ಭೂಕಂಪವಾದರೂ ಅಲುಗಾಡದು ಕೆಂಪೇಗೌಡ ಪ್ರತಿಮೆ: ಸಚಿವ ಅಶ್ವತ್ಥ್‌ನಾರಾಯಣ
ಬೆಂಗಳೂರಿನ ಹೊರವಲಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಮತ್ತು ಥೀಮ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದೆ.
ಬೆಂಗಳೂರು (ನ.10): ಬೆಂಗಳೂರಿನ ಹೊರವಲಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಮತ್ತು ಥೀಮ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದೆ. ಅದ್ಭುತವಾಗಿ ಮೂಡಿ ಬಂದಿರುವ ಈ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅನಾವರಣಗೊಳಿಸಲಿದ್ದಾರೆ.
ಈ ಪ್ರತಿಮೆಯ ಸ್ಥಾಪನೆಗೆ ಬಹುವಾಗಿ ಶ್ರಮಿಸಿದ್ದು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ, ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ. ಏನೆಲ್ಲಾ ಅಡಚಣೆ ಎದುರಾದರೂ ಅವರು ಛಲ ಬಿಡದ ತ್ರಿವಿಕ್ರಮನಂತೆ ಅಂದುಕೊಂಡಂತೆಯೇ ಪ್ರತಿಮೆ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆರಂಭದಿಂದ ಕೊನೆಯ ಹಂತದವರೆಗೂ ಅದರ ಹೊಣೆ ಹೊತ್ತ ಅಶ್ವತ್ಥನಾರಾಯಣ ಅವರು ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ಪ್ರತಿಮೆ ಸ್ಥಾಪನೆಯ ವಿವರ ಹಂಚಿಕೊಂಡಿದ್ದಾರೆ. ಸಂದರ್ಶನದ ಆಯ್ದ ಭಾಗ ಹೀಗಿದೆ:
* ಕೆಂಪೇಗೌಡ ಪ್ರತಿಮೆ ಪರಿಕಲ್ಪನೆ ರೂಪುಗೊಂಡಿದ್ದು ಹೇಗೆ?
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣಗೊಂಡ ಬಳಿಕ ಅಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಬೇಕು ಎನ್ನುವ ಉದ್ದೇಶವಿತ್ತು. ಈ ದಿಕ್ಕಿನಲ್ಲಿ ಹಿಂದಿನ ಸರ್ಕಾರಗಳೂ ಪ್ರಯತ್ನ ಮಾಡಿದ್ದವು. ಆದರೆ, ಸರಿಯಾದ ಸ್ಥಳ ಯಾವುದು ಎಂಬುದು ತೀರ್ಮಾನ ಆಗಿರಲಿಲ್ಲ. ಮೊದಲಿನ ಜಾಗ ವಿಮಾನ ನಿಲ್ದಾಣದ ಆಚೆ ಇತ್ತು. ಅದು ಎತ್ತರದ ದೃಷ್ಟಿಯಿಂದ ನೋಡಿದಾಗ ತೊಡಕಾಗುವ ಸಾಧ್ಯತೆ ಇತ್ತು. ಹಾಗಾಗಿ ಸುಮಾರು 15 ಅಡಿಯ ಒಂದು ಪ್ರತಿಮೆ ಮಾಡಬೇಕು ಎಂಬ ಆಲೋಚನೆ ಆಗ ಇತ್ತು. ಅದು ಸಾಂಕೇತಿಕವಾಗಿ ಇರುತ್ತಿತ್ತು. ಆದರೆ ಅದು ಕೂಡ ಟೇಕ್ ಆಫ್ ಆಗಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆಗಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಕೆಂಪೇಗೌಡರ ಬೃಹತ್ ಪ್ರತಿಮೆ ಸ್ಥಾಪಿಸುವ ಪ್ರಕಟಣೆ ಮಾಡಿದರು. ಪ್ರಕಟಣೆ ಮಾಡಿ ನನ್ನನ್ನೂ ಕರೆದು ಇದನ್ನು ಕಾರ್ಯರೂಪಕ್ಕೆ ತರುವ ಹೊಣೆ ನಿಮ್ಮದು ಎಂದಿದ್ದರು.
ಸರ್ಕಾರವೇಕೆ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದೆ?: ಸಚಿವ ಸುಧಾಕರ್
* ಪ್ರತಿಮೆ, ಥೀಮ್ ಪಾರ್ಕ್ ನಿಮ್ಮ ಹೆಗಲಿಗೇಕೆ?
ಮುಂಚೆಯೇ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ರಚನೆಯಾಗಿತ್ತು. ಅದರ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳು ಹಾಗೂ ಉಪಾಧ್ಯಕ್ಷರಾಗಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಇರುತ್ತಾರೆ. ಹೀಗಾಗಿ ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದ ಕಾರಣ ನಾನು ಆ ಪ್ರಾಧಿಕಾರದ ಉಪಾಧ್ಯಕ್ಷನಾಗಿದ್ದೆ. ಹೀಗಾಗಿ ಪ್ರತಿಮೆ ಸ್ಥಾಪನೆಯ ಹೊಣೆಗಾರಿಕೆ ನನ್ನ ಭುಜದ ಮೇಲೆ ಬಿತ್ತು. ಆಗ ನಾನು ನಾವೇಕೆ ದುಡ್ಡು ಖರ್ಚು ಮಾಡಬೇಕು ಸರ್. ವಿಮಾನ ನಿಲ್ದಾಣದವರೇ ಆ ಕೆಲಸ ಮಾಡಬಹುದಲ್ಲ ಎಂದು ಹೇಳಿದೆ. ಯಡಿಯೂರಪ್ಪನವರು ನಾನು ಹೇಳಿದಷ್ಟುನೀವು ಮಾಡಿ ಎಂದು ಹೇಳಿ ನನ್ನನ್ನು ಕಳಿಸಿಕೊಟ್ಟರು! ತಕ್ಷಣ ನಾನು ಕಾರ್ಯರಂಗಕ್ಕೆ ಇಳಿದು ನಗರಾಭಿವೃದ್ಧಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಕಾರ್ಯಪ್ರವೃತ್ತನಾದೆ.
* ಕಾರ್ಯರೂಪ ಹೇಗೆ? ಏನೆಲ್ಲಾ ಅಡಚಣೆ?
ಕಂದಾಯ ಇಲಾಖೆಯ ಅಡಿಯಲ್ಲಿ ಇಂಥ ಏಳು ನೂರರಿಂದ ಎಂಟು ನೂರು ಪ್ರಾಧಿಕಾರಗಳು ಇವೆ. ಅವರಿಗೆ ಇದೂ ಒಂದು ಪ್ರಾಧಿಕಾರ ಅಷ್ಟೇ ಅನ್ನಿಸುವ ಅಪಾಯವಿತ್ತು. ಹೀಗಾಗಿ, ಮೊದಲು ಅಭಿವೃದ್ಧಿ ಪ್ರಾಧಿಕಾರವನ್ನು ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ತಂದೆವು. ವಿಮಾನ ನಿಲ್ದಾಣ, ನಗರಾಭಿವೃದ್ಧಿ ಇಲಾಖೆ ಮತ್ತಿತರ ಇಲಾಖೆಗಳ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಿದೆವು. ಸಹಜವಾಗಿಯೇ ವಿಮಾನ ನಿಲ್ದಾಣದ ಅಧಿಕಾರಿಗಳು ನಿಲ್ದಾಣದ ಸುರಕ್ಷತೆ, ವಿಮಾನ ಹಾರಾಟಕ್ಕೆ ತೊಂದರೆಯಾಗಬಹುದು ಎಂದೆಲ್ಲ ಅನುಮಾನ ಎತ್ತಿದರು. ಅವರ ಅನುಮಾನಗಳಿಗೆಲ್ಲಾ ನಾನೇ ಸೂಕ್ತ ಉತ್ತರ ಕೊಟ್ಟೆ. ಜೊತೆಗೆ ಅವರಿಗೂ ಇದು ಎಷ್ಟುಮಹತ್ವದ ಪ್ರತಿಮೆ ಎಂದು ಮನವರಿಕೆ ಮಾಡಿಕೊಟ್ಟೆ. ಅವರು ತಕ್ಷಣ 23 ಎಕರೆ ಜಾಗವನ್ನು ಪ್ರಾಧಿಕಾರಕ್ಕೆ ಕೊಡಲು ಸಮ್ಮತಿಸಿದರು. ಬಳಿಕ ಐಡೆಕ್ಸ್ ಸಂಸ್ಥೆಯವರನ್ನು ಕರೆಸಿ ಕೆಂಪೇಗೌಡ ಪ್ರತಿಮೆ ಹೇಗಿರಬೇಕು, ಈ ಕೆಲಸವನ್ನು ಯಾರಿಗೆ ವಹಿಸಬೇಕು ಎಂಬಿತ್ಯಾದಿ ಸಂಗತಿಗಳನ್ನು ಅವರ ಜತೆಗೆ ಚರ್ಚೆ ಮಾಡಿದೆವು.
* ಭವ್ಯ ಪ್ರತಿಮೆ ನಿರ್ಮಾಣ ಯಾರಿಂದ?
ಕೆಂಪೇಗೌಡ ಒಬ್ಬ ಶ್ರೇಷ್ಠ ಆಡಳಿತಗಾರ. ಶೂರ ಮತ್ತು ಸಾಮಂತ. ಈ ಮೂರೂ ವ್ಯಕ್ತಿತ್ವಗಳು ಆ ಪ್ರತಿಮೆಯಲ್ಲಿ ಹೇಗೆ ಮೇಳೈಸಬೇಕು ಎಂಬ ವಿಚಾರ ನಮ್ಮ ಮುಂದಿತ್ತು. ಮುಖ್ಯಮಂತ್ರಿಗಳು, ಸ್ವಾಮೀಜಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣತರ ಜತೆಗೆ ಚರ್ಚಿಸಿ ಅಂತಿಮವಾಗಿ ಪ್ರತಿಮೆಯ ನಿರ್ಮಾಣದ ಹೊಣೆಯನ್ನು ರಾಂ ಸುತಾರ್ ಅವರಿಗೇ ಕೊಡಬೇಕು ಎಂದು ನಿರ್ಧರಿಸಿದೆವು. ನಂತರ ಇಡೀ ಯೋಜನೆಯನ್ನು ಅವರಿಗೆ ವಹಿಸಿದೆವು. ಅವರಿಗೆ ಪ್ರತಿಮೆಯನ್ನು ಮಾಡುವುದರಲ್ಲಿ ಇರುವ ಪರಿಣತಿ ತಾಂತ್ರಿಕ ವಿಚಾರಗಳಲ್ಲಿ ಇಲ್ಲ. ಹೀಗಾಗಿ ಅದರಲ್ಲಿ ಅವರಿಗೆ ಆ ಕ್ಷೇತ್ರದ ತಜ್ಞರಿಂದ ನೆರವು ಒದಗಿಸಿದೆವು. ಪ್ರತಿಮೆ ಮಾಡುವುದು ಒಂದು ಕೆಲಸ. ಆದರೆ, ಅದನ್ನು ತಂದು ನಿಲ್ಲಿಸಿದ ಮೇಲೆ ಏನೂ ತೊಂದರೆಯಾಗಬಾರದು. ಗಾಳಿ ಬೀಸುವಿಕೆ ಇರಬಹುದು, ಪ್ರತಿಮೆ ನಿಂತ ಜಾಗದ ಸೂಕ್ತತೆ ಇರಬಹುದು. ಏಕೆಂದರೆ ಅದು ಭೂಕಂಪನ ನಿರೋಧಕ ಶಕ್ತಿ ಹೊಂದಿರಬೇಕು. ಇವನ್ನೆಲ್ಲ ನಾವು ಆಯಾ ಕ್ಷೇತ್ರಗಳ ತಜ್ಞರಿಂದ ಮಾಹಿತಿ ಪಡೆದೆವು. ಅದರ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಿದೆವು.
108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಗೆ world book of records ಗರಿ
* ಪ್ರತಿಮೆಯ ವೈಶಿಷ್ಟ್ಯತೆ ಏನು? ಎಷ್ಟುವೆಚ್ಚ
4 ಜಿ ವಿನಾಯಿತಿಯನ್ನೂ ಪಡೆದು ಮುಖ್ಯಮಂತ್ರಿಗಳ ಜತೆಗೆ ಚರ್ಚೆ ಮಾಡಿ 64 ಕೋಟಿ ರು. ವೆಚ್ಚದಲ್ಲಿ 100 ಟನ್ ಭಾರದ ಕಂಚಿನ ಪ್ರತಿಮೆ ನಿರ್ಮಿಸಲು ನಿರ್ಧರಿಸಲಾಯಿತು. ಇದಕ್ಕೆ ಪೂರಕವಾಗಿ 120 ಟನ್ ಕಬ್ಬಿಣ ಬಳಸಿದ ಕಟ್ಟೆಯನ್ನು ನಿರ್ಮಿಸಲೂ ನಿರ್ಧರಿಸಿದೆವು. ಕಟ್ಟೆಗೆ ಉಷ್ಣತಾ ನಿರೋಧಕ ಶಕ್ತಿ ಇರುವ ಕಾಂಕ್ರೀಟ್ ಅನ್ನು ಬಳಸಿದ್ದೇವೆ. ಅದರ ಮೇಲೆ ನಾಲ್ಕು ಉಬ್ಬು ಶಿಲ್ಪಗಳನ್ನು ಮಾಡಿಸಿದ್ದೇವೆ. ಇವು ತಲಾ ಒಂದು ಟನ್ ತೂಕ ಇವೆ. ಸುತ್ತಲೂ ಭೂ ದೃಶ್ಯಗಳನ್ನು ಅಂದವಾಗಿ ರೂಪಿಸಲಾಗಿದೆ. ಕೋವಿಡ್ ಇದ್ದರೂ ಅದರಿಂದ ಎಷ್ಟೇ ಅಡಚಣೆಗಳು ಬಂದರೂ ಯಾವ ಕೆಲಸವನ್ನೂ ನಾವು ನಿಲ್ಲಿಸಲಿಲ್ಲ. ಏಕೆಂದರೆ ಯಾರೂ ತಮ್ಮ ಮೇಲೆ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ. ನಾನು ಎಲ್ಲರ ಕುತ್ತಿಗೆ ಮೇಲೆ ಕುಳಿತು ಕೆಲಸ ಮಾಡಿಸಿದೆ. ಬೆಂಗಳೂರು ನಗರದ ಅಭಿವೃದ್ಧಿಗಾಗಿ ತೆಗೆದು ಇರಿಸಿದ್ದ ನೂರು ಕೋಟಿ ರೂಪಾಯಿಗಳನ್ನೇ ಈ ಯೋಜನೆಗೆ ವರ್ಗಾಯಿಸಿ ಬಿಟ್ಟೆವು. ಯಡಿಯೂರಪ್ಪನವರು ಮುಂದೆ ಬಜೆಟ್‌ನಲ್ಲಿ ಹಣ ನಿಗದಿ ಮಾಡಿದರು.
* ಥೀಮ್ ಪಾರ್ಕ್ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆಯೇ?
ಹೌದು. ಇದರ ಜತೆಗೆ ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾಗಿರುವ ಮೆಟಾವರ್ಸ್ ಅನ್ನೂ ಇಲ್ಲಿ ಅಳವಡಿಸಲಿದ್ದೇವೆ. ಅದು ವರ್ಚುಯಲ್ ಅನುಭವನ್ನು ತಂದುಕೊಡುತ್ತದೆ. ಆ ತಂತ್ರಜ್ಞಾನದ ಮೂಲಕ ಕೆಂಪೇಗೌಡರನ್ನು ನಿಜರೂಪದಲ್ಲಿಯೇ ನಾವು ಕಾಣಬಹುದು. ಈ ತಂತ್ರಜ್ಞಾನ ಎಷ್ಟುಅದ್ಭುತವಾಗಿದೆ ಎಂದರೆ ನಾವು ನಿಜವೇ ಅಥವಾ ತಂತ್ರಜ್ಞಾನದಲ್ಲಿ ಕಾಣುವುದು ನಿಜವೇ ಎಂಬ ಅನುಮಾನ ಬರುವಷ್ಟುಅದ್ಭುತ ಆವಿಷ್ಕಾರಗಳು ಆಗಿವೆ. ಇದು ಲೇಸರ್ ಷೋಗಿಂತ ಚೆನ್ನಾಗಿರುತ್ತದೆ. ಅಲ್ಲಿಗೇ ಮೆಟ್ರೋ ಸ್ಟೇಷನ್ ಬರುತ್ತದೆ. ಎಲ್ಲ ರಸ್ತೆಗಳು ಆ ಮೂಲಕವೇ ಹಾದು ಹೋಗುವಂತೆ ಮಾಡುತ್ತೇವೆ. ಬಹುಶಃ ಇನ್ನು ಆರು ತಿಂಗಳಲ್ಲಿ ಥೀಮ್ ಪಾರ್ಕ್ ಕೆಲಸ ಪೂರ್ಣಗೊಳ್ಳಲಿದೆ.
* ಪ್ರವಾಸಿ ಸರ್ಕಿಟ್ ಅಭಿವೃದ್ಧಿ ಪ್ರಸ್ತಾಪ ಇದೆಯಂತೆ?
ಬೆಂಗಳೂರಿನ ಸುತ್ತಮುತ್ತ ಒಂಬತ್ತು ದುರ್ಗ ಹೆಸರಿನ ಊರುಗಳು ಇವೆ. ದೇವರಾಯನ ದುರ್ಗ, ಸಾವನದುರ್ಗ, ಹುಲಿಯೂರು ದುರ್ಗ, ಭೈರವ ದುರ್ಗ ಮುಂತಾದವು. ಅದ್ಭುತವಾದ ವಾತಾವರಣ ಇಲ್ಲಿ ಇದೆ. ಇವೆಲ್ಲ ನಿಸರ್ಗ ರಮ್ಯ ತಾಣಗಳು. ಟ್ರೆಕ್ಕಿಂಗ್ ಮುಂತಾದ ಅದ್ಭುತ ಪ್ರವಾಸೋದ್ಯಮಕ್ಕೆ ಇವು ಹೇಳಿ ಮಾಡಿಸಿದ ತಾಣಗಳು. ಕೆಂಪೇಗೌಡರ ಕಾಲದಲ್ಲಿ ಕಟ್ಟಿಸಿದ ಅನೇಕ ಅದ್ಭುತ ದೇವಾಲಯಗಳೂ ಇಲ್ಲಿಯೇ ಇವೆ. ಕೋಟೆಗಳು ಇವೆ. ಐತಿಹಾಸಿದ ಮಹತ್ವದ ತಾಣಗಳು ಇವೆ. ಇವನ್ನೆಲ್ಲ ದೃಷ್ಟಿಯಲ್ಲಿ ಇಟ್ಟುಕೊಂಡೇ ರಾಮನಗರ ಪ್ರವಾಸಿ ಶೃಂಗಮೇಳವನ್ನೇ ಮಾಡಿದ್ದೆವು. ಹೈಕಿಂಗ್, ಟ್ರಕ್ಕಿಂಗ್, ಪ್ಯಾರಾ ಗ್ಲೈಡಿಂಗ್ ಮುಂತಾದವು ಇದರಲ್ಲಿ ಸೇರಿದ್ದವು. ಜಲಕ್ರೀಡೆಗಳು ಅದರಲ್ಲಿ ಇದ್ದವು.
* ಪ್ರಗತಿಯ ಪ್ರತಿಮೆ ಎಂಬ ಹೆಸರೇಕೆ?
ಬೆಂಗಳೂರು ಯಾವ ಮಹಾನಗರಗಳಿಗೂ ಕಡಿಮೆ ಇಲ್ಲ. ದೆಹಲಿ, ಮುಂಬೈಯನ್ನು ನಾವು ಹಿಂದೆ ಹಾಕಿದ್ದೇವೆ. ಎಜುಟೆಕ್, ಮೆಡಿಟೆಕ್ ಆಗಲಿ, ಇ-ಕಾಮರ್ಸ್ ಆಗಲಿ, ಅಗ್ರಿ ಟೆಕ್ ಆಗಲಿ, ಸ್ಪೇಸ್ ಆಗಲಿ, ಏರೋ ಸ್ಪೇಸ್ ಆಗಲಿ, ಆಟೊಮೇಷನ್, ಪ್ರಿಸಿಷನ್ ಮುಂತಾಗಿ ಯಾವುದೇ ಇರಲಿ. ಯಾವ ಕ್ಷೇತ್ರದಲ್ಲಿ ನಾವು ಹಿಂದೆ ಇದ್ದೇವೆ ಹೇಳಿ. ಇವು ಎಲ್ಲದಕ್ಕೂ ಸಂಬಂಧಿಸಿದ ಸಂಸ್ಥೆಗಳು ಇಲ್ಲಿ ಇಲ್ಲದೇ ಇರಬಹುದು. ಆದರೆ, ಸಂಪನ್ಮೂಲ ಲಭ್ಯವಿದೆ. ಅದು ಬೆಂಗಳೂರಿನ ವಿಶೇಷ. ನಾವು ಇನ್ನಷ್ಟುಪ್ರಯತ್ನ ಮಾಡಿದರೆ ಇಡೀ ಭಾರತ ಒಂದು ಕಡೆ ನಿಂತರೆ ಕರ್ನಾಟಕ ಒಂದು ಕಡೆ ನಿಲ್ಲಬಹುದು. ಆ ರೀತಿ ಬೆಳವಣಿಗೆ ಇಲ್ಲಿ ಸಾಧ್ಯವಿದೆ. ಈ ಎಲ್ಲ ಹಿನ್ನೆಲೆಯಲ್ಲಿ ನಾವು ಕೆಂಪೇಗೌಡರ ಪ್ರತಿಮೆಗೆ ಸ್ಟ್ಯಾಚ್ಯು ಆಫ್ ಪ್ರಾಸ್ಪೆರಟಿ ಎಂದು ಹೆಸರು ಇಟ್ಟಿದ್ದೇವೆ.
* ಪ್ರತಿಮೆಯ ಸ್ಥಾಪನೆಯಲ್ಲಿ ಯಾರಾರಯರ ಸಹಾಯ?
ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಈ ಕೆಲಸ ಮಾಡಿದ್ದೇವೆ. ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಎಲ್ಲ ಹಂತದಲ್ಲಿಯೂ ನಮಗೆ ಸಹಾಯ ಮಾಡಿದರು. ಮಾರ್ಗದರ್ಶನ ಮಾಡಿದರು. ನಾವು ಕರೆದಾಗ ಅವರು ಬಂದರು. ನೋಡಿದರು. ಅವರಿಗೆ ಜನರ ಸಂಪರ್ಕ ಇರುತ್ತದೆ. ಅದರಿಂದ ರೂಪುಗೊಂಡ ಅಭಿಪ್ರಾಯಗಳು ಅವರ ಮನಸ್ಸಿನಲ್ಲಿ ಇರುತ್ತವೆ. ನಂಜಾವಧೂತ ಸ್ವಾಮೀಜಿಯವರು, ಚಂದ್ರಶೇಖರ ಸ್ವಾಮೀಜಿಯವರೂ ಬಂದು ನೋಡುತ್ತಿದ್ದರು. ಉಳಿದಂತೆ ದೇವೇಗೌಡರನ್ನು ಕರೆಸಿದ್ದೆವು. ಕುಮಾರಸ್ವಾಮಿಯವರು ಬಂದಿದ್ದರು. ಶಿವಕುಮಾರ್ ಅವರನ್ನು ಕರೆದಿದ್ದೆವು. ಸಿದ್ದರಾಮಯ್ಯ ಬಂದಿದ್ದರು. ಸರ್ಕಾರದಲ್ಲಿ ಇದ್ದವರನ್ನೂ ಕರೆದಿದ್ದೆವು.
ಬೆಂಗಳೂರು: ಕೆಂಪೇಗೌಡರ ಪ್ರತಿಮೆಗೆ 22,000 ಸ್ಥಳಗಳ ಪವಿತ್ರ ಮೃತ್ತಿಕೆ ಅರ್ಪಣೆ
* ಮೃತ್ತಿಕೆ ಸಂಗ್ರಹ ಅಭಿಯಾನದ ಕಾರಣ?
ಇದು ನಮ್ಮ ಪರಂಪರೆಯಲ್ಲಿಯೇ ಇದೆ. ಇಂಥ ದೊಡ್ಡ ಕೆಲಸ ಮಾಡುವಾಗ ಸಂಸ್ಥೆಗಳ ಜತೆಗೆ ಮತ್ತು ನಾಗರಿಕರ ಜತೆಗೆ ಒಂದು ಸಂಪರ್ಕ ಸ್ಥಾಪಿಸಲು ಎಲ್ಲರೂ ಪ್ರಯತ್ನ ಮಾಡಿಯೇ ಮಾಡುತ್ತಾರೆ. ಗುಜರಾತಿನ ಏಕತಾ ಪ್ರತಿಮೆ ಮಾಡುವಾಗ ಎಲ್ಲ ಕಡೆಯಿಂದ ಕಬ್ಬಿಣವನ್ನು ಸಂಗ್ರಹಿಸಲಾಯಿತು. ನಮಗೂ ಆ ಉದ್ದೇಶವಿತ್ತು. ಕೋವಿಡ್ ಕಾರಣವಾಗಿ ಅದು ಸಾಧ್ಯವಾಗಲಿಲ್ಲ. ಆಗ ನಮಗೆ ಏನು ಅನಿಸಿತು ಎಂದರೆ ಜಲ ಮತ್ತು ಮೃತ್ತಿಕೆ ಸಂಗ್ರಹಿಸೋಣ ಎಂದುಕೊಂಡೆವು. ಜಲ ಸಂಗ್ರಹ ಸಮಸ್ಯೆಯಾದ ಕಾರಣ ಈಗ ಮೃತ್ತಿಕೆ ಸಂಗ್ರಹದ ಅಭಿಯಾನ ಆರಂಭವಾಗಿದೆ. ಇಡೀ ಕರ್ನಾಟಕದ ಮೃತ್ತಿಕೆ ಇಲ್ಲಿ ಒಂದು ಕಡೆ ಸಂಗ್ರಹವಾಗುತ್ತದೆ ಹಾಗೂ ಮೃತ್ತಿಕೆಯೂ ಪ್ರತಿಮೆಯ ಆವರಣದಲ್ಲಿ ನಾಡ ಪ್ರಭುವಿಗೆ ಗೌರವಾರ್ಥವಾಗಿ ನಾಡಿನ ಐಕ್ಯತೆ ಸಾರುವ ಕೆಂಪೇಗೌಡ ನಾಡ ಗೋಪುರ ಸ್ವರೂಪ ಪಡೆದು ಶಾಶ್ವತವಾಗಲಿದೆ.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ಯು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಅನುಸಾರ ಮೊದಲ ಮತ್ತು ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂಬುದು ನಮಗೆ ಹೆಮ್ಮೆಯ ವಿಷಯ. 108 ಅಡಿಯ ಈ ಪ್ರತಿಮೆ ಕೆಂಪೇಗೌಡರ ದೂರದೃಷ್ಟಿಯ ಬೆಂಗಳೂರನ್ನು ಬಿಂಬಿಸುತ್ತದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ