ಹೊಸ ವರ್ಷಕ್ಕೆ ಮಾರುಕಟ್ಟೆಗೆ ಕೋವ್ಯಾಕ್ಸಿನ್..?
ಕೋವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ಬಹುತೇಕ ಪೂರ್ಣ, ಶೀಘ್ರ ಲಸಿಕೆ ಮಾರುಕಟ್ಟೆಗೆ?| ಅಂತಿಮ ಘಟ್ಟತಲುಪಿದ ಕೋವ್ಯಾಕ್ಸಿನ್ 3ನೇ ಹಂತದ ಕ್ಲಿನಿಕಲ್ ಟ್ರಯಲ್| ಬೆಳಗಾವಿಯ ಜೀವನರೇಖಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಪ್ರಯೋಗ|
ಬೆಳಗಾವಿ(ಡಿ.21): ಕೊರೋನಾ ವಿರುದ್ಧ ಭರವಸೆ ಮೂಡಿಸಿರುವ ಭಾರತ್ ಬಯೋಟೆಕ್ ಸಂಸ್ಥೆಯ ‘ಕೋವ್ಯಾಕ್ಸಿನ್’ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ ಅಂತಿಮ ಘಟಕ್ಕೆ ತಲುಪಿದೆ.
3ನೇ ಹಂತದ ವೇಳೆ ಈವರೆಗೆ 780 ಮಂದಿ ವ್ಯಾಕ್ಸಿನ್ ಪಡೆದಿದ್ದು, ಯಾರೊಬ್ಬರಲ್ಲೂ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ. ನಾಲ್ಕೈದು ದಿನಗಳಲ್ಲಿ ಈ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳ್ಳಲಿದ್ದು, ಹೊಸ ವರ್ಷಾರಂಭದಲ್ಲಿ ಲಸಿಕೆ ಮಾರುಕಟ್ಟೆಗೆ ಲಗ್ಗೆ ಇಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ.ಈ ಲಸಿಕೆಯ ಕ್ಲಿನಿಕಲ್ ಟ್ರಯಲ್ ಬೆಳಗಾವಿಯ ಜೀವನರೇಖಾ ಸೇರಿ ದೇಶದ 12 ಆಸ್ಪತ್ರೆಗಳಲ್ಲಿ ನಡೆಯುತ್ತಿದೆ.
ಕೋವ್ಯಾಕ್ಸಿನ್ ಟ್ರಯಲ್‌ಗೆ ಸಿಎಂ ಯಡಿಯೂರಪ್ಪ ಚಾಲನೆ
ಬೆಳಗಾವಿಯಲ್ಲಿ ಮೊದಲ ಸುತ್ತಿನಲ್ಲಿ ನಾಲ್ವರು, 2ನೇ ಸುತ್ತಿನಲ್ಲಿ 50 ಹಾಗೂ 3ನೇ ಸುತ್ತಿನಲ್ಲಿ 780 ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ. ತೃತೀಯ ಹಂತಕ್ಕೆ ಜೀವನರೇಖಾ ಆಸ್ಪತ್ರೆಗೆ ಒಟ್ಟು 1 ಸಾವಿರ ಲಸಿಕೆ ನೀಡಲಾಗಿದೆ ಎನ್ನಲಾಗಿದೆ.
10 ದಿನಗಳಿಂದ ಜೀವನರೇಖಾ ಆಸ್ಪತ್ರೆಯಲ್ಲಿ ಲಸಿಕೆಯ 3ನೇ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಇನ್ನೂ 4 ದಿನ ವ್ಯಾಕ್ಸಿನ್ ಹಾಕಲಾಗುತ್ತಿದೆ. ದಿನಕ್ಕೆ ಸರಾಸರಿ 80 ಮಂದಿ ಕೋವ್ಯಾಕ್ಸಿನ್ ಪಡೆದಿದ್ದಾರೆ.