Asianet Suvarna News Asianet Suvarna News

ಕೊರೋನಾ ಸಾವಿನಲ್ಲೂ ಕೀಳುಮಟ್ಟದ ರಾಜಕಾರಣ: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಸುಧಾಕರ್‌

*  60 ವರ್ಷಗಳ ದುರಾಡಳಿತದಿಂದ ಆರೋಗ್ಯ ವ್ಯವಸ್ಥೆ ದುರ್ಬಲ
*  ಬಿಜೆಪಿ ಸರ್ಕಾರದ ಬಂದ ನಂತರ ಆರೋಗ್ಯ ವ್ಯವಸ್ಥೆ ಸುಧಾರಣೆ
*  ಕೋವಿಡ್‌ ವೈಫಲ್ಯ ಕುರಿತ ಕಾಂಗ್ರೆಸ್‌ ಆರೋಪಕ್ಕೆ ಸಚಿವರ ಉತ್ತರ 

Minister K Sudhakar Slams Congress grg
Author
Bengaluru, First Published Sep 25, 2021, 7:53 AM IST
  • Facebook
  • Twitter
  • Whatsapp

ಬೆಂಗಳೂರು(ಸೆ.25): ರಾಜ್ಯದಲ್ಲಿ ಕೊರೋನಾದಿಂದ(Coronavirus) ಯಾರಾದರೂ ಸಾವನ್ನಪ್ಪಿದ್ದರೆ ಅದಕ್ಕೆ ನೇರ ಕಾರಣ ಕಾಂಗ್ರೆಸ್‌. ಸ್ವಾತಂತ್ರ್ಯಾನಂತರ ಕಾಂಗ್ರೆಸ್‌ ನಡೆಸಿರುವ ದುರಾಡಳಿತದಿಂದಲೇ ರಾಜ್ಯದಲ್ಲಿ ಕೊರೋನಾ ಅವಧಿಯಲ್ಲಿ ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌(KSudhakar) ಹೇಳಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ನಡೆದ ಕೊರೋನಾ ಕುರಿತಾದ ಚರ್ಚೆಗೆ ಶುಕ್ರವಾರ ಕಾಂಗ್ರೆಸ್‌(Congress) ಸದಸ್ಯರ ಧರಣಿ ನಡುವೆಯೇ ಸುಧಾಕರ್‌ ಉತ್ತರ ನೀಡಿದರು. ಕಾಂಗ್ರೆಸ್‌ನವರಿಗೆ ರಾಜ್ಯದ ಜನತೆ ಬಗ್ಗೆ ಯಾವುದೇ ಕಾಳಜಿ, ಬದ್ಧತೆ ಇಲ್ಲ. ಕೇವಲ ರಾಜಕೀಯ ಹಿತಾಸಕ್ತಿಗಳಿಗಾಗಿ ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ. ದೇಶ ಹಾಗೂ ರಾಜ್ಯವು ಕೊರೋನಾ ನಿಯಂತ್ರಿಸಿರುವ ಪರಿಯ ಬಗ್ಗೆ ಇಡೀ ವಿಶ್ವವೇ ಕೊಂಡಾಡಿದೆ. ಗುರುವಾರ 5 ಗಂಟೆಗಳ ಕಾಲ ಆರೋಪ ಮಾಡಿರುವ ಕಾಂಗ್ರೆಸ್‌ನವರು ಇದೀಗ ಉತ್ತರ ಕೇಳದೆ ಹಿಟ್‌ ಅಂಡ್‌ ರನ್‌ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಳೆದ 60 ವರ್ಷದಿಂದ ಆಡಳಿತದಲ್ಲಿರುವ ಕಾಂಗ್ರೆಸ್‌ ರಾಜ್ಯದಲ್ಲಿ ಈವರೆಗೆ 725 ಐಸಿಯು ಮಾತ್ರ ವ್ಯವಸ್ಥೆ ಮಾಡಿತ್ತು. ನಾವು 1 ವರ್ಷದಲ್ಲೇ 3,877 ಐಸಿಯು ಬೆಡ್‌ ವ್ಯವಸ್ಥೆ ಮಾಡಿದ್ದೇವೆ. ಈವರೆಗೆ ಕೇವಲ 4,847 ರಷ್ಟು ಆಕ್ಸಿಜನ್‌(Oxygen) ಬೆಡ್‌ ಇತ್ತು. ಕಳೆದ 1 ವರ್ಷದಲ್ಲೇ 28,440 ಆಕ್ಸಿಜನ್‌ ಬೆಡ್‌ ಮಾಡಿದ್ದೇವೆ. ಆಕ್ಸಿಜನ್‌ ಸಂಗ್ರಹ ಸಾಮರ್ಥ್ಯವನ್ನು 320 ಟನ್‌ನಿಂದ 3,500 ಟನ್‌ಗೆ ಹೆಚ್ಚಳ ಮಾಡಿದ್ದೇವೆ. 5.40 ಕೋಟಿ ಡೋಸ್‌ ಲಸಿಕೆ ನೀಡಿದ್ದೇವೆ. ಹೀಗಾಗಿ ರಾಜ್ಯದಲ್ಲಿ ಕೊರೋನಾದಿಂದ ಯಾರಾದರೂ ಸಾವನ್ನಪ್ಪಿದ್ದರೆ ಅದಕ್ಕೆ ಕಾಂಗ್ರೆಸ್‌ ಪಕ್ಷವೇ ನೇರ ಕಾರಣ. ಅವರ ದುರಾಡಳಿತದಿಂದಲೇ ಜನ ಸಾವನ್ನಪ್ಪಿದ್ದಾರೆ ಎಂದು ದೂರಿದರು.

ಕೋವಿಡ್‌ ಲಸಿಕೆ ದೇಣಿಗೆ ನೀಡಿ: ಕಂಪನಿಗಳಿಗೆ ಸುಧಾಕರ್‌ ಮನವಿ

ಕಳೆದ 60 ವರ್ಷದಲ್ಲಿ ಕಾಂಗ್ರೆಸ್‌ ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ತಂದಿಲ್ಲ. ಈ ಬಗ್ಗೆ ಅಂಕಿ-ಅಂಶ ಸಹಿತ ಉತ್ತರ ನೀಡುತ್ತಿದ್ದರೂ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದಾರೆ. ಹೀಗಾಗಿ ಉತ್ತರವನ್ನು ಸದನದ ಮುಂದೆ ಮಂಡಿಸುತ್ತಿದ್ದು, ಕಡತಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದರು.

ಈ ವೇಳೆ ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಪ್ರಸ್ತಾಪಿಸಲು ಅವಕಾಶ ನೀಡದ ಬಗ್ಗೆ ಹಾಗೂ ಸದನವನ್ನು ವಿಸ್ತರಣೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು.

ಕಾಂಗ್ರೆಸ್‌ನಿಂದ ಪಲಾಯನ: ಸುಧಾಕರ್‌

ಕಾಂಗ್ರೆಸ್‌ ಪಕ್ಷದವರು ಸದನದಲ್ಲಿ ಪಲಾಯನ ಮಾಡುವ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸದನದಲ್ಲಿ ಮಾತನಾಡುವ ಯೋಗ್ಯತೆ ಅವರಿಗಿಲ್ಲ ಎಂದು ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರ ಕೊರೋನಾ ನಿರ್ವಹಣೆ ವೈಫಲ್ಯ ಎಂದು ಸುಳ್ಳು ಆಪಾದನೆ ಮಾಡಿದ್ದರು. ಸರ್ಕಾರ ಇದಕ್ಕೆ ಸಮರ್ಥ ಉತ್ತರ ನೀಡುತ್ತದೆ ಎಂದು ಹೇಳಿ ಪಲಾಯನ ಮಾಡಿದ್ದಾರೆ. ಚಾಮರಾಜನಗರ ದುರಂತದಲ್ಲಿ ಕಾಂಗ್ರೆಸ್‌ ಸುಳ್ಳು ಹೇಳಿದೆ. ಜಸ್ಟಿಸ್‌ ಪಾಟೀಲ್‌ ಅವರ ನೇತೃತ್ವದಲ್ಲಿ ತನಿಖೆಗೆ ವಹಿಸಲಾಗಿದೆ. ಅದರ ವರದಿ ಬಂದ ಮೇಲೆ ಸತ್ಯಾಸತ್ಯ ಗೊತ್ತಾಗಲಿದೆ. 2017-18ರಲ್ಲಿ ಹಿಂದಿನ ಸರ್ಕಾರ ಕೆಪಿಎಂಇ ಕಾಯಿದೆಗೆ ತಿದ್ದುಪಡಿ ಮಾಡಿದಾಗ ಎರಡು ದಿನ ನಡೆದ ವೈದ್ಯರ ಮುಷ್ಕರದಿಂದ 25 ಮಂದಿ ಸಾವನ್ನಪ್ಪಿದ್ದಾರೆ. ಆಗ ಏಕೆ ಡಿ.ಕೆ. ಶಿವಕುಮಾರ್‌ ಅವರು ಅದೆಲ್ಲವನ್ನೂ ರೆಕಾರ್ಡ್‌ ಮಾಡಿಲ್ಲ? ಅವರಿಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಏಕೆ ಸಾಂತ್ವನ ಹೇಳಲಿಲ್ಲ? ಸಾವಿನ ಮನೆಯಲ್ಲಿ ರಾಜಕೀಯ ಮಾಡುವ ನೀಚತನ ತೋರಿಸಿದ್ದೀರಿ ಎಂದು ಕಿಡಿಕಾರಿದರು.
 

Follow Us:
Download App:
  • android
  • ios