ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿಯಲ್ಲಿನ ಅಕ್ರಮ ಅತ್ಯಂತ ನೀಚ ಕೃತ್ಯವಾಗಿದ್ದು, ಕೊಲೆಗಿಂತಲೂ ಗಂಭೀರ ಅಪರಾಧವಾಗಿದೆ. ಕೊಲೆ ನಡೆದರೆ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಾನೆ. 

ಬೆಂಗಳೂರು (ಜು.15): ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿಯಲ್ಲಿನ ಅಕ್ರಮ ಅತ್ಯಂತ ನೀಚ ಕೃತ್ಯವಾಗಿದ್ದು, ಕೊಲೆಗಿಂತಲೂ ಗಂಭೀರ ಅಪರಾಧವಾಗಿದೆ. ಕೊಲೆ ನಡೆದರೆ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಾನೆ. ಆದರೆ, ನೇಮಕಾತಿಗಳಲ್ಲಿ ಅಕ್ರಮ ನಡೆದಲ್ಲಿ ಇಡೀ ಸಮಾಜವೇ ತೊಂದರೆ ಅನುಭವಿಸಲಿದೆ ಎಂದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. 

ಪ್ರಕರಣದ ಆರೋಪಿಗಳಾದ ಸಿ.ಎನ್‌.ಶಶಿಧರ್‌ ಹಾಗೂ ಇತರರು ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅಕ್ರಮ ಪ್ರಕರಣದಿಂದ 50 ಸಾವಿರ ಅಭ್ಯರ್ಥಿಗಳು ತೊಂದರೆಗೆ ಒಳಗಾಗಿದ್ದಾರೆ. ಇದು ಸಮಾಜದ ಪಾಲಿಗೆ ಭಯೋತ್ಪಾದಕ ಕೃತ್ಯ ಎಂದು ಹಿಂದೆಯೇ ಹೇಳಿದ್ದೆ, ಪ್ರತಿ ನೇಮಕದಲ್ಲೂ ಹೀಗೆಯೇ ನಡೆದರೆ ನ್ಯಾಯಾಲಯ ಕಣ್ಣುಮುಚ್ಚಿ ಕೂರಬೇಕೇ ಎಂದು ಪ್ರಶ್ನಿಸಿತು. ಇದು ಸಾಧಾರಣ ಅಪರಾಧವಲ್ಲ, ಅದೊಂದು ಅತ್ಯಂತ ನೀಚ ಕೃತ್ಯವಾಗಿದ್ದು, ಬಹುದೊಡ್ಡ ಪಿತೂರಿ ಇದರಲ್ಲಿ ಅಡಗಿದೆ. ತನಿಖೆ ಮೂಲಕ ಎಲ್ಲವನ್ನೂ ಬಯಲಿಗೆಳೆಯಬೇಕು ಎಂದು ಸಿಐಡಿಗೆ ಹೈಕೋರ್ಟ್‌ ಸಲಹೆ ನೀಡಿತು.

ಪಿಎಸ್‌ಐ ಹಗರಣ ಕಲಬುರಗಿಗೆ ಸೀಮಿತವಲ್ಲ: ಪ್ರಿಯಾಂಕ್‌ ಖರ್ಗೆ

ಆನ್‌ಲೈನ್‌ನಲ್ಲಿ ಬನಿಯನ್‌ ಧರಿಸಿ ಬಂದ ಅಭ್ಯರ್ಥಿ: ಅರ್ಜಿಯ ವಿಚಾರಣೆಯನ್ನು ಜು.20ಕ್ಕೆ ಮುಂದೂಡಿದ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ಮಧ್ಯಪ್ರವೇಶಿಸಿದ ಪಿಎಸ್‌ಐ ಅಭ್ಯರ್ಥಿ ಕೇಶವಮೂರ್ತಿ, ಸರ್‌ ನಾನು ಪಿಎಸ್‌ಐ ಅಭ್ಯರ್ಥಿ ಎಂದು ತಮ್ಮ ವಿವರ ನೀಡುವುದಕ್ಕೆ ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ನಿಮ್ಮ ಮನವಿ ಏನಾದರೂ ಇದ್ದಲ್ಲಿ ಅರ್ಜಿ ಸಲ್ಲಿಸಿ. ಈ ರೀತಿ ಮಧ್ಯಪ್ರವೇಶ ಮಾಡುವುದು ಸರಿಯಲ್ಲ. 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರನ್ನೂ ಆನ್‌ಲೈನ್‌ನಲ್ಲಿ ಆಲಿಸಲು ಸಾಧ್ಯವಿಲ್ಲ ಎಂದು ನ್ಯಾ.ಎಚ್‌.ಪಿ.ಸಂದೇಶ್‌ ತಿಳಿಸಿದರು. ಜತೆಗೆ, ವಿಡಿಯೋ ಕಾನ್ಫರೆನ್ಸ್‌ನಲ್ಲಿ ಬನಿಯನ್‌ ಧರಿಸಿದ್ದಕ್ಕೆ ಸಿಟ್ಟಾದ ನ್ಯಾಯಮೂರ್ತಿಗಳು ‘ಇದೇನು ಅಸಂಬದ್ಧ ನಡವಳಿಕೆ? ಇದಕ್ಕೆಲ್ಲಾ ಕಡಿವಾಣ ಹಾಕಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಿಐಡಿ ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ವಿ.ಎಸ್‌.ಹೆಗ್ಡೆ, ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗಿನ ತನಿಖೆಯ ಅಂಶಗಳನ್ನು ನ್ಯಾಯಪೀಠಕ್ಕೆ ವಿವರಿಸಿ, ಓಎಂಆರ್‌ ಶೀಟ್‌ ಬದಲಿಸಿದ್ದು, ಆರ್‌ಎಫ್‌ಎಸ್‌ಎಲ್‌ ವರದಿ, ಅಕ್ರಮಕ್ಕೆ ಅನುಸರಿಸಿದ ವಿಧಾನ ಗಮನಿಸಿದರೆ ಇದು ದೊಡ್ಡ ಪಿತೂರಿಯಾಗಿದೆ. ಸಮಾಜದ ರಕ್ಷಣೆ ಮಾಡಬೇಕಿದ್ದವರೇ ಅಕ್ರಮ ಎಸಗಿದ್ದಾರೆ ಎಂದರು. ಅಭ್ಯರ್ಥಿಗಳು, ಮಧ್ಯವರ್ತಿಗಳು ಹಾಗೂ ಸ್ವತಃ ಪೊಲೀಸ್‌ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ. ನಿರ್ಲಜ್ಜ ವ್ಯಕ್ತಿಗಳಿಂದ ಅಕ್ರಮ ನಡೆದಿದೆ. ಎಡಿಜಿಪಿ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ದೂರವಾಣಿ ಕರೆಗಳು, ಎಸ್‌ಎಂಎಸ್‌, ವಾಟ್ಸಪ್‌ ಸಂದೇಶಗಳನ್ನು ಪರಿಶೀಲಿಸಲಾಗುತ್ತಿದೆ. ಈವರೆಗೆ 2.5 ಕೋಟಿ ರು. ಹಣ ವಶಕ್ಕೆ ಪಡೆಯಲಾಗಿದೆ. ದೊಡ್ಡ ಮಟ್ಟದ ಭ್ರಷ್ಟಾಚಾರ ಈ ಪ್ರಕರಣ ಒಳಗೊಂಡಿದ್ದು, ಸಿಐಡಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.ಆದ್ದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.

PSI Scam: ಬಂಧಿತ ಗಣಪತಿಗೂ ಆರಗಗೂ ಏನು ಸಂಬಂಧ?: ಹರಿಪ್ರಸಾದ್‌

ವಿಧಿವಿಜ್ಞಾನ ವರದಿ ಸಲ್ಲಿಕೆ: ನ್ಯಾಯಾಲಯದ ಆದೇಶದಂತೆ ಆರ್‌ಎಫ್‌ಎಸ್‌ಎಲ್‌ ವರದಿ ಹಾಗೂ ಓಎಂಆರ್‌ ಶೀಟ್‌ಗಳನ್ನು ಬದಲಿಸಿದ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಿಐಡಿ ಹೈಕೋರ್ಟ್‌ಗೆ ಸಲ್ಲಿಸಿತು. ಕೆಳಹಂತದ ಅಧಿಕಾರಿಗಳಿಂದ ಎಡಿಜಿಪಿ ಅಮೃತ್‌ ಪಾಲ್‌ ತನಿಖೆ ನಡೆಸಿದರೆ ಪ್ರಯೋಜನವಿಲ್ಲ ಎಂದು ನ್ಯಾ.ಎಚ್‌.ಪಿ.ಸಂದೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಅದಕ್ಕೆ, ಸಿಐಡಿ ಡಿಜಿ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ಸಿಐಡಿ ಪರ ವಕೀಲರು ಸ್ಪಷ್ಟನೆ ನೀಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಜು.20ಕ್ಕೆ ಮುಂದೂಡಿತು.