19 ಜಿಲ್ಲೆಗಳಲ್ಲಿ ನಾಳೆಯಿಂದ ಮಿನಿ ಅನ್‌ಲಾಕ್
* ಆರ್ಥಿಕ ಚಟುವಟಿಕೆ ಮಧ್ಯಾಹ್ನ 2ರವರೆಗೆ ವಿಸ್ತರಣೆ
* 50% ಸಿಬ್ಬಂದಿಯೊಂದಿಗೆ ಕಾರ್ಖಾನೆ ತೆರೆಯಲು ಅನುಮತಿ
* ರಾತ್ರಿ 7ರಿಂದ ಬೆಳಗ್ಗೆ 5 ಕೋವಿಡ್ ಕರ್ಫ್ಯೂ
ಬೆಂಗಳೂರು(ಜೂ.13): ರಾಜ್ಯದ 19 ಜಿಲ್ಲೆಗಳಲ್ಲಿ ಸೋಮವಾರದಿಂದ ಸೆಮಿ ಲಾಕ್‌ಡೌನ್ ಸಡಿಲಿಕೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳು ವ್ಯಾಪಾರ-ವಹಿವಾಟು ಹಾಗೂ ವಿವಿಧ ಚಟುವಟಿಕೆ ಆರಂಭಿಸಲು ಸಜ್ಜಾಗುತ್ತಿವೆ.
ವಿವಿಧ ಹಂತಗಳಲ್ಲಿ ಸೆಮಿ ಲಾಕ್‌ಡೌನ್ ಸಡಿಲಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಇದೀಗ ಮೊದಲ ಹಂತದ ಅನ್‌ಲಾಕ್ ಮಾರ್ಗಸೂಚಿ ಹೊರಡಿಸಿದೆ. ಪ್ರಮುಖವಾಗಿ ಕೈಗಾರಿಕೆ, ಕಾರ್ಖಾನೆ, ಉದ್ದಿಮೆಗಳಿಗೆ ಶೇ.50ರಷ್ಟುಕಾರ್ಮಿಕರು ಹಾಗೂ ಗಾರ್ಮೆಂಟ್ ಫ್ಯಾಕ್ಟರಿಗಳು ಶೇ.30ರಷ್ಟು ಕಾರ್ಮಿಕರೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಿರುವುದರಿಂದ ಶನಿವಾರದಿಂದ ಹಲವು ಕಾರ್ಖಾನೆಗಳಲ್ಲಿ ಸ್ವಚ್ಛತಾ ಕಾರ್ಯ ಬಿರುಸುಗೊಂಡಿದೆ. ಪೀಣ್ಯ, ಜೆ.ಸಿ.ನಗರ, ಯಶವಂತಪುರ ಮೊದಲಾದ ಕೈಗಾರಿಕಾ ಪ್ರದೇಶಗಳ ಹಲವು ಕಾರ್ಖಾನೆಗಳ ಸ್ವಚ್ಛತಾ ಕಾರ್ಯ ಆರಂಭವಾಗಿತ್ತು. ಸುಮಾರು ಒಂದು ತಿಂಗಳಿಂದ ಸ್ಥಗಿತಗೊಂಡಿದ್ದ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ಪುನರಾರಂಭಿಸಲು ತಯಾರಿ ಮಾಡಲಾಗುತ್ತಿದೆ.
ಲಾಕ್‌ಡೌನ್ ಮುಗಿಯುವವರೆಗೆ ಮನೆಯಲ್ಲೇ ಇರಿ : ಗೃಹ ಸಚಿವರ ಸೂಚನೆ
ಸರ್ಕಾರ ಅನ್‌ಲಾಕ್‌ಗೆ ಅವಕಾಶ ನೀಡಿರುವ ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಉಡುಪಿ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸೋಮವಾರದಿಂದ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆರ್ಥಿಕ ಚಟುವಟಿಕೆಗಳು ನಡೆಯಲಿವೆ. ಹೀಗಾಗಿ ವ್ಯಾಪಾರ-ವಹಿವಾಟು ಮತ್ತಷ್ಟು ಹೆಚ್ಚಳವಾಗಲಿದೆ.
ಲಾಕ್‌ಡೌನ್ ಸಡಿಲಿಕೆ ನಡುವೆಯೂ ಪ್ರತಿದಿನ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕೋವಿಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ವಾರಾಂತ್ಯದ ಕಫ್ರ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ವಾಹನಗಳ ಓಡಾಟ ಹೊರತುಪಡಿಸಿದರೆ ಇನ್ನುಳಿದ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲ. ರಾತ್ರಿ ವೇಳೆ ಕಾರ್ಯನಿರ್ವಹಿಸುವ ಕಾರ್ಖಾನೆಗಳ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಇರಿಸಿಕೊಂಡು ಓಡಾಡಬೇಕಿದೆ.
ಸಂತಸ:
19 ಜಿಲ್ಲೆಗಳಲ್ಲಿ ವ್ಯಾಪಾರದ ಅವಧಿಯನ್ನು ಮಧ್ಯಾಹ್ನ 2 ಗಂಟೆವರೆಗೆ ವಿಸ್ತರಿಸಿರುವುದರಿಂದ ಸಹಜವಾಗಿ ಹಣ್ಣು, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಮಾಡುವವರು, ಬೀದಿ ಬದಿ ವ್ಯಾಪಾರಿಗಳು ಸಂತಸಗೊಂಡಿದ್ದಾರೆ.