ರಾಜ್ಯದಲ್ಲಿ ಕೊರೋನಾ ಲಸಿಕೆ ಕೊರತೆ: ಸಚಿವ ಸುಧಾಕರ್ ಹೇಳಿದ್ದಿಷ್ಟು
* ಕೇಂದ್ರದ ಮುಂದೆ ಬೇಡಿಕೆ ಇಟ್ಟು ರಾಜ್ಯಕ್ಕೆ ಹೆಚ್ಚಿನ ಲಸಿಕೆ ಪಡೆಯುತ್ತೇನೆ.
* ದೇಶದಲ್ಲೇ ಅತೀ ಹೆಚ್ಚು ವಾಕ್ಸಿನ್ ಕೊಟ್ಟ ರಾಜ್ಯ ನಮ್ಮದಾಗಿದೆ
* ಮೈಸೂರಿನಲ್ಲಿ ಡೆಲ್ಟಾಪ್ಲಸ್ ಸೋಂಕಿನ ಪತ್ತೆಗೆ ಲ್ಯಾಬ್ ಆರಂಭಿಸಲು ಸಿದ್ಧತೆ
ಮೈಸೂರು/ಬೆಂಗಳೂರು(ಜೂ.30): ರಾಜ್ಯದಲ್ಲಿ ಕೊರೋನಾ ಲಸಿಕೆ ಕೊರತೆಯೇ ಇಲ್ಲ. ಕೇಂದ್ರದ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು ಬುಧವಾರ ರಾಜ್ಯಕ್ಕೆ ಇನ್ನಷ್ಟು ಲಸಿಕೆ ರಾಜ್ಯಕ್ಕೆ ಬರಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಮತ್ತು ಮೈಸೂರುಗಳಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಈಗಲೂ ದಿನಕ್ಕೆ 2- 3 ಲಕ್ಷ ಕೊರೋನಾ ಲಸಿಕೆ ಕೊಡುತ್ತಿದ್ದೇವೆ. ಈಗಲೂ ನಮ್ಮ ಬಳಿ 5 ಲಕ್ಷ ಲಸಿಕೆ ದಾಸ್ತಾನು ಇದೆ. ರಾಜ್ಯದಲ್ಲಿ ಡ್ರೈ ಎನ್ನುವ ಪರಿಸ್ಥಿತಿಯೇ ಬಂದಿಲ್ಲ ಎಂದು ತಿಳಿಸಿದರು.
ಕೇರಳ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಹೊಸ ಮಾರ್ಗಸೂಚಿ
ಕೇಂದ್ರದವರ ಜೊತೆ ನಾವು ಮಾತನಾಡಿದ್ದೇವೆ. ಹೆಚ್ಚುವರಿಯಾಗಿ ಲಸಿಕೆ ಪಡೆಯಲು ದೆಹಲಿಗೆ ತೆರಳಿ ಕೇಂದ್ರ ಸಚಿವರೊಂದಿಗೆ ಚರ್ಚಿಸಲಿದ್ದೇನೆ. ಮುಂದಿನ ವಾರ ಸೋಮವಾರ ಇಲ್ಲವೇ ಮಂಗಳವಾರ ದೆಹಲಿಗೆ ತೆರಳಲಿದ್ದೇನೆ. ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟು ರಾಜ್ಯಕ್ಕೆ ಹೆಚ್ಚಿನ ಲಸಿಕೆ ಪಡೆಯುತ್ತೇನೆ. ಬುಧವಾರ ಮತ್ತಷ್ಟು ಲಸಿಕೆ ರಾಜ್ಯಕ್ಕೆ ಬರಲಿದೆ. ದೇಶದಲ್ಲೇ ಅತೀ ಹೆಚ್ಚು ವಾಕ್ಸಿನ್ ಕೊಟ್ಟ ರಾಜ್ಯ ನಮ್ಮದಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 40 ಹಾಟ್‌ಸ್ಪಾಟ್
ರಾಜ್ಯದಲ್ಲಿ ಒಟ್ಟು 40 ಕೊರೋನಾ ಹಾಟ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ನಗರ ಪ್ರದೇಶದಲ್ಲಿ 20 ಕೊರೋನಾ ಹಾಟ್ ಸ್ಪಾಟ್‌ಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ 20 ಕೊರೋನಾ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಅಪಾಯಕಾರಿಯಾಗಿ ತೋರುತ್ತಿರುವ, ರಾಜ್ಯದ ಜನರಲ್ಲಿ ಆತಂಕ ಮೂಡಿಸಿರುವ ಡೆಲ್ಟಾಪ್ಲಸ್ ಸೋಂಕಿನ ಬಗ್ಗೆಯೂ ಸಚಿವರು ಮಾತನಾಡಿದರು. ಮೈಸೂರಿನಲ್ಲಿ ಡೆಲ್ಟಾಪ್ಲಸ್ ಸೋಂಕಿನ ಪತ್ತೆಗೆ ಲ್ಯಾಬ್ ಆರಂಭಿಸಲು ಸಿದ್ಧತೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.