ಬೆಂಗಳೂರು: ಕೆಂಪೇಗೌಡರ ಪ್ರತಿಮೆಗೆ 22,000 ಸ್ಥಳಗಳ ಪವಿತ್ರ ಮೃತ್ತಿಕೆ ಅರ್ಪಣೆ
ಮೃತ್ತಿಕೆ ಸಂಗ್ರಹಕ್ಕೆ 31 ಜಿಲ್ಲೆಗಳಲ್ಲಿ 15 ದಿನ, 21 ರಥ, 20000 ಕಿ.ಮೀ ಸಂಚಾರ
ಬೆಂಗಳೂರು(ನ.10): ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಗೆ ನಾಡಿನ 22 ಸಾವಿರಕ್ಕೂ ಹೆಚ್ಚು ಸ್ಥಳಗಳಿಂದ ಸಂಗ್ರಹಿಸಿ ತರಲಾಗಿದ್ದ ಪವಿತ್ರ ಮೃತ್ತಿಕೆಯನ್ನು (ಮಣ್ಣು) ಬುಧವಾರ ರಾಜ್ಯ ಸರ್ಕಾರದ ಸಚಿವರು, ಸಂಸದರ ಸಮ್ಮುಖದಲ್ಲಿ ಸಾಂಕೇತಿಕವಾಗಿ ಸಮರ್ಪಿಸಲಾಯಿತು.ಪ್ರತಿಮೆ ಶುಕ್ರವಾರ (ನ.11) ಲೋಕಾರ್ಪಣೆಯಾಗುತ್ತಿದ್ದು ಈ ಹಿನ್ನೆಲೆ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಆರ್.ಅಶೋಕ್, ಎಂಟಿಬಿ ನಾಗರಾಜ್, ಸಂಸದರಾದ ಡಿ.ವಿ.ಸದಾನಂದಗೌಡ, ಬಚ್ಚೇಗೌಡ, ರಾಜ್ಯಸಭೆ ಸದಸ್ಯ ಜಗ್ಗೇಶ್, ಶಾಸಕ ಎಚ್.ಆರ್.ವಿಶ್ವನಾಥ್ ಸ್ಥಳ ಪರಿಶೀಲನೆ ನಡೆಸಿದರು.
ಆ ಬಳಿಕ ಸುಮುಹೂರ್ತದಲ್ಲಿ ಋುತ್ವಿಜ್ಞರ ವೇದಮಂತ್ರ ಘೋಷದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ರಾಜ್ಯದ 31 ಜಿಲ್ಲೆಗಳಿಂದಲೂ ಪವಿತ್ರ ಮೃತ್ತಿಕೆಯೊಂದಿಗೆ ಆಗಮಿಸಿದ್ದ ವಿಶೇಷ ರಥಗಳನ್ನು ವಿಧಿಬದ್ಧವಾಗಿ ಬರಮಾಡಿಕೊಳ್ಳಲಾಯಿತು. ನಂತರ, ಪವಿತ್ರ ಮೃತ್ತಿಕೆಗೆ ಪೂಜೆ ಸಲ್ಲಿಸಿ, ಮುಂದಿನ ವಿಧಿಗಳನ್ನು ಮಂತ್ರಸಹಿತವಾಗಿ ನೆರವೇರಿಸಿದರು.
ಕೆಂಪೇಗೌಡರ ಕಂಚಿನ ಪ್ರತಿಮೆಗಾಗಿ ಮುಡುಕುತೊರೆಯಲ್ಲಿ ಮೃತ್ತಿಕೆ ಸಂಗ್ರಹ
ಬಳಿಕ ಮಾತನಾಡಿದ ಸಚಿವ ಡಾ.ಕೆ.ಅಶ್ವತ್ಥನಾರಾಯಣ, ‘ಕೆಂಪೇಗೌಡರ ಹೆಸರು ಇಡೀ ಕರ್ನಾಟಕದಲ್ಲಿ ಅಖಂಡತೆಯ ಭಾವನೆಯನ್ನು ಮೂಡಿಸಬೇಕೆಂಬ ಉದ್ದೇಶದಿಂದ 15 ದಿನಗಳ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಸಿದ್ಧಪಡಿಸಿದ್ದ 21 ವಿಶೇಷ ರಥಗಳು ನಾಡಿನ 22 ಸಾವಿರ ಸ್ಥಳಗಳಿಗೆ ಹೋಗಿಬಂದಿವೆ. ಈ ಅವಧಿಯಲ್ಲಿ ರಥಗಳು 3.61 ಕೋಟಿಗೂ ಹೆಚ್ಚು ಜನರನ್ನು ಸಂಪರ್ಕಿಸಿದ್ದು, 20 ಸಾವಿರ ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸಿವೆ. ಜತೆಗೆ, ಈ ಅಭಿಯಾನದ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೈಗೊಂಡ ಪ್ರಚಾರದ ಮೂಲಕ 64 ಲಕ್ಷ ಜನರನ್ನು ತಲುಪಲಾಗಿದೆ ಎಂದು ವಿವರಿಸಿದರು.
ದೊಡ್ಡ ಪ್ರತಿಮೆ:
ಪ್ರಪಂಚದ ಯಾವ ನಗರದಲ್ಲೂ ಅಲ್ಲಿಯ ಸಂಸ್ಥಾಪಕರ ಇಷ್ಟುಎತ್ತರದ ಪ್ರತಿಮೆ ಇಲ್ಲ. ಈ ಮೂಲಕ ಕೆಂಪೇಗೌಡರ ಪ್ರತಿಮೆಯು ವಲ್ಡ್‌ರ್ ಬುಕ್ ಆಫ್ ರೆಕಾರ್ಡ್ಸ್ಗೆ ಸೇರಿದೆ. ಪ್ರತಿಮೆ ಮತ್ತು 23 ಎಕರೆ ಥೀಮ್ ಪಾರ್ಕ್ಗೆ ಒಟ್ಟು 84 ಕೋಟಿ ರು.ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಸಚಿವ ಆರ್.ಅಶೋಕ್ ಮಾತನಾಡಿ, ರಾಜ್ಯದ ಮೂಲೆ ಮೂಲೆಗಳಿಂದ, ವಿವಿಧ ದೇವಾಲಯಗಳಿಂದ ಪವಿತ್ರ ಮೃತ್ತಿಕೆ ತರಲಾಗಿದೆ. ನನ್ನನ್ನು ಒಳಗೊಂಡಂತೆ, ಅಶ್ವಥ್ ನಾರಾಯಣ ಹಾಗೂ ಇತರ ಸಚಿವರು ಹಂಪಿ, ಕಿತ್ತೂರು ಮುಂತಾದ ಸ್ಥಳಗಳಿಗೆ ತೆರಳಿ ಮೃತ್ತಿಕೆ ಸಂಗ್ರಹಿಸಿದ್ದೇವೆ. ಕೆಂಪೇಗೌಡರು ಪಾಳೇಗಾರರಲ್ಲ. ವಿಜಯನಗರದ ಸಾಮಂತ ರಾಜರಾಗಿದ್ದರು. ಅವರು ಕಟ್ಟಿದ ಬೆಂಗಳೂರಿನಲ್ಲಿ ನಾವೆಲ್ಲ ಇದ್ದೇವೆ. ಸಾಮಾಜಿಕ ನ್ಯಾಯ ಕಲ್ಪಿಸಿ ಕಟ್ಟಿದ ಬೆಂಗಳೂರು ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮಹಾಪುರುಷ ಕೆಂಪೇಗೌಡರಿಗೆ ನ್ಯಾಯ ಸಿಕ್ಕಿರಲಿಲ್ಲ. ನಮ್ಮ ಸರ್ಕಾರದಿಂದ ನಾಡು ಕಟ್ಟಿದ, ಸರ್ವ ಜನಾಂಗದ ಉದ್ಧಾರಕ ಕೆಂಪೇಗೌಡರಿಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.