Asianet Suvarna News Asianet Suvarna News

ಕೋವಿಡ್‌ ಲಸಿಕೆ ದೇಣಿಗೆ ನೀಡಿ: ಕಂಪನಿಗಳಿಗೆ ಸುಧಾಕರ್‌ ಮನವಿ

* ಮನವಿ-ಖಾಸಗಿ ಆಸ್ಪತ್ರೆಗಳಲ್ಲಿನ ಕೋವಿಡ್‌ ಲಸಿಕೆ ಖರೀದಿಸಿ
* ಸಾಮಾಜಿಕ ಹೊಣೆ ನೀತಿಯಡಿ ದೇಣಿಗೆ ಕೊಡಿ
* ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲಿ ಆಕ್ಸಿಜನ್‌ ಘಟಕ ನಿರ್ಮಿಸುವ ಉದ್ದೇಶ 
 

Minister K Sudhakar Request to Companies for Donate to Covid Vaccine grg
Author
Bengaluru, First Published Aug 18, 2021, 7:25 AM IST
  • Facebook
  • Twitter
  • Whatsapp

ಬೆಂಗಳೂರು(ಆ.18): ಖಾಸಗಿ ವಲಯಕ್ಕೆ ಹಂಚಿಕೆಯಾಗಿರುವ ಕೋವಿಡ್‌ ಲಸಿಕೆಯನ್ನು ಔಷಧ ವಲಯದ ಉದ್ದಿಮೆಗಳು ಸಾಂಸ್ಥಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ಖರೀದಿಸಿ ದೇಣಿಗೆ ರೂಪದಲ್ಲಿ ಸರ್ಕಾರಕ್ಕೆ ನೀಡುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮನವಿ ಮಾಡಿದ್ದಾರೆ. 

ವಿಧಾನಸೌಧದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯದ ಪ್ರಮುಖ ಔಷಧ ಉದ್ದಿಮೆದಾರರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಶೇ.75 ರಷ್ಟು ಕೋವಿಡ್‌ ಲಸಿಕೆಯನ್ನು ರಾಜ್ಯಕ್ಕೆ ಉಚಿತವಾಗಿ ನೀಡುತ್ತಿದೆ. ಇನ್ನುಳಿದಿದ್ದನ್ನು ಖಾಸಗಿ ವಲಯಕ್ಕೆ ಹಂಚಿಕೆ ಮಾಡುತ್ತಿದೆ. ಖಾಸಗಿ ವಲಯಕ್ಕೆ ಹಂಚಿಕೆಯಾಗಿರರುವ ಲಸಿಕೆಯನ್ನು ಔಷಧ ವಲಯದ ಉದ್ದಿಮೆಗಳು ತಮ್ಮ ಸಿಎಸ್‌ಆರ್‌ ನಿಧಿಯಡಿ ಖರೀದಿ ಮಾಡಿ ಸರ್ಕಾರಕ್ಕೆ ನೀಡಬೇಕು ಎಂದರು.

ತಜ್ಞರ ಅಭಿಪ್ರಾಯದ ಪ್ರಕಾರ ಮೂರನೇ ಅಲೆ ಅಷ್ಟೇನೂ ಪರಿಣಾಮಕಾರಿ ಅಲ್ಲ ಎನ್ನಲಾಗುತ್ತಿದೆ. ಆದರೂ ಮುನ್ನೆಚ್ಚರಿಕೆ ಕೈಗೊಳ್ಳಬೇಕಿದೆ. 2 ಡೋಸ್‌ ಲಸಿಕೆ ಪಡೆದವರಿಗೆ ಸೋಂಕು ತೀವ್ರ ಪರಿಣಾಮ ಬೀರುವುದಿಲ್ಲ ಮತ್ತು ಸಾವು ಸಂಭವಿಸುವುದಿಲ್ಲ ಎಂಬುದು ರುಜುವಾತಾಗಿದೆ. ಹೀಗಾಗಿ ತ್ವರಿತವಾಗಿ ಲಸಿಕೆ ನೀಡುವುದರಿಂದ ಸಂಭವನೀಯ ಮೂರನೇ ಅಲೆಯಿಂದ ರಕ್ಷಣೆ ಪಡೆಯಬಹುದು. ಆದ್ದರಿಂದ ಸರ್ಕಾರದ ಜತೆ ಉದ್ದಿಮೆಗಳು ಕೈ ಜೋಡಿಸಿದರೆ ಗುರಿ ತಲುಪಬಹುದು ಎಂದು ಕರೆ ನೀಡಿದರು.

ಕೋವಿಡ್ 3 ನೇ ಅಲೆ ಭೀತಿ; ಮಕ್ಕಳಿಗಾಗಿ 'ಆರೋಗ್ಯ ನಂದನ' ಯೋಜನೆ ಜಾರಿ

ಔಷಧ ವಲಯ ಮಾತ್ರವಲ್ಲದೆ, ಪೌಷ್ಟಿಕ ಆಹಾರ ಮತ್ತು ಸೌಂದರ್ಯ ವರ್ಧಕ ಉದ್ದಿಮೆದಾರರ ಜತೆಗೂ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಿಎಸ್‌ಆರ್‌ ನಿಧಿಯ ನೆರವನ್ನು ಲಸಿಕಾ ಆಂದೋಲನಕ್ಕೂ ವಿಸ್ತರಿಸಲು ಮನವಿ ಮಾಡಲಾಗುವುದು. ಸಮಾಜದ ಎಲ್ಲರ ಹೊಣೆಗಾರಿಕೆ ಆಗಿರುವುದರಿಂದ ಉದ್ದಿಮೆಗಳು ನೆರವು ನೀಡಬೇಕು ಎಂದು ಹೇಳಿದರು. ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಉದ್ದಿಮೆ ಪ್ರತಿನಿಧಿಗಳು, ಔಷಧ ಮತ್ತು ಉದ್ದಿಮೆಗಳ ಮೂಲಕ ಸರ್ಕಾರದ ಲಸಿಕಾ ಆಂದೋಲನಕ್ಕೆ ನೆರವಾಗುವುದಾಗಿ ಭರವಸೆ ನೀಡಿದರು.

ಆಕ್ಸಿಜನ್‌ ಕೊರತೆ ನಿವಾರಣೆಗೆ ಕ್ರಮ:

ಸಂಭವನೀಯ ಮೂರನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್‌ ಕೊರತೆ ಎದುರಾಗದಂತೆ ಉದ್ಯಮಗಳ ಜತೆ ಸರ್ಕಾರ ಸಮನ್ವಯದಿಂದ ಕಾರ್ಯ ನಿರ್ವಹಿಸಲಿದೆ ಎಂದು ಸಚಿವ ಸುಧಾಕರ್‌ ಭರವಸೆ ನೀಡಿದರು.

ರಾಜ್ಯದಲ್ಲಿ ಆಕ್ಸಿಜನ್‌ ಸರಬರಾಜು ಕುರಿತಂತೆ ಉದ್ಯಮದ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ 7 ಕಂಪನಿಗಳು ಪ್ರತಿದಿನ 812 ಟನ್‌ ಆಕ್ಸಿಜನ್‌ ಉತ್ಪಾದಿಸುತ್ತಿವೆ. ಸದ್ಯ 5381 ಟನ್‌ ದಾಸ್ತಾನಿದೆ. 64 ಆಕ್ಸಿಜನ್‌ ರೀಫಿಲಿಂಗ್‌ ಘಟಕಗಳಿವೆ. ಗದಗ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೀದರ್‌, ಯಾದಗಿರಿ, ಚಾಮರಾಜನಗರ, ಕೊಡಗು ಮತ್ತು ಮಂಡ್ಯಗಳಲ್ಲಿ ರೀಫಿಲಿಂಗ್‌ ಘಟಕಗಳಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲಿ ಆಕ್ಸಿಜನ್‌ ಘಟಕ ನಿರ್ಮಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಹಿಂದಿನ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು. ಖಾಸಗಿ ಕಂಪನಿಗಳು ಉತ್ಪಾದನೆ, ದಾಸ್ತಾನು ವ್ಯವಸ್ಥೆ ಬಲವರ್ಧನೆಗೊಳಿಸಿಕೊಳ್ಳಬೇಕು. ಸರ್ಕಾರದಿಂದ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. ಅಧಿಕಾರಿಗಳಾದ ಮುನೀಷ್‌ ಮೌದ್ಗಿಲ್‌, ಶಾಲಿನಿ ರಜನೀಶ್‌ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
 

Follow Us:
Download App:
  • android
  • ios