ಬೆಂಗಳೂರು(ಮಾ.03): ರಾಜ್ಯದಲ್ಲಿ ಯಾವುದೇ ಆರೋಗ್ಯ ಇಲಾಖೆಯ ಸಿಬ್ಬಂದಿ ಗಣ್ಯ, ಅತಿ ಗಣ್ಯ ವ್ಯಕ್ತಿಗಳು ಸೇರಿದಂತೆ ಯಾರ ಮನೆಗೂ ಹೋಗಿ ಕೊರೋನಾ ಲಸಿಕೆ ನೀಡುವಂತಿಲ್ಲ. ಈ ಬಗ್ಗೆ ಕೂಡಲೇ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರು ಆರೋಗ್ಯ ಸಿಬ್ಬಂದಿಯನ್ನು ಹಾವೇರಿಯ ತಮ್ಮ ನಿವಾಸಕ್ಕೆ ಕರೆಸಿಕೊಂಡು ಕೊರೋನಾ ಲಸಿಕೆ ಪಡೆದಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ. ಸುಧಾಕರ್‌, ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗಳಿಗೆ ಹೋಗಿ ಲಸಿಕೆ ನೀಡುವಂತಿಲ್ಲ. ಎಷ್ಟು ತುರ್ತು ಪರಿಸ್ಥಿತಿ ಇದ್ದರೂ ಮನೆಗೆ ಹೋಗಲು ನಿಯಮಗಳಲ್ಲಿ ಅವಕಾಶವಿಲ್ಲ. ಲಸಿಕೆ ಹಾಕಬೇಕಾದ ಅನಿವಾರ್ಯತೆ ಇದ್ದರೆ ಮೊದಲೇ ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ.

ಕೊರೋನಾ ನಿಯಂತ್ರಣ: ಕರ್ನಾಟಕದ ಕ್ರಮಕ್ಕೆ ಕೇಂದ್ರ ಶ್ಲಾಘನೆ

ಬಿ.ಸಿ.ಪಾಟೀಲ್‌ ಅವರಿಗೆ ಲಸಿಕೆ ನೀಡಿರುವುದರಲ್ಲಿ ನಮ್ಮ ಅಧಿಕಾರಿಗಳಿಂದ ತಪ್ಪಾಗಿದೆ. ಲಸಿಕೆ ಪಡೆಯುವವರು ಆಸ್ಪತ್ರೆಗೆ ಬಂದು ಪಡೆದರೆ ಯಾವುದೇ ಅನಾರೋಗ್ಯ ಸಮಸ್ಯೆ ಉಂಟಾದರೂ ತಕ್ಷಣ ಚಿಕಿತ್ಸೆ ಪಡೆಯಬಹುದು. ಹೀಗಾಗಿ ಮನೆಗಳಲ್ಲಿ ಲಸಿಕೆ ಪಡೆಯುವುದು ಸೂಕ್ತವಲ್ಲ. ಈ ಬಗ್ಗೆ ವಿವರಣೆ ಕೇಳಿದ್ದು, ಸೂಕ್ತ ವಿವರಣೆ ನೀಡದಿದ್ದರೆ ಸಂಬಂಧಪಟ್ಟವರನ್ನು ಅಮಾನತು ಮಾಡಲಾಗುವುದು ಎಂದರು.

ಈ ಬಗ್ಗೆ ಹಾವೇರಿಯಲ್ಲಿ ಮಾತನಾಡಿರುವ ಬಿ.ಸಿ.ಪಾಟೀಲ್‌, ಲಸಿಕೆ ಮಾರ್ಗಸೂಚಿ ಗೊತ್ತಿರಲಿಲ್ಲ. 10 ದಿನ ಹೊರಗಡೆ ಇದ್ದು ಬಂದಿದ್ದರಿಂದ ಹೆಚ್ಚು ಜನ ಮನೆ ಬಳಿ ಸೇರಿದ್ದರು. ಹೀಗಾಗಿ ಮನೆಗೆ ಕರೆದು ಲಸಿಕೆ ಪಡೆದು 30 ನಿಮಿಷ ವಿಶ್ರಾಂತಿ ಪಡೆದಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.