ಬೆಂಗಳೂರು(ಸೆ.06): ಕೊರೋನಾ ಭೀತಿಯ ನಡುವೆಯೇ ನಮ್ಮ ಮೆಟ್ರೋ ರೈಲು ನಾಳೆ(ಸೆ.7) ಸಂಚಾರ ಆರಂಭಿಸಲಿದ್ದು, ಈಗಾಗಲೇ ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ಮಾ.22ರಂದು ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಿದ ನಂತರ ಐದು ತಿಂಗಳ ಬಳಿಕ ಸೋಮವಾರ ಸಂಚಾರ ಆರಂಭಿಸಲಿದೆ. ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಕೇವಲ ಒಂದು ಮಾರ್ಗ(ನೇರಳೆ ಮಾರ್ಗ)ದಲ್ಲಿ ಮಾತ್ರ ಬೆಳಗ್ಗೆ 8ಗಂಟೆಗೆ ಬೈಯ್ಯಪ್ಪನಹಳ್ಳಿ- ಮೈಸೂರು ರಸ್ತೆ ಮತ್ತು ಮೈಸೂರು ರಸ್ತೆ- ಬೈಯ್ಯಪ್ಪನಹಳ್ಳಿ ನಡುವೆ ರೈಲು ಸಂಚಾರ ಪ್ರಾರಂಭವಾಗಲಿದೆ. ಬೆಳಗ್ಗೆ 8ರಿಂದ 11ರವರೆಗೆ ಮತ್ತು ಸಂಜೆ 4.30ರಿಂದ 7.30ರವರೆಗೆ ತಲಾ 5 ನಿಮಿಷಗಳ ಅಂತರದಲ್ಲಿ ರೈಲುಗಳು ಕಾರ್ಯನಿರ್ವಹಿಸಲಿವೆ.

ಸೆ.7ರಿಂದ 10ರವರೆಗೆ ನೇರಳೆ ಮಾರ್ಗದಲ್ಲಿ ಮಾತ್ರ ಮೆಟ್ರೋ ರೈಲು ಸಂಚರಿಸಲಿದ್ದು, ಸೆ.9ಮತ್ತು 10ರಂದು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಲಿದೆ. ಬಳಿಕ ಎರಡೂ ಮಾರ್ಗದಲ್ಲಿ ಸಂಚಾರ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಟೋಕನ್‌ ಮಾರಾಟಕ್ಕೆ ಅನುಮತಿ ಇಲ್ಲದ ಕಾರಣ ಸ್ಮಾರ್ಟ್‌ ಕಾರ್ಡ್‌ಗಳಿಂದ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆರು ಬೋಗಿಗಳ ಒಂದು ಮೆಟ್ರೋ ರೈಲಿನಲ್ಲಿ ಕೇವಲ 400 ಜನರು ಏಕಕಾಲದಲ್ಲಿ ಪ್ರಯಾಣಿಸಬಹುದಾಗಿದೆ.

ಕಂಟೈನ್‌ಮೆಂಟ್‌ ಝೋನ್‌ನಲ್ಲಿ ಮೆಟ್ರೋ ರೈಲು ನಿಲ್ಲಲ್ಲ

ನಮ್ಮ ಮೆಟ್ರೋ ಆ್ಯಪ್‌ ಬಿಡುಗಡೆ:

ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್‌ ‘ನಮ್ಮ ಮೆಟ್ರೋ’ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಶನಿವಾರ ಸಂಜೆ ಬಿಡುಗಡೆ ಮಾಡಿದ್ದು ಭಾನುವಾರ (ಸೆ.6)ದಿಂದ ಸಾರ್ವಜನಿಕರ ಬಳಕೆಗೆ ಲಭ್ಯವಿದೆ. ಪ್ಲೇಸ್ಟೋರ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಮೊಬೈಲ್‌ ನಂಬರ್‌ ನೋಂದಣಿ ಮಾಡಿದರೆ ಮೊಬೈಲ್‌ಗೆ ಓಟಿಪಿ ಬರಲಿದೆ. ಈ ಆ್ಯಪ್‌ನಲ್ಲಿ ಐದು ಸ್ಮಾರ್ಟ್‌ ಕಾರ್ಡ್‌ಗಳನ್ನು ಸೇವ್‌ ಮಾಡಿ ಆನ್‌ಲೈನ್‌ ಮೂಲಕವೇ ಟಾಪ್‌ಅಪ್‌ ಮಾಡಲು ಅವಕಾಶವಿದೆ.

ಸ್ಮಾರ್ಟ್‌ ಕಾರ್ಡ್‌ಗೆ ಒಂದು ಬಾರಿಗೆ .2500 ಟಾಪ್‌ಅಪ್‌ ಮಾಡಿಕೊಳ್ಳಬಹುದು. ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ರೀಚಾಜ್‌ರ್‍ ಮಾಡಿದ ಒಂದು ಗಂಟೆಯ ನಂತರವೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರು ತೆರಳಬೇಕು. ಏಕೆಂದರೆ ರೀಚಾಜ್‌ರ್‍ ಆಗಲು ಸ್ವಲ್ಪ ಸಮಯಾವಕಾಶ ಬೇಕಿದೆ. ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಟೋಕನ್‌ ಮಾರಾಟ ನಿಷೇಧಿಸಲಾಗಿದ್ದು ಸ್ಮಾರ್ಟ್‌ ಕಾರ್ಡ್‌ ಇದ್ದವರು ಮಾತ್ರ ಪ್ರಯಾಣಿಸಬಹುದು. ಸ್ಮಾರ್ಟ್‌ ಕಾರ್ಡ್‌ ರೀಚಾಜ್‌ರ್‍ ಮಾಡಿದ 7 ದಿನಗಳ ಒಳಗೆ ಮೊದಲು ಪ್ರಯಾಣ ಮಾಡಬೇಕಿದೆ.

ಆ್ಯಪ್‌ನಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರದ ಸಮಯ, ಎಷ್ಟುನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ? ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಪ್ರಯಾಣಿಸಲು ನಿಗದಿಪಡಿಸಲಾದ ಶುಲ್ಕ ಎಂಬಿತ್ಯಾದಿ ಮಾಹಿತಿಗಳು ಆ್ಯಪ್‌ನಲ್ಲಿ ಲಭ್ಯವಾಗಲಿದೆ. ನಂತರ ಹಂತ ಹಂತವಾಗಿ ಇತರ ಅಪ್ಲಿಕೇಷನ್‌ಗಳನ್ನು ಆ್ಯಪ್‌ನಲ್ಲಿ ಅಳವಡಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಉಪ ಪ್ರಧಾನ ವ್ಯವಸ್ಥಾಪಕ (ಐಟಿ) ರಂಗನಾಥ್‌ ದೇಶಪಾಂಡೆ ‘ಕನ್ನಡಪ್ರಭ’ಕ್ಕೆ ತಿಳಿಸಿದರು.