ಬೆಂಗಳೂರು, (ಡಿ.21): ಇಂಗ್ಲೆಂಡ್​ನಲ್ಲಿ ಹೊಸ ಮಾದರಿಯ ವೈರಾಣು ಪತ್ತೆಯಾಗಿದೆ. ಕೊರೋನಾಗಿಂತಲೂ ಹೊಸ ವೈರಾಣು ಬಹು ಬೇಗನೇ ಹರಡುತ್ತೆ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಸುಧಾಕರ್​ ಹೇಳಿದ್ದಾರೆ.

 ಬ್ರಿಟನ್​ನಲ್ಲಿ ಪ್ರಭೇದದ ವೈರಾಣು ಪತ್ತೆಯಾಗಿರು ಬಗ್ಗೆ ಮುಂಜಾಗ್ರತಾ ಕ್ರಮವಹಿಸುವ  ಬಗ್ಗೆ ತಿಳಿಸಲು ಸಚಿವ ಸುಧಾಕರ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹೊಸ ಪ್ರಭೇದದ ವೈರಾಣು ಪತ್ತೆಯಾದ ಕಾರಣಕ್ಕೆ ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ನಮ್ಮ ವೈದ್ಯರು ಕೊರೋನಾಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರು ಕೂಡ ಭಯಭೀತರಾಗುವ ಅವಶ್ಯಕತೆ ಇಲ್ಲ. ಎಲ್ಲರೂ ದಯವಿಟ್ಟು ಮಾಸ್ಕ್​ ಧರಿಸಬೇಕೆಂದು ​ ಮನವಿ ಮಾಡಿದರು.

ಹೊಸ ವರ್ಷಕ್ಕೆ ಮಾರುಕಟ್ಟೆಗೆ ಕೋವ್ಯಾಕ್ಸಿನ್‌..?

ಎಚ್ಚರಿಕೆ ಇರಲಿ ಎಂದ ಸಚಿವರು
ಸರ್ಕಾರಕ್ಕೆ ಜನರ ರಕ್ಷಣೆಯೇ ಮುಖ್ಯ ಎಂದ ಸುಧಾಕರ್,​ ಕೊರೋನಾದ ಹೊಸ ಪ್ರಭೇದ ಬರುತ್ತಿರುವ ಹಿನ್ನೆಲೆ ಎಚ್ಚರಿಕೆ ಇರಲಿ. ನಾವು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಬೇಕು. ವಿದೇಶದಿಂದ ಬಂದವರು RTPCR ಟೆಸ್ಟ್​ ಮಾಡಿಸಿಕೊಳ್ಳಬೇಕು. ಮೂರು ದೇಶಗಳಲ್ಲಿ ಹೊಸ ಪ್ರಬೇಧ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರು ಕ್ವಾರಂಟೈನ್​ಗೆ ಒಳಗಾಗಬೇಕು. ಶಾಲೆಗಳ ಆರಂಭದ ಬಗ್ಗೆಯೂ ತಜ್ಞರ ಜೊತೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

ಬ್ರಿಟನ್​ನಿಂದ ರಾಜ್ಯಕ್ಕೆ 138 ಪ್ರಯಾಣಿಕರು ಕೊರೊನಾ ನೆಗೆಟಿವ್​ ರಿಪೋರ್ಟ್ ಇಲ್ಲದೆ ಬಂದಿದ್ದಾರೆ. ಇವರನ್ನು ಟ್ರೇಸ್ ಮಾಡಿ ಟೆಸ್ಟ್ ಮಾಡ್ತೀವಿ. ನಾಳೆಯಿಂದ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಲಾಗುತ್ತೆ. ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಕೇಂದ್ರ ಸರ್ಕಾರವೂ ವಿಶೇಷ ನಿಗಾ ಇಡುವಂತೆ ಸೂಚಿಸಿದೆ ಎಂದು ವಿವರಿಸಿದರು.

ರೋಗಲಕ್ಷಣದಲ್ಲಿ ಬದಲಾವಣೆ ಇಲ್ಲ, ತೀವ್ರತೆಯೂ ಇಲ್ಲ. ಕೊರೋನಾ ಹೊಸ ಪ್ರಬೇಧದಲ್ಲಿ ಹರಡುವಿಕೆ ಗುಣ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ಕೊರೋನಾ ಹೊಸ ಪ್ರಬೇಧ ಪತ್ತೆಯಾಗಿಲ್ಲ. ಆದರೆ, ಈ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಸುಧಾಕರ್​ ತಿಳಿಸಿದರು.