Asianet Suvarna News Asianet Suvarna News

ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ ತಪ್ಪಿತಸ್ಥರನ್ನು ಬಿಟ್ಟಿಲ್ಲ: ಸಚಿವ ಹಾಲಪ್ಪ

ಈ ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿ ಇಂತಹ ಹಗರಣಗಳು ಸಾಕಷ್ಟಿವೆ. ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಸಚಿವ ಹಾಲಪ್ಪ ಆಚಾರ್‌

Minister Halappa Achar React on PSI Recruitment Scam in Karnataka grg
Author
Bengaluru, First Published Jul 15, 2022, 2:00 PM IST

ವಿಜಯಪುರ(ಜು.15):  ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದಲ್ಲಿ ಯಾರನ್ನೂ ಬಿಟ್ಟಿಲ್ಲ. ತಪ್ಪಿತಸ್ಥರು ಎಂದು ಕಂಡು ಬಂದವರನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಿದ್ದೇವೆ. ಈ ವಿಷಯದಲ್ಲಿ ನಮ್ಮ ಸರ್ಕಾರ ಬಹಳ ಸ್ಪಷ್ಟವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್‌ ಹೇಳಿದರು. ನಗರದಲ್ಲಿ ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರ ಕುರಿತು ಐಎಎಸ್‌ ಅಧಿಕಾರಿ ಅಮೃತ ಪೌಲ್‌ ಅವರಿಗೆ ಮಂಪರು ಪರೀಕ್ಷೆಗೆ ಒಳಪಡಿಸಲು ಕಾಂಗ್ರೆಸ್‌ ಒತ್ತಾಯಕ್ಕೆ ಸಂಬಂಧಿಸಿದಂತೆ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿ ಇಂತಹ ಹಗರಣಗಳು ಸಾಕಷ್ಟಿವೆ. ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರವಾಗಿ ತಮ್ಮ ಸರ್ಕಾರ ಸುಮ್ಮನೆ ಕುಳಿತಿಲ್ಲ. ತಪ್ಪಿತಸ್ಥರ ವಿರುದ್ಧ ಎಲ್ಲ ರೀತಿಯ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಇದನ್ನು ಕಾಂಗ್ರೆಸ್‌ನವರು ಕಣ್ಣಾರೆ ನೋಡುತ್ತಿದ್ದಾರೆ. ಆದಾಗ್ಯೂ ಈ ವಿಚಾರವಾಗಿ ವಿರೋಧ ಪಕ್ಷದವರು ಸರ್ಕಾರವನ್ನು ಸಂಶಯದಿಂದ ನೋಡುವುದು ಸರಿಯಲ್ಲ ಪ್ರತಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಈ ಬಗ್ಗೆ ಮಾಹಿತಿ ಇದ್ದರೆ ಅದನ್ನು ಕೊಡಲಿ. ರಾಜಕೀಯ ಲಾಭಕ್ಕಾಗಿ ಮಾತನಾಡಿದರೆ ಅವರಿಗೆ ಶೋಭೆ ಅಲ್ಲ ಎಂದರು.

PSI Scam: ಅಮೃತ್‌ ಪಾಲ್‌ ಮಂಪರು ಪರೀಕ್ಷೆ ನಡೆಸಿ: ಸಿದ್ದು ಆಗ್ರಹ

ಆಲಮಟ್ಟಿಗೆ ಕೆಬಿಜೆಎನ್‌ಎಲ್‌ ಕಚೇರಿ ಸ್ಥಳಾಂತರವಾಗದೇ ಇರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬೃಹತ್‌ ನೀರಾವರಿ ಸಚಿವರು ನಿಮ್ಮವರೇ ಇದ್ದಾರೆ. ನನ್ನನ್ನು ಏಕೆ ಕೇಳುತ್ತಿರಿ ಎಂದು ಮರು ಪ್ರಶ್ನಿಸಿದರು.

ಅಪೌಷ್ಟಿಕತೆ, ಅಂಗನವಾಡಿ ಕಟ್ಟಡಗಳಿಗೆ ಮುತುರ್ವಜಿ ವಹಿಸಿ

ಮಕ್ಕಳ ಅಪೌಷ್ಟಿಕತೆ ನಿವಾರಣೆ, ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಮೊದಲಾದ ಕಾರ್ಯಗಳಿಗೆ ಜಿಲ್ಲಾಧಿಕಾರಿ, ಸಿಇಒಗಳು ವಿಶೇಷ ಮುತವರ್ಜಿ ವಹಿಸಿ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಹಾಲಪ್ಪ ಆಚಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಸಂಜೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 388 ಹಾಗೂ ಕಡಿಮೆ ತೂಕದ ಮಕ್ಕಳ ಸಂಖ್ಯೆ 12,564 ಇರುವುದನ್ನು ಗಮನಿಸಿದ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಷ್ಟೊಂದು ಪ್ರಮಾಣದಲ್ಲಿ ಅಪೌಷ್ಟಿಕತೆ ಇದೆ ಎಂದರೆ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿಲ್ಲ ಎಂದೇ ತೋರುತ್ತದೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಹ ಅಧಿಕಾರಿಗಳನ್ನು ಪ್ರಶ್ನಿಸಿದರು.
ನೀವು ಕಾಳಜಿ ವಹಿಸದೇ ಹೋದರೆ ಸಾಧಾರಣ ತೂಕವುಳ್ಳ ಮಕ್ಕಳು ಸಹ ಮುಂದೆ ಅಪೌಷ್ಠಿಕತೆಯಿಂದ ಬಳಲಬಹುದು, ಹೀಗಾಗಿ ವಿಶೇಷ ಮುತವರ್ಜಿ ವಹಿಸಿ, ಪೌಷ್ಠಿಕ ಆಹಾರ ವಿತರಿಸಿ, ಈ ಎಲ್ಲ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಆಯ್ಕೆ ಮಾಡುವ ವಿವೇಚನಾಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಈಗಾಗಲೇ ಮಕ್ಕಳಿಗೆ ಈ ಭಾಗದಲ್ಲಿಯೇ ಉತ್ತಮ ಗುಣಮಟ್ಟದ ಶೇಂಗಾ ಚಿಕ್ಕಿ, ಡ್ರೈಫುಟ್‌ಗಳ ಮಿಶ್ರಣವುಳ್ಳ ವಿಶೇಷ ಆಹಾರ ವಿತರಿಸಲು ಯೋಜನೆ ರೂಪಿಸಲಾಗಿದೆ. ಸ್ವ-ಸಹಾಯ ಗುಂಪುಗಳಿಂದ ಈ ಎಲ್ಲ ಪದಾರ್ಥಗಳನ್ನು ಖರೀದಿಸಿ ಆ ಗುಂಪುಗಳಿಗೂ ಬಲ ನೀಡಿ ಹಾಗೂ ಮಕ್ಕಳಿಗೂ ಗುಣಮಟ್ಟದ ಆಹಾರ ದೊರಕಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಾಗಿ ತಿಳಿಸಿದರು.
ಅಂಗನವಾಡಿ ನೌಕರರು ಬಡವರು, ಅವರ ಗೌರವಧನ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ನಿಮ್ಮ ಪಗಾರ ತಡವಾದರೆ ನಡೆಯುತ್ತದೆಯೇ ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಜಿಲ್ಲಾ ಪಂಚಾಯತಿ ಅನುದಾನದಲ್ಲಿಯೂ ಅಂಗನವಾಡಿ ಕಟ್ಟಡ ಕಟ್ಟುವ ಅವಕಾಶವಿದೆ. ಜಿಪಂ ಅನುದಾನ, ಗಾವಠಾಣ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ. ಅನೇಕ ಸ್ಥಳಗಳು ಸಹ ಖಾಲಿ ಇವೆ. ಕೂಡಲೇ ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಸಿಇಒ ರಾಹುಲ್‌ ಶಿಂಧೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಅಕ್ರಮ ಗಣಿಗಾರಿಕೆ ತಡೆಯುವ ಹೊಣೆ ಡಿಸಿಗೆ ಸೇರಿದ್ದು

ಅಕ್ರಮ ಗಣಿಗಾರಿಕೆ ತಡೆಯುವ ಹೊಣೆಗಾರಿಕೆ ಜಿಲ್ಲಾಧಿಕಾರಿಗೆ ಸೇರಿದೆ. ಅಕ್ರಮ ಗಣಿಗಾರಿಕೆ ತಡೆಗಟ್ಟುವ ಟಾಸ್ಕ್‌ಫೋರ್ಸ್‌ ಅಧ್ಯಕ್ಷರನ್ನು ಜಿಲ್ಲಾಧಿಕಾರಿಗಳನ್ನೇ ಮಾಡಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಗಣಿ ಮತ್ತು ಭೂ ಗರ್ಭ ಖಾತೆ ಸಚಿವ ಹಾಲಪ್ಪ ಆಚಾರ್‌ ಸೂಚನೆ ನೀಡಿದರು.

ಎಸ್‌ಐ ಹಗರಣ ಕೊಲೆಗಿಂತಲೂ ಗಂಭೀರ ಅಪರಾಧ: ಹೈಕೋರ್ಟ್‌

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಗಣಿ ಮತ್ತು ಭೂಗರ್ಭ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಕ್ರಮ ಗಣಿಗಾರಿಕೆ ನಡೆದರೆ ಜಿಲ್ಲಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಭೀಮಾ ನದಿ ಪಾತ್ರದಲ್ಲಿ ಜೆಲ್ಲಿ ಬ್ಲಾಕ್‌ಗಳನ್ನು ಗುರುತಿಸುವ ನಿಟ್ಟಿನಲ್ಲಿ ಕೂಡಲೇ ವಿಶೇಷ ತಜ್ಞರ ತಂಡವನ್ನು ವಿಜಯಪುರಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಭೋವಿ ಸಮಾಜ ಕಲ್ಲುಗಣಿಗಾರಿಕೆಯನ್ನು ನಂಬಿ ಉಪಜೀವನ ಸಾಗಿಸುತ್ತಿತ್ತು. ಈಗ ಅವರ ಉದ್ಯೋಗಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ಜಾಲಗೇರಿ ಬಳಿ ಜಮೀನು ಇದೆ. ಅಲ್ಲಿ ಭೋವಿ ಸಹಕಾರ ಸಂಘದ ನೇತೃತ್ವದಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ಕಲ್ಪಿಸಬೇಕು. ಇದರಿಂದ ಅನೇಕ ಕುಟುಂಬಗಳಿಗೆ ಉದ್ಯೋಗ ದೊರಕಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲಹೆ ನೀಡಿದರು. ಈ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಹಾಲಪ್ಪ ಆಚಾರ್‌, ಕೂಡಲೇ ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಭೀಮಾ ನದಿ ಪಾತ್ರದಲ್ಲಿ ನೈಸರ್ಗಿಕ ಸಂಪತ್ತಿನ ಹಗಲು ದರೋಡೆ ನಡೆದಿದೆ. ರಾಜಕಾರಣಿಗಳೇ ಈ ಲೂಟಿಯಲ್ಲಿ ಭಾಗಿಯಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರವಾಗಿ ದೂರಿದರು.
ಕಳ್ಳರಿಗೆ ಅವಕಾಶ ಕೊಡುವ ವ್ಯವಸ್ಥೆ ಇದೆ. ನಮ್ಮ ಜಿಲ್ಲೆಯವರೇ ಈ ಕಳ್ಳತನದಲ್ಲಿ ಶಾಮೀಲಾಗಿದ್ದಾರೆ. ರಿಯಲ್‌ ಎಸ್ಟೇಟ್‌ ಮಾಫಿಯಾದಂತೆ ಈ ಮರಳು ಮಾಫಿಯಾ ಮುಂಬರುವ ದಿನಗಳಲ್ಲಿ ರಾಜ್ಯ ಆಳುವ ದಿನ ದೂರವಿಲ್ಲ ಎಂದು ಯತ್ನಾಳ ಹೇಳಿದರು. ಗಣಿ ಇಲಾಖೆಯ ಅಧಿಕಾರಿಗಳು ಮಾಹಿತಿ ಒದಗಿಸಲು ಪಿಪಿಟಿ ಪ್ರಸಂಟೇಷನ್‌ ಪ್ರಸ್ತುತಪಡಿಸಲಿಲ್ಲ. ಈ ರೀತಿ ಸರಿಯಲ್ಲ ಎಂದು ಜನಪ್ರತಿನಿಧಿಗಳು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

Follow Us:
Download App:
  • android
  • ios