತೇವೆ ಎಂದರು.

ನಮ್ಮ ರಾಜ್ಯದ ಜನರ ಪರವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಯಾರೋ ದೊಡ್ಡವರು ಎಂದು ಅವರ ಎದುರು ಉಸಿರುಗಟ್ಟಿ ಕೂರುವುದಲ್ಲ, ಯಾರೇ ದೊಡ್ಡವರಿರಲಿ, ಚಿಕ್ಕವರಿರಲಿ ಅವರ ಎದುರು ಜನಪರ ಧ್ವನಿ ಎತ್ತಬೇಕಾದದ್ದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ನಾವು ಈಗಾಗಲೇ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ್ದೇವೆ. ಕೇಂದ್ರದಿಂದ ಬರ ಅಧ್ಯಯನಕ್ಕೆ ತಂಡ ಬಂದಿದ್ದು ನಿಮಗೂ ಗೊತ್ತಿದೆ. ಅವರಿಗೆ ಕೇಳುವ ಪ್ರಶ್ನೆಯನ್ನು ನೀವು ನನಗೆ ಕೇಳಿದರೆ ನಾನೇನು ಉತ್ತರ ಹೇಳಲಿ? ಸೂರ್ಯನಿಗೆ ಟಾರ್ಚ್‌ ಹಿಡಿಯುವ ಕೆಲಸ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಇಡೀ ಜಗತ್ತಿಗೆ ಗೊತ್ತಿರುವ ವಿಷಯದ ಕುರಿತು ಪ್ರಶ್ನೆ ಮಾಡಿದರೆ ನಾನೇನು ಹೇಳಲಿ. ಬಿಜೆಪಿಗರಿಗೆ ರಾಜ್ಯದ ಜನರ ಬಗ್ಗೆ ಸಾಸಿವೆಕಾಳಿನಷ್ಟಾದರೂ ಕಾಳಜಿ ಇದ್ದರೆ ಕೇಂದ್ರದಿಂದ ಕರ್ನಾಟಕ ರೈತರಿಗೆ ಬರಬೇಕಾದ ಹಣವನ್ನು ಮೊದಲು ಬಿಡುಗಡೆ ಮಾಡಿಸಲಿ. ಆಮೇಲೆ ಇಲ್ಲಿ ಬಂದು ಓಡಾಡಲಿ. ಅಲ್ಲಿ ಹೋಗಿ ಉಸಿರು ಕೂಡ ಬಿಡುವ ಧೈರ್ಯ ಇಲ್ಲದ ರಾಜ್ಯದ ಬಿಜೆಪಿಯ ಮುಖಂಡರು ಇಲ್ಲಿ ಬಂದು ಇಲ್ಲಸಲ್ಲದ ಸುಳ್ಳು ಹೇಳಿ ಕಾಲಕಳೆಯುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯ ಆಗುತ್ತದೆಯೇ ಹೊರತು ಏನೂ ಲಾಭ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯವರು ಬರ ಅಧ್ಯಯನ ನಡೆಸಿರುವ ವಿಚಾರದ ಕುರಿತು ಮಾತನಾಡಿದ ಅವರು, ನಾವು ರಾಜ್ಯದ ಒಟ್ಟು 223 ತಾಲೂಕುಗಳಲ್ಲಿ ಬರ ಘೋಷಣೆ ಮಾಡಿದ್ದೇವೆ. ದೇಶದಲ್ಲಿ ಹತ್ತು ಹನ್ನೆರಡು ರಾಜ್ಯಗಳಲ್ಲಿ ಬರ ಇದ್ದರೂ ಕರ್ನಾಟಕದಲ್ಲಿ ಮಾತ್ರ ಅಧಿಕೃತವಾಗಿ ಬರ ಘೋಷಣೆ ಮಾಡಿ, ಬೆಳೆ ನಷ್ಟದ ವರದಿಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅಂದಾಜು ₹17.5 ಸಾವಿರ ಕೋಟಿ ಪರಿಹಾರ ಕೂಡ ಕೇಳಿದ್ದೇವೆ. ಪ್ರಧಾನಿಯೂ ಸೇರಿದಂತೆ ಕೇಂದ್ರದ ಗೃಹ ಸಚಿವರು, ಕೃಷಿ ಸಚಿವರು ನಮಗೆ ಭೇಟಿಯ ಅವಕಾಶ ನೀಡಿಲ್ಲ. ರಾಜ್ಯದ ಜನತೆಯ ಪರಿಸ್ಥಿತಿ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇದ್ದರೆ ನಮಗೆ ಪ್ರಧಾನಿ ಹಾಗೂ ಕೇಂದ್ರ ಸಚಿವರ ಭೇಟಿ ಮಾಡಲು ಸಮಯಾವಕಾಶವನ್ನಾದರೂ ಕೊಡಿಸಬೇಕು. ಅದನ್ನು ಬಿಟ್ಟು ಬಿಟ್ಟಿ ಪ್ರಚಾರ ಪಡೆಯಲು ಏನೋ ಒಂದನ್ನು ಮಾಡುವುದು ಹೇಳುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಆಪರೇಷನ್ ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ

ಇವತ್ತು ಮುಖ್ಯವಾಗಿ ಆಗಬೇಕಿರುವುದು ಜನಪರವಾದ ಅಭಿವೃದ್ಧಿ ಕಾರ್ಯ. ನಾವು ಆ ಕೆಲಸದ ಬಗ್ಗೆ ಗಮನಹರಿಸಿದ್ದೇವೆ. ಬಿಜೆಪಿಯವರು ಆಪರೇಷನ್ ಮಾಡ್ತಾರೋ ಅಥವಾ ಇನ್ನೊಂದು ಮಾಡುತ್ತಾರೋ ಮಾಡಲಿ. ಬಿಜೆಪಿ ಆಪರೇಷನ್ ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ. ರಾಜ್ಯದ ಜನರ ಆಶೀರ್ವಾದ ನಮ್ಮ ಮೇಲಿದೆ ಎಂದರು.

ಪ್ರದಾನಿ ಮೋದಿ ಏನಾದರೂ ಹೇಳಲಿ, ನಾವು ನಮ್ಮ ಜನರ ಕೆಲಸ ಮಾಡುತ್ತೇವೆ. ಬಿಜೆಪಿಯವರು ಅಂಬಾನಿ-ಅದಾನಿ ಅವರಂಥ ಶ್ರೀಮಂತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಾವು ನಮ್ಮ ರಾಜ್ಯದ ಜನಸಾಮಾನ್ಯರಿಗೆ ಅಭಿವೃದ್ಧಿಯ ಗ್ಯಾರಂಟಿ ನೀಡಿ, ನುಡಿದಂತೆ ನಡೆದಿದ್ದೇವೆ. ನಮ್ಮ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯ ನೋಡಿ ಸಹಿಸಲಾಗದೇ ಮೋದಿ ಉಡಾಫೆ ಮಾತುಗಳನ್ನ ಆಡುತ್ತಿದ್ದಾರೆ. ಇದರಿಂದ ನಾವು ಧೃತಿಗೆಡುವುದಿಲ್ಲ. ನಮ್ಮ ಲಕ್ಷ್ಯ ಬೇರೆಡೆ ಹೊಗಲ್ಲ. ದುಡಿಯುವ ವರ್ಗದ ಜನರ ಹೊಟ್ಟೆ ಮೇಲೆ ಯಾರೂ ಕಾಲಿಡಬಾರದು ಎಂಬುದು ನಮ್ಮ ಸರ್ಕಾರದ ಕಾಳಜಿಯಾಗಿದೆ. ದುಡಿಯುವ ವರ್ಗದ ಜನರ ಪರವಾಗಿ ಕೆಲಸ ಮಾಡುವುದು ನಮ್ಮ ಗುರಿಯಾಗಿದೆ. ಬಡಜನರ ಪರ ಕಾರ್ಯನಿರ್ವಹಿಸುವ ನಮ್ಮ ಸರ್ಕಾರವನ್ನು ಬೀಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಆದರೆ, ರಾಜ್ಯದ ಜನರ ಆಶೀರ್ವಾದ ನಮ್ಮನ್ನು ರಕ್ಷಿಸುತ್ತದೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದರು.

ಲೋಕಸಭೆ ಚುನಾವಣೆ ಜಯಕ್ಕೆ 'ಗ್ಯಾರಂಟಿ' ಅಸ್ತ್ರ ಬಳಸಿ: ಸಚಿವ ಕೃಷ್ಣ ಬೈರೇಗೌಡ

ಮಾಧ್ಯಮಗಳ ವಿರುದ್ಧ ಸಚಿವ ಗರಂ

ಕೇಂದ್ರಕ್ಕೆ ರಾಜ್ಯ ಸರ್ಕಾರ ಬರ ಅಧ್ಯಯನದ ವರದಿ ಸಲ್ಲಿಸಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರು ಹೇಳಿದ್ದಾರಲ್ಲ ಎಂಬ ಪ್ರಶ್ನೆ ಕೇಳುತ್ತಿದ್ದಂತೆ ಮಾಧ್ಯಮದವರ ವಿರುದ್ಧ ಗರಂ ಆದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಕಟೀಲ್‌ ಏನು ಮಾತನಾಡುತ್ತಾರೆ ಎಂಬುದು ಅವರಿಗೇ ಗೊತ್ತಿಲ್ಲ. ನೀವು ಅವರ ಹೇಳಿಕೆ ಮುಂದಿಟ್ಟುಕೊಂಡು ಪ್ರಶ್ನಿಸಿದರೆ ಹೇಗೆ, ಗಂಭೀರ ಪ್ರಶ್ನೆಗಳನ್ನು ಕೇಳಿದರೆ ನಾನು ಉತ್ತರ ಕೊಡುತ್ತೇನೆ. ಟಿಆರ್‌ಪಿಗೋಸ್ಕರ ಇಲ್ಲಸಲ್ಲದ ಪ್ರಶ್ನೆಗಳನ್ನು ನೀವು ಕೇಳಬಾರದು ಎಂದರು.

Latest Videos
Follow Us:
Download App:
  • android
  • ios