KMF milk price hike Karnataka ಮಂಗಳವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೆಎಂಎಫ್ ಹಾಲಿನ ದರ ಹೆಚ್ಚಳದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ. ಇದರ ಜೊತೆಗೆ ಬೆಂಗಳೂರಿನಲ್ಲಿ 5 ಪ್ರತ್ಯೇಕ ಪೊಲೀಸ್ ಕಮಿಷನರೇಟ್ ಸ್ಥಾಪನೆ, ಸೋಲಾರ್ ಅಳವಡಿಕೆಗೆ ಶೇ.50 ಸಬ್ಸಿಡಿ ನೀಡುವ ಕುರಿತು ಚರ್ಚೆ.
ಬೆಂಗಳೂರು (ಅ.6) ಕೆಎಂಎಫ್ (ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ) ಹಾಗೂ ವಿವಿಧ ಹಾಲು ಒಕ್ಕೂಟಗಳ ಬೇಡಿಕೆ ಹಿನ್ನೆಲೆಯಲ್ಲಿ ಮಂಗಳವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಹಾಲಿನ ಉತ್ಪಾದನಾ ವೆಚ್ಚ, ಪಶು ಆಹಾರ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಕಾರಣ ಪ್ರತಿ ಲೀಟರ್‌ಗೆ ₹8 ರಿಂದ ₹10 ಹೆಚ್ಚಳ ಮಾಡಬೇಕು. ಇದರಲ್ಲಿ ₹2 ಲಾಭಾಂಶವನ್ನು ಒಕ್ಕೂಟಗಳಿಗೆ ನೀಡಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಮಂಗಳವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದ್ದು, ಪ್ರತಿ ಲೀಟರ್‌ಗೆ ಕನಿಷ್ಠ ₹5 ರಿಂದ ₹6 ಹೆಚ್ಚಳ ಮಾಡಬೇಕೆಂಬ ಚಿಂತನೆಯಲ್ಲಿ ಸರ್ಕಾರವಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ದರ ಹೆಚ್ಚಳ ಪ್ರಮಾಣ ಅಂತಿಮವಾಗಲಿದೆ.
5 ಪ್ರತ್ಯೇಕ ಕಮಿಷನರೇಟ್?:
ಮಂಗಳವಾರದ ಸಚಿವ ಸಂಪುಟ ಸಭೆಯಲ್ಲಿ ಐದು ಪ್ರತ್ಯೇಕ ಪೊಲೀಸ್ ಕಮಿಷನರೇಟ್ ಸ್ಥಾಪನೆ ಬಗ್ಗೆಯೂ ಚರ್ಚೆಯಾಗಲಿದೆ. 3 ರಿಂದ 5 ಕಮಿಷನರೇಟ್ ಸ್ಥಾಪನೆಗೆ ಸಭೆಯಲ್ಲಿ ಚರ್ಚೆಯಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 5 ಕಮಿಷನರೇಟ್ ಮಾಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ, ಐದೂ ಆಗಬಹುದು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿಗೆ ಹಿಂದೆ 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಕಮಿಷನರೇಟ್ ಮಾಡಲಾಗಿತ್ತು. ಈಗ ಅದನ್ನು ವಿಂಗಡಿಸಿ, ಅಗತ್ಯ ಇರುವ ಕಡೆ ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿ, ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ನೋಡಿಕೊಳ್ಳಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡುವ ಸಾಧ್ಯತೆಯಿದೆ.
ಸೋಲಾರ್ ಅಳವಡಿಕೆಗೆ ಶೇ.50 ಸಬ್ಸಿಡಿ:
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಪ್ರತಿ ದಿನಕ್ಕೆ 20,000 ಮೆ.ವ್ಯಾಟ್ ದಾಟಿದ್ದು, ಅಗತ್ಯಕ್ಕೆ ತಕ್ಕಂತೆ ಪೂರೈಕೆ ಇಲ್ಲದಂತಾಗಿದೆ. ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸರ್ಕಾರದ ಮಟ್ಟದಲ್ಲಿ ಏಕಾಏಕಿ ಮಾಡಲು ಸಾದ್ಯವಿಲ್ಲ. ಹೀಗಾಗಿ, ವಿದ್ಯುತ್ ಸಮಸ್ಯೆ ನಿವಾರಣೆಗೆ ಸೋಲಾರ್ ಅಳವಡಿಸಲು ಶೇ.50ರಷ್ಟು ಸಬ್ಸಿಡಿ ನೀಡುವ ಬಗ್ಗೆ ಮಂಗಳವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಯಿದೆ.
ಇದಲ್ಲದೆ ಬರ ಪರಿಹಾರಕ್ಕೆ ಘೋಷಿಸಿರುವ ₹2,500 ಇನ್‌ಪುಟ್ ಸಬ್ಸಿಡಿ ಸೇರಿದಂತೆ ವಿವಿಧ ಪರಿಹಾರ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.


