ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ತ್ವರಿತ ಸಂದೇಶ ರವಾನಿಸುವ ಹೊಸ ವ್ಯವಸ್ಥೆಯನ್ನು ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗವು ಜಾರಿಗೊಳಿಸಿದ್ದು, ಇನ್ಮುಂದೆ ಕಾನೂನು ಉಲ್ಲಂಘಿಸಿದರೂ ತಪ್ಪು ಮಾಡಿಲ್ಲವೆಂದು ವಾದಿಸುವವರಿಗೆ ಪುರಾವೆಯನ್ನು ಪೊಲೀಸರು ನೀಡಲಿದ್ದಾರೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಫೆ.26): ಸಿಗ್ನಲ್ ಜಂಪ್, ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಾಲನೆ ಹಾಗೂ ಹೆಲ್ಮೆಟ್ ಇಲ್ಲದೆ ಸವಾರಿ ಹೀಗೆ ಸಂಚಾರ ನಿಯಮ ಉಲ್ಲಂಘಿಸಿದ ಎರಡೇ ನಿಮಿಷದಲ್ಲಿ ನಾಗರಿಕರ ಮೊಬೈಲ್‌ಗೆ ದಂಡ ಪಾವತಿಸುವಂತೆ ಸಂದೇಶ ಬರಲಿದೆ. ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ತ್ವರಿತ ಸಂದೇಶ ರವಾನಿಸುವ ಹೊಸ ವ್ಯವಸ್ಥೆಯನ್ನು ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗವು ಜಾರಿಗೊಳಿಸಿದ್ದು, ಇನ್ಮುಂದೆ ಕಾನೂನು ಉಲ್ಲಂಘಿಸಿದರೂ ತಪ್ಪು ಮಾಡಿಲ್ಲವೆಂದು ವಾದಿಸುವವರಿಗೆ ಪುರಾವೆಯನ್ನು ಪೊಲೀಸರು ನೀಡಲಿದ್ದಾರೆ.
ಇದಕ್ಕಾಗಿ ಮಹಾನಗರ ಪಾಲಿಕೆಗಳು ಹಾಗೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಕೋಟ್ಯಂತರ ರು. ವೆಚ್ಚದಲ್ಲಿ ಸಂಚಾರ ಪೊಲೀಸರು ಅಳವಡಿಸಲಿದ್ದಾರೆ. ಆ ಕ್ಯಾಮೆರಾಗಳು ಸೆರೆಹಿಡಿದ ಪೋಟೋಗಳನ್ನಾಧರಿಸಿ ಎರಡೇ ನಿಮಿಷದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಸಂದೇಶ ಕಳುಹಿಸಲಿದ್ದಾರೆ.
ಬೆಂಗಳೂರು: ಸ್ಕೂಟರ್ ಕೀ ಕಿತ್ತುಕೊಂಡ ಟ್ರಾಫಿಕ್ ಪೊಲೀಸ್ ಕೈ ಕಚ್ಚಿದ ವಾಹನ ಸವಾರ
‘ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಪ್ರಕರಣಗಳು ಬಾಕಿ ಉಳಿದಿವೆ. ಹೀಗಾಗಿ ಜನರಿಗೆ ತಪ್ಪು ಮಾಡಿದ ಕೂಡಲೇ ಮಾಹಿತಿ ನೀಡಿದರೆ ಪ್ರಕರಣಗಳು ಕೂಡ ಶೀಘ್ರ ವಿಲೇವಾರಿ ಆಗುತ್ತವೆ. ಈ ಹಿನ್ನೆಲೆಯಲ್ಲಿ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟ್ಂ (ಐಟಿಎಂಸ್) ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ ಎರಡೇ ನಿಮಿಷದಲ್ಲಿ ಜನರಿಗೆ ಎಸ್‌ಎಂಎಸ್ ಸಂದೇಶ ರವಾನೆಯಾಗಲಿದೆ ಎಂದು ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು. ಈ ಸಂದೇಶದಲ್ಲಿ ಲಿಂಕ್ ಇರುತ್ತದೆ. ಅದರಲ್ಲಿ ಯಾವ ರೀತಿಯ ಸಂಚಾರ ನಿಯಮ ಉಲ್ಲಂಘನೆಯಾಗಿದೆ ಎಂಬ ಫೋಟೋ, ಮಾಹಿತಿ ಇರುತ್ತದೆ. ಅಲ್ಲೇ ದಂಡ ಪಾವತಿಸಬಹುದು ಎಂದು ಎಡಿಜಿಪಿ ಹೇಳಿದರು.
ನೊಂದಣಿ ಸಂಖ್ಯೆ ಆಧರಿಸಿ ಕ್ರಮ
ವಾಹನಗಳ ನೋಂದಣಿ ಸಂಖ್ಯೆ ಆಧರಿಸಿ ಸಂದೇಶ ರವಾನೆಯಾಗಲಿದೆ. ನೋಂದಣಿ ವೇಳೆ ನೀಡಿರುವ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ. ವಾಹನ ಮಾರಾಟ ಮಾಡಿದ್ದರೂ ಸಹ ಸಾರಿಗೆ ಇಲಾಖೆಯಲ್ಲಿ ಖರೀದಿದಾರನ ಮೊಬೈಲ್ ಸಂಖ್ಯೆ ನಮೂದಾಗಿದ್ದರೆ ಆತನಿಗೆ ಸಂದೇಶ ರವಾನೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಲ್ಲೆಲ್ಲಿ ಜಾರಿ?
ಮೈಸೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ತುಮಕೂರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಐಟಿಎಂಸ್ ವ್ಯವಸ್ಥೆಯಡಿ ಸಂಚಾರ ನಿಯಮ ಉಲ್ಲಂಘಿಸಿದರೆ ಎಸ್ಎಂಎಸ್ ಸಂದೇಶ ಕಳುಹಿಸಲಾಗುತ್ತದೆ.
ಅಲ್ಲದೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಹ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಿದೆ. ಆ ಹೆದ್ದಾರಿಯಲ್ಲಿ ಸಹ ಸಂಚಾರ ನಿಯಮ ಉಲ್ಲಂಘಿಸಿದರೆ ಸಂದೇಶ ಕಳುಹಿಸಲಾಗುತ್ತದೆ. ಮೈಸೂರಿನಲ್ಲಿ 9 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ಕ್ಯಾಮೆರಾಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇನ್ನುಳಿದ ನಗರಗಳಿಗೆ ಸಹ ಉತ್ಕೃಷ್ಟ ಮಟ್ಟದ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಎಂದು ಎಡಿಜಿಪಿ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಕಷ್ಟ:
ವಾಹನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಕ್ಷಣಾರ್ಧದಲ್ಲಿ ಸಂದೇಶ ಕಳುಹಿಸಲು ತಡವಾಗುತ್ತಿದೆ ಎಂದು ಪೂರ್ವ ವಿಭಾಗದ (ಸಂಚಾರ) ಡಿಸಿಪಿ ಕುಲದೀಪ್ ಕುಮಾರ್.ಆರ್. ಜೈನ್ ತಿಳಿಸಿದ್ದಾರೆ.
ಟ್ರಾಫಿಕ್ ಫೈನ್ ಬಾಕಿ ಇದರೆ ಮನೆಗೆ ಬರ್ತಾರೆ ಪೊಲೀಸರು: ಏನಿದು ಹೊಸ ರೂಲ್ಸ್?
ಈಗ ವಾಹನಗಳ ಮಾಲಿಕರ ಮೊಬೈಲ್ ಸಂಖ್ಯೆ ಸಂಗ್ರಹಕ್ಕೆ ವಿಮಾ ಕಂಪನಿಗಳ ನೆರವು ಕೋರಿದ್ದೇವೆ. ವಾಹನಗಳನ್ನು ಮಾರಾಟ ಮಾಡಿದರೂ ಪ್ರತಿ ವರ್ಷ ವಿಮೆ ನವೀಕರಣ ಮಾಡಬೇಕಾಗುತ್ತದೆ. ಆಗ ಸದರಿ ವಾಹನದ ಮಾಲಿಕ ನೀಡುವ ಮೊಬೈಲ್ ಸಂಖ್ಯೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವಂತೆ ವಿಮಾ ಕಂಪನಿಗಳಿಗೆ ಕೋರಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ತಕ್ಷಣವೇ ಮಾಹಿತಿ ನೀಡಿದರೆ ಜನರಿಗೂ ತಪ್ಪಿನ ಅರಿವಾಗಲಿದೆ. ಇದರಿಂದ ಆ ತಪ್ಪುಗಳು ಪುನಾವರ್ತನೆಗೆ ಕೂಡ ಕಡಿವಾಣ ಬೀಳಲಿದೆ. ಜನರಲ್ಲಿ ಸಹ ಸಂಚಾರ ಶಿಸ್ತು ಬರಬಹುದು ಎಂದು ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
