ಕೇರಳ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಹೊಸ ಮಾರ್ಗಸೂಚಿ
* ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವವರಿಗೆ ಹೊಸ ಮಾರ್ಗಸೂಚಿ
* ಪಕ್ಕದ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ಹೊಸ ಪ್ರಕರಣಗಳು
* ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿ ಸರ್ಕಾರ ಆದೇಶ
ಬೆಂಗಳೂರು, (ಜೂನ್. 29): ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಡೆಲ್ಟಾ ಪ್ಲಸ್ ಹೊಸ ಪ್ರಕರಣಗಳು ಆತಂಕ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ವೈರಸ್ ವೇಗವಾಗಿ ಹರಡುತ್ತಿರುವುದರಿಂದ ಅಲ್ಲಿಂದ ಕರ್ನಾಟಕಕ್ಕೆ ಬರುವವರು ಕೊವಿಡ್ ನೆಗೆಟಿವ್ ವರದಿ ಹಾಜರುಪಡಿಸುವುದು ಕಡ್ಡಾಯ ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಈ ನೆಗೆಟಿವ್ ವರದಿ 72 ಗಂಟೆಯ ಒಳಗಿನದ್ದಾಗಿರಬೇಕು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಸಿಎಂ ಮಹತ್ವದ ಸಭೆ: ಈ ವಾರವೇ ಅನ್‌ಲಾಕ್ 3.O ಭವಿಷ್ಯ ನಿರ್ಧಾರ
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿ ಎಲ್ಲರನ್ನೂ ತಪಾಸಣೆ ಮಾಡಲಾಗುವುದು. ಖಾಸಗಿ ವಾಹನದಲ್ಲಿ ಬರುವವರನ್ನೂ ತಪಾಸಣೆ ಮಾಡಲಾಗುವುದು. ಬಸ್ನಲ್ಲಿ ಕಂಡಕ್ಟರ್ ನೆಗೆಟಿವ್ ವರದಿ ಪರಿಶೀಲಿಸಬೇಕು. ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಚೆಕ್ಪೋಸ್ಟ್ ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ.
ಕೇರಳದಿಂದ ಬರುವವರಿಗೂ RTPCR ನೆಗೆಟಿವ್
ಕೇರಳ ರಾಜ್ಯದಿಂದಲೂ ಕರ್ನಾಟಕಕ್ಕೆ ಪ್ರವೇಶಿಸುವ ಜನರ ಬಳಿ ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ.
ಕೊರೋನಾ ರೂಪಾಂತರಿ ಹರಡುವಿಕೆ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಜೂನ್ 28ರಿಂದ ಈ ಕ್ರಮ ಜಾರಿಯಲ್ಲಿರಲಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದ್ದಾರೆ. ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ರೂಪಾಂತರಿ ಕೊರೊನಾ ಹೆಚ್ಚಾಗುತ್ತಿದೆ. ಅದರಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬರುತ್ತಿದೆ. ಹೀಗಾಗಿ ಗಡಿಭಾಗಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ.