ಬೆಂಗಳೂರು(ಮಾ.13): ಕಳೆದ 10 ದಿನಗಳಿಂದ ನಗರದಲ್ಲಿ ನಿತ್ಯ 300ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆ ಹೆಚ್ಚಿಸುವಂತೆ ಪಾಲಿಕೆ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಶುಕ್ರವಾರ ಪಾಲಿಕೆಯ ವಿಶೇಷ ಆಯುಕ್ತರು, ಎಲ್ಲ ವಲಯ ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳು ಸೇರಿದಂತೆ ಎಲ್ಲ ವಿಭಾಗದ ಅಧಿಕಾರಿಗಳ ಜೊತೆಗೆ ವರ್ಚುಯಲ್‌ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರು, ನಗರದಲ್ಲಿ ಮದುವೆ ಸಮಾರಂಭಗಳು, ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿವೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿರುವುದರಿಂದ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಬುಧವಾರ ಮತ್ತು ಗುರುವಾರ ಕ್ರಮವಾಗಿ 488 ಮತ್ತು 492 ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿವೆ. ಆದ್ದರಿಂದ ಎಲ್ಲ ಅಧಿಕಾರಿಗಳು ಕೋವಿಡ್‌ ಹರಡುವುದನ್ನು ತಡೆಯಬೇಕು ಎಂದು ಸೂಚಿಸಿದರು.

ಕೊರೋನಾ 2ನೇ ಅಲೆ: ರಾಜ್ಯದಲ್ಲಿ ಟಫ್ ರೂಲ್ಸ್, ಮದ್ವೆ ಸಭೆ, ಸಮಾರಂಭಕ್ಕೆ ಇಷ್ಟೇ ಜನ ಇರ್ಬೇಕ್

ನಗರದಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಂಚಾರಿ ಪರೀಕ್ಷಾ ತಂಡಗಳು ಸೇರಿದಂತೆ ಸುಮಾರು 500 ತಂಡಗಳಿದ್ದು, ಇರುವ ಸಿಬ್ಬಂದಿಯನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಕೋವಿಡ್‌ ಪರೀಕ್ಷೆಗಳನ್ನು ಮಾಡಬೇಕು. ಖಾಸಗಿ ಕ್ಲಿನಿಕ್‌ಗಳಲ್ಲಿಯೂ ಸ್ವಾಬ್‌ ಸಂಗ್ರಹಿಸಲು ಕ್ರಮವಹಿಸಬೇಕು. ಖಾಸಗಿ ಕ್ಲಿನಿಕ್‌ಗಳಲ್ಲಿ ಸ್ವಾಬ್‌ ಸಂಗ್ರಹಕ್ಕಾಗಿ ಕಿಟ್‌ಗಳನ್ನು ನೀಡಿ ಸಂಜೆ ಅದನ್ನು ಸಂಗ್ರಹಿಸಿ ಲ್ಯಾಬ್‌ಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಐಎಲ್‌ಐ, ಸಾರಿ ಹಾಗೂ ರೋಗ ಲಕ್ಷಣಗಳಿರುವವರಿಗೆ ಕೋವಿಡ್‌ ಪರೀಕ್ಷೆ ಮಾಡಬೇಕು. ಹೆಚ್ಚು ಹೆಚ್ಚು ಪರೀಕ್ಷೆ ಮಾಡುವುದರಿಂದ ಸೋಂಕು ಪತ್ತೆಯಾದವರನ್ನು ಕೂಡಲೆ ಐಸೋಲೇಟ್‌ ಮಾಡಿ ಸೋಂಕು ಹರಡುವುದನ್ನು ತಡೆಯಬಹುದು ಎಂದು ಸಲಹೆ ನೀಡಿದರು.
ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇನ್ನಿತರೆ ಆಸ್ಪತ್ರೆಗಳಲ್ಲಿ ಗಂಟಲು ದ್ರವ ನೀಡಲು ಬಂದವರ ಬಳಿ ಸರಿಯಾದ ವಿಳಾಸ, ಮೊಬೈಲ್‌ ಸಂಖ್ಯೆ, ಪಿನ್‌ಕೋಡ್‌ ಪಡೆಯಬೇಕು. ಅವರ ಮೊಬೈಲ್‌ಗೆ ಬಂದಿರುವ ಒಟಿಪಿ ಪರಿಶೀಲಿಸಿ ಸಮರ್ಪಕ ವಿಳಾಸ ಪಡೆಯಬೇಕು ಎಂದು ತಿಳಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್‌, ಡಿ.ರಂದೀಪ್‌, ತುಳಸಿ ಮದ್ದಿನೇನಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂಡೆಕ್ಸ್‌ ತಂತ್ರಾಂಶ ಅಭಿವೃದ್ಧಿ

ಪಾಲಿಕೆ ವ್ಯಾಪ್ತಿಯಲ್ಲಿ ಕಂಡುಬರುವ ಕೋವಿಡ್‌ ಪ್ರಕರಣಗಳು ಐಸಿಎಂಆರ್‌ ಪೋರ್ಟಲ್‌ನಲ್ಲಿ ಅಪ್ಲೋಡ್‌ ಆದ ಬಳಿಕ ಆಯಾ ವಲಯ ಮಟ್ಟದ ಇಂಡೆಕ್ಸ್‌ ತಂತ್ರಾಂಶದಲ್ಲಿ ಮಾಹಿತಿ ಲಭ್ಯವಾಗಲಿದೆ. ಇನ್ನು ಮುಂದೆ ಇಂಡೆಕ್ಸ್‌ ತಂತ್ರಾಂಶದ ಮೂಲಕ ಲಭ್ಯವಾಗುವ ಮಾಹಿತಿಯು ಆಯಾ ವಲಯಗಳ ಜೊತೆಗೆ ನೇರವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಲಭ್ಯವಾಗಬೇಕು. ಆ ಮೂಲಕ ಸಂಪರ್ಕ ಪತೆ ್ತಕಾರ್ಯ ತ್ವರಿತವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಮಾರ್ಷಲ್‌ಗಳ ನಿಯೋಜನೆ

ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಚಿತ್ರಮಂದಿರ, ಮಾರುಕಟ್ಟೆ, ಮದುವೆ, ಮಾಲ್‌, ರೆಸ್ಟೋರೆಂಟ್‌ ಸೇರಿದಂತೆ ಜನಸಂದಣಿ ಸ್ಥಳಗಳಲ್ಲಿ ಮಾರ್ಷಲ್‌ಗಳನ್ನು ನಿಯೋಜಿಸಿ ಕೋವಿಡ್‌ ನಿಯಮಾವಳಿಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಮಾಸ್ಕ್‌, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್‌ ಬಳಕೆ ಕುರಿತು ಆಟೋಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಬೇಕು. ಕೊಳಗೇರಿ ಪ್ರದೇಶದಲ್ಲಿ ವಾಸಿಸುವವರಿಗೆ ಆಶಾ ಕಾರ್ಯಕರ್ತರ ಮೂಲಕ ಲಸಿಕೆ ಪಡೆಯಲು ಅರಿವು ಮೂಡಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದರು.

3 ಲಕ್ಷ ಜನರಿಗೆ ಲಸಿಕೆ

ಇದುವರೆಗೆ ಸುಮಾರು ಮೂರು ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. 320ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರು ಆಸ್ಪತ್ರೆಗಳಿಗೆ ಬಂದು ಲಸಿಕೆ ಪಡೆಯಲಿದ್ದಾರೆ ಎಂದರು.