ಸರ್ಕಾರ ಮುಂಗಡ ಹಣ ಬಿಡುಗಡೆ ಮಾಡದಿದ್ದರೆ ‘ಗೃಹಜ್ಯೋತಿ’ ಗ್ರಾಹಕರಿಂದ ವಿದ್ಯುತ್‌ ಶುಲ್ಕ ವಸೂಲಿ ಮಾಡುವ ಕುರಿತ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿದ್ದ ಸೆಸ್ಕ್ (ಚೆಸ್ಕಾಂ) ವಾಣಿಜ್ಯ ವ್ಯವಹಾರಗಳ ಪ್ರಧಾನ ವ್ಯವಸ್ಥಾಪಕರಿಗೆ ನೋಟಿಸ್‌ ನೀಡುವಂತೆ ಸೂಚಿಸಿರುವುದಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.  

ಬೆಂಗಳೂರು (ಮಾ.01): ಸರ್ಕಾರ ಮುಂಗಡ ಹಣ ಬಿಡುಗಡೆ ಮಾಡದಿದ್ದರೆ ‘ಗೃಹಜ್ಯೋತಿ’ ಗ್ರಾಹಕರಿಂದ ವಿದ್ಯುತ್‌ ಶುಲ್ಕ ವಸೂಲಿ ಮಾಡುವ ಕುರಿತ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿದ್ದ ಸೆಸ್ಕ್ (ಚೆಸ್ಕಾಂ) ವಾಣಿಜ್ಯ ವ್ಯವಹಾರಗಳ ಪ್ರಧಾನ ವ್ಯವಸ್ಥಾಪಕರಿಗೆ ನೋಟಿಸ್‌ ನೀಡುವಂತೆ ಸೂಚಿಸಿರುವುದಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. ಗೃಹಜ್ಯೋತಿ ಸಬ್ಸಿಡಿ ಹಣ ಮುಂಗಡವಾಗಿ ಪಾವತಿಸದಿದ್ದರೆ ಕೆಇಆರ್‌ಸಿ 2008ರ ನಿಯಮಾವಳಿ ಅಡಿ ಗ್ರಾಹಕರಿಂದ ಒತ್ತಾಯ ಮಾಡಿ ವಿದ್ಯುತ್‌ ಶುಲ್ಕ ಸಂಗ್ರಹ ಮಾಡುವುದಾಗಿ ಚೆಸ್ಕಾಂ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಬಗ್ಗೆ ಸೋಮವಾರ ‘ಕನ್ನಡಪ್ರಭ’ ಪ್ರಕಟಿಸಿದ್ದ ವಿಶೇಷ ವರದಿ ತೀವ್ರ ಸಂಚಲನ ಸೃಷ್ಟಿಸಿತ್ತು.

ಈ ಬಗ್ಗೆ ಶುಕ್ರವಾರ ಇಂಧನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಕೆಪಿಟಿಸಿಎಲ್‌, ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಹಾಗೂ ವಿವಿಧ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್‌ ಅವರು, ‘ಎಲ್ಲ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ್ದೇನೆ. ಈ ವೇಳೆ ಮುಖ್ಯವಾಗಿ ಎಸ್ಕಾಂಗಳಿಗೆ ಇಂಧನ ಇಲಾಖೆಯಿಂದ ವಿದ್ಯುತ್‌ ಕೊರತೆ ಉಂಟಾಗುತ್ತಿದೆಯೇ? ಸಬ್ಸಿಡಿ ಹಣ ಬಿಡುಗಡೆಯಲ್ಲಿ ವಿಳಂಬವಾಗಿದೆಯೇ? ಎಂದು ಪ್ರಶ್ನೆ ಮಾಡಿದ್ದೇನೆ.

ಜತೆಗೆ ಸಭೆಯಲ್ಲಿದ್ದ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ, ‘ಸರ್ಕಾರ ಸಬ್ಸಿಡಿ ಹಣ ನೀಡದಿದ್ದರೆ ಗ್ರಾಹಕರಿಂದ ವಸೂಲಿ ಮಾಡುವುದಾಗಿ ಯಾಕೆ ಕೆಇಆರ್‌ಸಿಗೆ ಪ್ರಸ್ತಾವನೆ ಕಳುಹಿಸಿದ್ದೀರಿ’ ಎಂದೂ ಪ್ರಶ್ನಿಸಿದ್ದೇನೆ ಎಂದು ಹೇಳಿದರು. ಇದಕ್ಕೆ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ‘ನನ್ನ ಗಮನಕ್ಕೆ ಬಾರದೆ ವಾಣಿಜ್ಯ ವಿಭಾಗದ ಪ್ರಧಾನ ವ್ಯವಸ್ಥಾಪಕರು ಈ ರೀತಿ ಪ್ರಸ್ತಾವನೆಯನ್ನು ಕೆಇಆರ್‌ಸಿಗೆ ಕಳುಹಿಸಿದ್ದಾರೆ’ ಎಂದು ಹೇಳಿದ್ದಾರೆ. ಹೀಗಾಗಿ ಅವರಿಗೆ ನೋಟಿಸ್‌ ನೀಡಿ ವಿವರಣೆ ಪಡೆಯಲು ತಿಳಿಸಿದ್ದೇನೆ ಎಂದು ಕೆ.ಜೆ. ಜಾರ್ಜ್‌ ಹೇಳಿದರು.

ಗೃಹಜ್ಯೋತಿ ಹಣ ಜನರಿಂದ ವಸೂಲಿ ಮಾಡಲ್ಲ: ಸಚಿವ ಕೆ.ಜೆ.ಜಾರ್ಜ್‌

ಸರ್ಕಾರ ಸಬ್ಸಿಡಿ ಹಣ ಬಿಡುಗಡೆ ಮಾಡದಿದ್ದರೆ ಗ್ರಾಹಕರಿಂದ ಸಂಗ್ರಹಿಸುವುದಾಗಿ ಚೆಸ್ಕಾಂ ಅವರು ಪ್ರಸ್ತಾವನೆ ಕಳುಹಿಸಿದ್ದಾರೆ. ನಾವು ಮುಂಗಡವಾಗಿಯೇ ಸಬ್ಸಿಡಿ ಹಣ ಪಾವತಿಸುತ್ತಿದ್ದೇವೆ. ಹೀಗಾಗಿ ಗ್ರಾಹಕರಿಂದ ವಸೂಲಿ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಆದರೂ ಈ ರೀತಿ ಪ್ರಸ್ತಾವನೆ ಗೊಂದಲ ಉಂಟು ಮಾಡುವುದರಿಂದ ವಿವರಣೆ ಕೇಳಿ ನೋಟಿಸ್‌ ನೀಡುವಂತೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇನ್ನು ಎಸ್ಸಿಪಿ, ಟಿಎಸ್ಪಿ ಹಣ ಗ್ಯಾರಂಟಿಗಳಿಗೆ ವರ್ಗಾವಣೆ ಆಗುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ. ಜಾರ್ಜ್‌, ನಮಗೆ ಸರ್ಕಾರ ಗೃಹಜ್ಯೋತಿ ಹಣವನ್ನು ಮುಂಗಡವಾಗಿ ಪಾವತಿಸುತ್ತಿದೆ. ನಾವು ಗೃಹಜ್ಯೋತಿ ಯೋಜನೆಯನ್ನು ಎಲ್ಲ ವರ್ಗದ ಜನರಿಗೂ ನೀಡುತ್ತಿದ್ದೇವೆ. ಸರ್ಕಾರ ಯಾವ ಹಣ ನಮಗೆ ಬಿಡುಗಡೆ ಮಾಡುತ್ತಿದೆ ಎಂಬುದು ನಮಗೆ ಗೊತ್ತಿಲ್ಲ. ಈ ಬಗ್ಗೆ ನೀವು ಹಣಕಾಸು ಇಲಾಖೆಯನ್ನೇ ಕೇಳಿ ಎಂದು ಉತ್ತರಿಸಿದರು.