ಶ್ರೀಕಾಂತ ಎನ್‌.ಗೌಡಸಂದ್ರ

ಬೆಂಗಳೂರು(ಮೇ.16): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಗಿದ್ದ ಕೊರೋನಾ ಎರಡನೇ ಅಲೆಯ ಸೋಂಕು ಜಿಲ್ಲೆಗಳಿಗೆ ವೇಗವಾಗಿ ಹರಡುತ್ತಿದ್ದು, ಲಾಕ್‌ಡೌನ್‌ ವಿಧಿಸಿದ ಬಳಿಕವಂತೂ ಆತಂಕಕಾರಿ ವೇಗದಲ್ಲಿ ಹರಡುತ್ತಿದೆ.

ಕಳೆದ ಏ.28ರಂದು ರಾಜ್ಯದ ಒಟ್ಟು ಸೋಂಕಿನಲ್ಲಿ ಶೇ.57.86 ಪ್ರಕರಣ ಬೆಂಗಳೂರಿನಲ್ಲಿಯೇ ವರದಿಯಾಗಿದ್ದರೆ, ಇತರೆ ಜಿಲ್ಲೆಗಳಿಂದ ಶೇ.42.14ರಷ್ಟುಮಾತ್ರ ವರದಿಯಾಗಿತ್ತು. ಇದೀಗ ಮೇ 14ರಂದು ವರದಿಯಾದ ಒಟ್ಟು ಪ್ರಕರಣಗಳ ಪೈಕಿ ಶೇ.65.74 ಸೋಂಕು ಇತರೆ ಜಿಲ್ಲೆಗಳಿಂದ ವರದಿಯಾಗಿದ್ದು, ಬೆಂಗಳೂರಿನ ಸೋಂಕಿನ ಪಾಲು ಶೇ.34.26ಕ್ಕೆ ಕುಸಿದಿದೆ. ಅಲ್ಲದೆ ಏ.28ರಿಂದ ಮೇ 14ಕ್ಕೆ ಹೋಲಿಸಿದರೆ 25 ಜಿಲ್ಲೆಗಳಲ್ಲಿ ದಿನದ ಸೋಂಕು ಪ್ರಕರಣ ಶೇ.23.6ರಷ್ಟುಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇದು ಲಾಕ್‌ಡೌನ್‌ ಬಳಿಕ ಜಿಲ್ಲೆಗಳಿಗೆ ಸೋಂಕು ಹರಡುತ್ತಿರುವುದನ್ನು ಖಚಿತಪಡಿಸಿದ್ದು, ಜಿಲ್ಲೆಗಳಲ್ಲಿರುವ ವೈದ್ಯಕೀಯ ವ್ಯವಸ್ಥೆ ಕೊರತೆಯಿಂದ ಮುಂದಿನ ದಿನಗಳಲ್ಲಿ ರಾಜ್ಯ ಮತ್ತಷ್ಟುಸವಾಲುಗಳಿಗೆ ಸಿದ್ಧಬೇಕಾಗಿರುವ ಎಚ್ಚರಿಕೆ ರವಾನಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಅಟ್ಟಹಾಸ ಪ್ರಾರಂಭವಾಗುತ್ತಿದ್ದಂತೆ, ಏ.28ರಿಂದ ರಾಜ್ಯಾದ್ಯಂತ ಜನತಾ ಕಫ್ರ್ಯೂ ವಿಧಿಸಲಾಯಿತು. ನಂತರ ಮೇ 10ರಿಂದ ಮೇ 24ರವರೆಗೆ ಸೆಮಿ ಲಾಕ್‌ಡೌನ್‌ ಚಾಲ್ತಿಯಲ್ಲಿದೆ. ಏ.28ರಂದು ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದ ಬಹುತೇಕರು ಸ್ವಂತ ಜಿಲ್ಲೆಗಳಿಗೆ ಗುಳೆ ಹೋದರು. ವಲಸೆ ಹೋಗುವಾಗ ಉಂಟಾಗಿರುವ ಅವಸ್ಥೆ, ಜಿಲ್ಲೆಗಳಲ್ಲಿ ಹೊಸದಾಗಿ ಬಂದವರ ಮೇಲೆ ನಿಗಾ ಕೊರತೆ, ಸಾರ್ವಜನಿಕರು ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿ ಹಳ್ಳಿಗಳಲ್ಲಿ ಬೆರೆತ ರೀತಿಯಿಂದಾಗಿ ಗ್ರಾಮೀಣ ಭಾಗದಲ್ಲಿ ಸೋಂಕು ತೀವ್ರಗೊಂಡಿದೆ. ಗ್ರಾಮೀಣ ಭಾಗದಲ್ಲಿ ಪರೀಕ್ಷೆ ಹಾಗೂ ಆಸ್ಪತ್ರೆ ಬಗ್ಗೆ ಜನರಿಗೆ ಇರುವ ಭಯವೂ ಸಹ ಸೋಂಕು ಹರಡುವಿಕೆಗೆ ಪ್ರಮುಖ ಕಾರಣ ಎಂದು ಬೆಂಗಳೂರು ನಗರ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅನ್ಸರ್‌ ಅಹಮದ್‌ ಹೇಳುತ್ತಾರೆ.

"

ಜಿಲ್ಲೆಗಳಲ್ಲಿ ಶೇ.800ರವರೆಗೂ ಸೋಂಕು ಹೆಚ್ಚಳ:

ಏ.28ರಂದು ರಾಜ್ಯದ ಇತರೆ ಜಿಲ್ಲೆಗಳಲ್ಲಿ ವರದಿಯಾಗಿದ್ದ ಪ್ರಕರಣ ಹಾಗೂ ಮೇ 14ರ ದಿನದ ಪ್ರಕರಣ ಹೋಲಿಸಿದರೆ ಜಿಲ್ಲೆಗಳಲ್ಲಿ ಸೋಂಕು ನೂರಾರು ಪಟ್ಟು ಹೆಚ್ಚಾಗಿದೆ. ಹಾವೇರಿ ಜಿಲ್ಲೆಯಲ್ಲಿ ಬರೋಬ್ಬರಿ ಶೇ.811ರಷ್ಟುಸೋಂಕು ಹೆಚ್ಚಾಗಿದೆ. ಹಾವೇರಿಯಲ್ಲಿ ಏ.28ರಂದು 36 ಪ್ರಕರಣ ವರದಿಯಾಗಿದ್ದರೆ ಮೇ 14ರಂದು 292 ಪ್ರಕರಣ ವರದಿಯಾಗಿದೆ. ಇನ್ನು ಗದಗದಲ್ಲಿ 129ರಷ್ಟಿದ್ದ ಸೋಂಕು ಮೇ 14ರ ವೇಳೆಗೆ 591ಕ್ಕೆ (ಶೇ.458ರಷ್ಟುಹೆಚ್ಚಳ)ಏರಿಕೆಯಾಗಿದೆ.

ಬೆಳಗಾವಿಯಲ್ಲಿ 360ರಷ್ಟಿದ್ದ ನಿತ್ಯದ ಸೋಂಕು ಶೇ.442ರಷ್ಟುಹೆಚ್ಚಾಗಿದೆ. ಮೇ 14ರಂದು 1,592 ಪ್ರಕರಣ ವರದಿಯಾಗಿದೆ. ಶಿವಮೊಗ್ಗ ಶೇ.313.81ರಷ್ಟುಹಾಗೂ ಚಿತ್ರದುರ್ಗದಲ್ಲೂ ಶೇ.285ರಷ್ಟುಹೆಚ್ಚಳ ಕಂಡುಬಂದಿದ್ದು, 110ರಷ್ಟಿದ್ದ ದಿನದ ಸೋಂಕು 314ಕ್ಕೆ ತಲುಪಿದೆ.

25 ಜಿಲ್ಲೆಗಳಲ್ಲಿ ಹೆಚ್ಚಳ, ಜಿಲ್ಲಾವಾರು ವಿವರ:

ಏ.28 ಹಾಗೂ ಮೇ 14ರ ದಿನದ ಸೋಂಕಿಗೆ ಹೋಲಿಸಿದರೆ 25 ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿದೆ. ಬಾಗಲಕೋಟೆಯಲ್ಲಿ ಶೇ.232, ಬಳ್ಳಾರಿ ಶೇ.218, ಬೆಳಗಾವಿ ಶೇ.442, ಚಾಮರಾಜನಗರ ಶೇ.168, ಚಿಕ್ಕಮಗಳೂರು ಶೇ.281, ಚಿತ್ರದುರ್ಗ ಶೇ.285, ದಕ್ಷಿಣ ಕನ್ನಡ ಶೇ.182.98, ದಾವಣಗೆರೆ ಶೇ. 296.42, ಧಾರವಾಡ ಶೇ.126.75, ಗದಗ ಶೇ.458.13, ಹಾಸನ ಶೇ.133.76, ಹಾವೇರಿ ಶೇ.811, ಕಲಬುರಗಿ ಶೇ.103, ಕೊಡಗು ಶೇ.138, ಕೊಪ್ಪಳ ಶೇ.111.48, ಮಂಡ್ಯ ಶೇ.148, ಮೈಸೂರು ಶೇ.133, ರಾಯಚೂರು ಶೇ.208, ರಾಮನಗರ ಶೇ.279.87, ಶಿವಮೊಗ್ಗ ಶೇ.313.81, ತುಮಕೂರು ಶೇ.227.25, ಉಡುಪಿ - ಶೇ.183.58, ಉತ್ತರ ಕನ್ನಡ ಶೇ.261, ವಿಜಯಪುರ ಶೇ.112, ಯಾದಗಿರಿ ಶೇ.231ರಷ್ಟುಹೆಚ್ಚಳ ಕಂಡುಬಂದಿದೆ.

ಬೆಂಗಳೂರು ನಗರದಲ್ಲಿ ಶೇ.36ರಷ್ಟುಪ್ರಕರಣ ಇಳಿಕೆ:

ಏ. 28 ರಂದು ವರದಿಯಾಗಿದ್ದ ಒಟ್ಟು 39047 ಪ್ರಕರಣಗಳಲ್ಲಿ ಶೇ.57.86 ರಂತೆ 22,596 ಸಾವಿರ ಪ್ರಕರಣ ರಾಜಧಾನಿಯಲ್ಲೇ ವರದಿಯಾಗಿತ್ತು. ಮೇ 14 ರಂದು ಒಟ್ಟು 41,779 ಪ್ರಕರಣ ವರದಿಯಾಗಿದ್ದರೆ ಬೆಂಗಳೂರು ನಗರದ ಪ್ರಕರಣ ಶೇ.34.26 ರಂತೆ 14,316ಕ್ಕೆ ಇಳಿಕೆಯಾಗಿದೆ. ಏ.28 ಹಾಗೂ ಮೇ 14ಕ್ಕೆ ಹೋಲಿಸಿದರೆ ಬೆಂಗಳೂರಿನ ಪ್ರಕರಣ ಶೇ.36 ರಷ್ಟುಕಡಿಮೆಯಾಗಿದೆ.

ಇದರ ಜತೆಗೆ ಮೇ 14ರಂದು , ಕೋಲಾರ ಶೇ.75, ಬೆಂಗಳೂರು ಗ್ರಾಮಾಂತರ ಶೇ. 4, ಬೀದರ್‌ ಶೇ.18, ಚಿಕ್ಕಬಳ್ಳಾಪುರ ಶೇ.1.03 ರಷ್ಟುಇಳಿಕೆಯಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona