2ನೇ ಅಲೆ ಆತಂಕ: ಮತ್ತೊಮ್ಮೆ ಲಾಕ್‌ಡೌನ್, ಸುಧಾಕರ್ ಪ್ರತಿಕ್ರಿಯೆ
ನೈಟ್ ಕರ್ಫ್ಯೂ, ಲಾಕ್‌ಡೌನ್ ಇಲ್ಲ: ಸುಧಾಕರ್| ಸೋಂಕು ಹರಡದಂತೆ ರಾಜ್ಯದಲ್ಲಿ ಕಟ್ಟೆಚ್ಚರ| 2ನೇ ಅಲೆ ಆತಂಕ ಇದ್ದರೂ ರಾಜ್ಯದಲ್ಲಿ ಅಂಥ ಸ್ಥಿತಿ ಇಲ್ಲ| ಕೊರೋನಾ ನಿಯಮ ಪಾಲಿಸಲು ಜನತೆಗೆ ಮನವಿ| ಸೋಂಕು ನಿಯಂತ್ರಣಕ್ಕೆ ಶೀಘ್ರ ಸಿಎಂ ಸಭೆ|
ಬೆಂಗಳೂರು(ಮಾ.13): ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸದ್ಯ ರಾತ್ರಿ ಕರ್ಫ್ಯೂ, ಲಾಕ್ ಡೌನ್ ಹೇರುವ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ, ಆದರೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶೀಘ್ರವೇ ಮುಖ್ಯಮಂತ್ರಿಗಳು ಎಲ್ಲ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಲಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳ ಮುಂದುವರಿಕೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಎರಡನೇ ಅಲೆ ಭೀತಿ: ಕೋವಿಡ್ ಟೆಸ್ಟ್ ಹೆಚ್ಚಳಕ್ಕೆ ತಾಕೀತು
ನೆರೆಯ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಅಧಿಕ ಕೊರೋನಾ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಅತ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಎರಡನೇ ಅಲೆಯ ಆತಂಕ ಇದೆ. ಆದರೆ ರಾಜ್ಯಕ್ಕೆ ಇನ್ನೂ ಅಂತಹ ಪರಿಸ್ಥಿತಿ ಬಂದಿಲ್ಲ. ಬರುವುದೂ ಬೇಡ ಎಂದು ಎಚ್ಚರಿಕೆ ನೀಡಲಾಗಿದೆ. ಪ್ರತಿ ದಿನ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಆದರೆ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ನಮಲ್ಲಿ ಕಡಿಮೆ ಪ್ರಕರಣಗಳಿವೆ. ಮಹಾರಾಷ್ಟ್ರದ ಪರಿಸ್ಥಿತಿ ಸದ್ಯ ನಮ್ಮಲ್ಲಿ ನಿರ್ಮಾಣವಾಗಿಲ್ಲ. ಸೋಂಕಿನ ಪ್ರಮಾಣ ನಮ್ಮ ನಿಯತ್ರಣದಲ್ಲಿದೆ. ಜನರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು, ಸಾಮಾಜಿಕ ಅಂತರ ಕಾಪಾಡಬೇಕು, ಅನಗತ್ಯವಾಗಿ ತಿರುಗಾಡಬಾರದು ಎಂದು ಮನವಿ ಮಾಡಿದರು.
ಲಸಿಕೆ ಪಡೆಯಿರಿ:
ದೇಶಿಯ ಲಸಿಕೆಯನ್ನು ಮುಖ್ಯಮಂತ್ರಿಗಳು ಪಡೆದಿದ್ದು, 60 ವರ್ಷ ಮೇಲ್ಪಟ್ಟವರು ಯಾವುದೇ ಹಿಂಜರಿಕೆಯಿಲ್ಲದೆ ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಸ್ಪಷ್ಟಸಂದೇಶ ನೀಡಿದ್ದಾರೆ. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ50 ಲಕ್ಷ ಮಂದಿ ಇದ್ದಾರೆ. 45 ವರ್ಷ ಮೇಲ್ಪಟ್ಟವರು ಸಹ ಅಸ್ವಸ್ಥತೆ ಹೊಂದಿದ್ದರೆ ಅವರಿಗೂ ಲಸಿಕೆ ಪಡೆಯುವ ಅವಕಾಶವಿದೆ ಎಂದು ಡಾ.ಸುಧಾಕರ್ ಹೇಳಿದರು.