ಬೆಂಗಳೂರು(ಅ.04): ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ ಮತ್ತು ಕುವೆಂಪು ಭಾಷಾ ಭಾರತೀ ಪ್ರಾಧಿಕಾರದಲ್ಲಿ ವಿವಿಧ ದುರಸ್ತಿ ಕಾಮಗಾರಿಗಳ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ತನಿಖೆ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಆದೇಶ ನೀಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರ ಕೊಠಡಿಗೆ ಹವಾನಿಯಂತ್ರಿಕ ಉಪಕರಣಗಳ (ಎಸಿ) ಅಳವಡಿಕೆ, ರವೀಂದ್ರ ಕಲಾಕ್ಷೇತ್ರದ ಒಳಾಂಗಣದಲ್ಲಿ ಅಳವಡಿಸಲು ಸಿಸಿ ಕ್ಯಾಮೆರಾ ಸಾಮಗ್ರಿಗಳ ಖರೀದಿ ಮತ್ತು ರವೀಂದ್ರ ಕಲಾಕ್ಷೇತ್ರದ ಒಳಾಂಗಣ, ಹೊರಾಂಗಣ, ಕ್ಯಾಂಟೀನ್‌, ಸಂಸ ಬಯಲು ರಂಗಮಂದಿರ ಹಾಗೂ ಮಹಿಳಾ ವಿಶ್ರಾಂತಿ ಕೊಠಡಿ ಆವರಣದಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆಗಾಗಿ ವೈರಿಂಗ್‌ ಅಳವಡಿಸಲು ಸಾಮಗ್ರಿಗಳ ಖರೀದಿ ಸೇರಿದಂತೆ ವಿವಿಧ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ದೂರ​ಲಾ​ಗಿ​ತ್ತು.

ಬೆಂಗಳೂರಿನ 4 ಕಡೆ ಕಲಾಕ್ಷೇತ್ರ ನಿರ್ಮಾಣ: ಸಿ.ಟಿ.ರವಿ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲೂ ಸಹ ಕಳೆ ಐದು ವರ್ಷಗಳಿಂದ ಸಾಕಷ್ಟು ಕಾಮಗಾರಿಗಳು ನಡೆದಿದ್ದು, ಕೋಟ್ಯಂತರ ರು. ಅಕ್ರಮ ನಡೆದಿದೆ. ಕಲಾ ಗ್ರಾಮದ ರಂಗಮಂದಿರಕ್ಕೆ ಬೆಂಕಿ ಬಿದ್ದು ನಾಶವಾದಾಗ ಅದರ ನವೀಕರಣ ಮತ್ತು ರಿಪೇರಿ ಹೆಸರಿನಲ್ಲಿ ಅವ್ಯವಹಾರ ನಡೆಸಲಾಗಿದೆ. ಕಲಾಗ್ರಾಮದ ಸಿಬ್ಬಂದಿ ಬಳಸಿಕೊಂಡು ಕಲಾಗ್ರಾಮ ಸ್ವಚ್ಛಗೊಳಿಸಿ ಅದಕ್ಕೆ ಪ್ರತ್ಯೇಕ ಖರ್ಚು ತೋರಿಸಿ ಇಲಾಖೆಯಿಂದ ಅಧಿಕಾರಿಗಳು ಹಣ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಎಲ್ಲಾ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ಅವರಿಗೆ ಸೂಚನೆ ನೀಡಿದ್ದಾರೆ.

ಈ ಅವ್ಯವಹಾರ ಪ್ರಕರಣದಲ್ಲಿ ರವೀಂದ್ರ ಕಲಾಕ್ಷೇತ್ರದ ವ್ಯವಸ್ಥಾಪಕ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರಿಜಿಸ್ಟ್ರಾರ್‌ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಸಾಂಸ್ಕೃತಿಕ ಕಲಾಕ್ಷೇತ್ರವಾದ ರವೀಂದ್ರ ಕಲಾಕ್ಷೇತ್ರವನ್ನು ಕುಡುಕರ ಅಡ್ಡೆಯನ್ನಾಗಿ ಮಾಡುತ್ತಿರುವ ಬಗ್ಗೆಯೂ ದೂರುಗಳು ಬಂದಿದ್ದು, ಈ ಕುರಿತು ಕೂಡ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.