Asianet Suvarna News Asianet Suvarna News

ಚಾಮರಾಜನಗರ: ಕ್ರಷರ್‌ ಮಾಲೀಕರ ಮುಲಾಜಿನಲ್ಲಿ ಚೆಕ್‌ಪೋಸ್ಟ್‌..!

ಹಿರೀಕಾಟಿ ಬಳಿಯ ಖನಿಜ ತನಿಖಾ ಠಾಣೆಯ ಮುಂದೆಯೇ ಓವರ್‌ ಲೋಡ್‌ ತುಂಬಿದ ಟಿಪ್ಪರ್‌ಗಳು ಎಂಡಿಪಿ ಹಾಗೂ ರಾಯಲ್ಟಿ ಚೀಟಿ ಇಲ್ಲದೆ ತೆರಳುವುದನ್ನು ನಿತ್ಯ ನೋಡುತ್ತಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯಾಗಿದೆ.

Mineral Investigation Station Pretense Inspection at Gundlupete in Chamarajanagara grg
Author
First Published Nov 30, 2023, 11:30 PM IST

ಗುಂಡ್ಲುಪೇಟೆ(ನ.30):  ಕನ್ನಡಪ್ರಭ ಪತ್ರಿಕೆಯ ನಿರಂತರ ವರದಿಯ ಫಲವಾಗಿ ತಾಲೂಕಿನ ಹಿರೀಕಾಟಿ ಬಳಿ ಖನಿಜ ತನಿಖಾ ಠಾಣೆ ಆರಂಭಿಸಿದ್ದು ಇತಿಹಾಸ. ಆದರೆ ಕೆಲ ಕ್ರಷರ್‌, ಕ್ವಾರಿ ಮಾಲೀಕರ ಮುಲಾಜಿಗೆ ಒಳಗಾಗಿ ತಪಾಸಣೆ ಒಲ್ಲದ ಮನಸ್ಸಿನಿಂದ ನಡೆಯುತ್ತಿದೆ. ಹಿರೀಕಾಟಿ ಬಳಿಯ ಖನಿಜ ತನಿಖಾ ಠಾಣೆ ಇದ್ದರೂ ಕೆಲ ಕ್ರಷರ್‌, ಕ್ವಾರಿ ಮಾಲೀಕರ ಟಿಪ್ಪರ್‌ಗಳನ್ನು ನಿಲ್ಲುಸುತ್ತಿಲ್ಲ. ಜತೆಗೆ ರಾತ್ರಿ ವೇಳೆ ಇಬ್ಬರು ಹೋಂ ಗಾರ್ಡ್‌ ಕುಳಿತಿರುವುದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಾಧನೆ ಎನ್ನಬಹುದಾಗಿದೆ.

ಕ್ವಾರಿಯಿಂದ ಬೆಳ್ಳಂ ಬೆಳಗ್ಗೆಯೇ ಖನಿಜ ತನಿಖಾ ಠಾಣೆಯ ಆರಂಭಕ್ಕೂ ಮುನ್ನವೇ ಹಿರೀಕಾಟಿ ಬಳಿಯ ಕ್ರಷರ್‌ಗೆ ಕ್ವಾರಿಯಿಂದ ಕಚ್ಚಾ ವಸ್ತುವಿನ ರಾಯಲ್ಟಿಯ ಚೀಟಿ ಇಲ್ಲದೆ ಸದ್ದಿಲ್ಲದೆ ಹೋಗುತ್ತದೆ. ಇನ್ನೂ ಕೆಲ ಕ್ರಷರ್‌ ಹಾಗೂ ಕ್ವಾರಿ ಮಾಲೀಕರು ಖನಿಜ ತನಿಖಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಹೋಂ ಗಾರ್ಡ್‌ಗಳ ಕೈ ಬೆಚ್ಚಗೆ ಮಾಡಿದರೆ ಟಿಪ್ಪರ್‌ ನಿಲ್ಲದೆ ಕ್ವಾರಿಯ ಕಲ್ಲು ಹಾಗೂ ಕ್ರಷರ್‌ನ ಉತ್ಪನ್ನಗಳು ಮೈಸೂರಿನತ್ತ ಎಂಡಿಪಿ ವಂಚಿಸಿ ತೆರಳುತ್ತಿವೆ.

ಶಾಲಾ ಆವರಣದಲ್ಲಿ ಸ್ನಾನಗೃಹ, ಶೌಚಾಲಯ ನಿರ್ಮಾಣಕ್ಕೆ ಚಿಂತನೆ: ಚಾಮರಾಜನಗರ ನಗರಸಭೆ ನಡೆಗೆ ಭಾರೀ ವಿರೋಧ..!

ನೆಪಕ್ಕೆ ತಪಾಸಣೆ

ಹಿರೀಕಾಟಿ ಬಳಿಯ ಖನಿಜ ತನಿಖಾ ಠಾಣೆಯ ಮುಂದೆಯೇ ಓವರ್‌ ಲೋಡ್‌ ತುಂಬಿದ ಟಿಪ್ಪರ್‌ಗಳು ಎಂಡಿಪಿ ಹಾಗೂ ರಾಯಲ್ಟಿ ಚೀಟಿ ಇಲ್ಲದೆ ತೆರಳುವುದನ್ನು ನಿತ್ಯ ನೋಡುತ್ತಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯಾಗಿದೆ.
ಕೆಲ ಕ್ರಷರ್‌ ಮಾಲೀಕರು ಖನಿಜ ತನಿಖಾ ಠಾಣೆಯ ಸಿಬ್ಬಂದಿಗೆ ಲಂಚ ನೀಡುವ ಆಸೆ ತೋರಿಸಿ ಟಿಪ್ಪರ್‌ಗಳಿಗೆ ಎಂಡಿಪಿ/ರಾಯಲ್ಟಿ ಹಾಗೂ ಜಿಎಸ್‌ಟಿ ಚೀಟಿ ಇಲ್ಲದೆ ರಾಜಾ ರೋಷವಾಗಿ ತೆರಳುತ್ತಿವೆ ಎಂದು ಹಿರೀಕಾಟಿ ಗ್ರಾಮದ ಯುವಕರು ಹೇಳಿದ್ದಾರೆ.

ತಪಾಸಣೆ ಕೇಂದ್ರವಾಗಿಲ್ಲ

ಹಿರೀಕಾಟಿ ಬಳಿಯ ಖನಿಜ ತನಿಖಾ ಠಾಣೆ ತಪಾಸಣೆಯ ಕೇಂದ್ರವಾಗಿ ಉಳಿದಿಲ್ಲ. ಬಾಯಿ ಉಳ್ಳವರಿಗೆ ಕಾಲ ಎಂಬ ಗಾದೆಯಂತೆ ಕೆಲ ಕ್ರಷರ್‌ ಮಾಲೀಕರು ತಪಾಸಣೆ ಕೇಂದ್ರವಿದೆ, ನಿಯಮ ಪಾಲಿಸಬೇಕು ಎಂಬ ಕನಿಷ್ಠ ಜ್ಞಾನ ಇಲ್ಲದವರಂತೆ ರಾಯಲ್ಟಿ/ಎಂಡಿಪಿ ಹಾಗೂ ಜಿಎಸ್‌ಟಿ ವಂಚಿಸಿ ಹಣ ಸಂಪಾದಿಸುವುದೇ ಕಸುಬು ಮಾಡಿಕೊಂಡಿದ್ದಾರೆ ಎಂದು ರೈತಸಂಘದ ಜಿಲ್ಲಾ ಉಪಾಧ್ಯಕ್ಷರೂ ಆದ ಗ್ರಾಪಂ ಅಧ್ಯಕ್ಷ ಶಿವಪುರ ಮಹದೇವಪ್ಪ ಆರೋಪಿಸಿದ್ದಾರೆ.

ಹಿರೀಕಾಟಿ ಬಳಿ ಇರುವ ಖನಿಜ ತನಿಖಾ ಠಾಣೆ ಮುಂದೆ ಬಂದಾಗ ಟಿಪ್ಪರ್‌ ನಿಲ್ಲಿಸುತ್ತಿಲ್ಲ. ನಿಂತರೂ ಎಂಡಿಪಿ/ರಾಯಲ್ಟಿ ಹಾಗೂ ಜಿಎಸ್‌ಟಿ ಯಾವುದು ಎಂದು ಟಿಪ್ಪರ್‌ ಚಾಲಕನ ಪ್ರಶ್ನಿಸಲು ಹೋಂ ಗಾರ್ಡ್‌ನಿಂದ ಸಾದ್ಯವೇ ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.

ತಾತನ ಅಂತ್ಯಕ್ರಿಯೆಗೆ ಹೊರಟಿದ್ದ ಮೊಮ್ಮಗ ಬೈಕ್ ಅಪಘಾತದಲ್ಲಿ ದುರ್ಮರಣ ಇದೆಂಥ ದುರ್ವಿಧಿ!

ಇನ್ನೂ ಹಿರೀಕಾಟಿ ಬಳಿಯ ಕ್ರಷರ್‌ಗೆ ಬೇಗೂರು ಸುತ್ತ ಮುತ್ತಲಿನ ಕ್ವಾರಿಯಿಂದ ಹೋಗುವ ಟಿಪ್ಪರ್‌ಗಳಲ್ಲಿ ಬಹುತೇಕರು ರಾಯಲ್ಟಿ ಚೀಟಿ ಹಾಕುವುದಿಲ್ಲ. ರಾಯಲ್ಟಿ ಕಟ್ಟದೆ ಕದ್ದು ಸಾಗಿಸುವ ದಂಧೆಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಲ್ಲಿಸಲು ಆಗದೆ ನಿತ್ಯ ಲಕ್ಷಾಂತರ ರು. ರಾಜಧನ ಸೋರಿಕೆ ಆಗುತ್ತಿದೆ ಎಂದಿದ್ದಾರೆ.

ರಾಯ್ಟಲಿ/ಎಂಡಿಪಿ ಹಾಗೂ ಜಿಎಸ್‌ಟಿ ವಂಚಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿರುವ ಕ್ವಾರಿ ಹಾಗೂ ಕ್ರಷರ್‌ ಮಾಲೀಕರ ಮೇಲೆ ಜಿಲ್ಲಾಡಳಿತ ಕ್ರಮ ಜರುಗಿಸಬೇಕು. ಖನಿಜ ತನಿಖಾ ಠಾಣೆ ಆರಂಭಿಸಿದ ಮಾತ್ರಕ್ಕೆ ರಾಯಲ್ಟಿ/ಎಂಡಿಪಿ ಹಾಗೂ ಜಿಎಸ್‌ಟಿ ಸರ್ಕಾರಕ್ಕೆ ಬರುತ್ತಾ! ಚೆಕ್‌ಪೋಸ್ಟ್‌ ಟಾಸ್ಕ್‌ ಪೋರ್ಸ್‌ ಅಧಿಕಾರಿ/ಸಿಬ್ಬಂದಿ ಇಲ್ಲ, ಲೈಟ್‌ ಇಲ್ಲ, ಸಿಸಿ ಕ್ಯಾಮೆರಾ ಹಾಕಿಲ್ಲ. ಇದು ಚೆಕ್‌ಪೋಸ್ಟ್‌ ಅನ್ನೋಕೆ ಲಾಯಕ್ಕ ಎಂದು ಜಿಲ್ಲಾಡಳಿತ ಉತ್ತರಿಸಲಿ ಎಂದು ಗ್ರಾಪಂ ಅಧ್ಯಕ್ಷ ಹಾಗೂ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮಹದೇವಪ್ಪ ಶಿವಪುರ ತಿಳಿಸಿದ್ದಾರೆ.  

Follow Us:
Download App:
  • android
  • ios