ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ವಿರೋಧಿಸಿದ್ದ ಕನ್ನಡಪರ ಹೋರಾಟಗಾರರನ್ನು ಎಂಇಎಸ್ ಮುಖಂಡ ಶುಂಭ ಶಳಕೆ ನಿಂದಿಸಿದ್ದಾರೆ. ಕನ್ನಡ ಮಾತನಾಡಿದ್ದಕ್ಕೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ (ಫೆ.23): ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರಿಂದ ಹಲ್ಲೆ ಮಾಡಿದ್ದನ್ನು ವಿರೋಧಿಸಿದ ಕನ್ನಡಪರ ಹೋರಾಟಗಾರರು ನಾಲಾಯಕ್ ಎಂದು ಎಂಇಎಸ್ ಮುಖಂಡ ಶುಂಭ ಶಳಕೆ ನಾಲಿಗೆ ಹರಿಬಿಟ್ಟು ಮಾತನಾಡಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಮಾತನಾಡಿದ ಬಸ್ ಕಂಡಕ್ಟರ್ ಮಾಡಿ ಹಲ್ಲೆ ಮಾಡಿದ ಮರಾಠಿ ಪುಂಡರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಕನ್ನಡಿಗರು ಆಗ್ರಹಿಸಿದ್ದರು. ಜೊತೆಗೆ, ಚಿತ್ರದುರ್ಗದಲ್ಲಿ ಕನ್ನಡಪರ ಹೋರಾಟಗಾರರು ಮಹಾರಾಷ್ಟ್ರ ಬಸ್ ನಿರ್ವಾಹಕನಿಗೆ (ಕಂಡಕ್ಟರ್‌ಗೆ) ಕಪ್ಪು ಮಸಿ ಬಳಿದು ಕಳುಹಿಸಿದ್ದರು. ಇದನ್ನು ವಿರೋಧಿಸಿ ಮಹಾರಾಷ್ಟ್ರದಲ್ಲಿ ಶಿವಸೇನೆ ಕಾರ್ಯಕರ್ತರು ಕರ್ನಾಟಕ ಸಾರಿಗೆ ಬಸ್ ಅನ್ನು ತಡೆದು ಆಕ್ರೋಶ ಹೊರಹಾಕಿದ್ದರು. ಈ ಎಲ್ಲವನ್ನೂ ನೋಡಿದ ಬೆನ್ನಲ್ಲಿಯೇ ಮರಾಠಿ ಪುಂಡರನ್ನು ಬೆಂಬಲಿಸಿ ಎಂಇಎಸ್ ಮುಖಂಡ ಶಂಭು ಶಳಕೆ ವಿಡಿಯೋ ಮಾಡಿ ಹಂಚಿಕೊಂಡಿದ್ದು, ಇದರಲ್ಲಿ ಕನ್ನಡಪರ ಹೋರಾಟಗಾರರಿಗೆ ನಾಲಾಯಕ್ ಎಂಬ ಪದ ಬಳಕೆ ಮಾಡಿ ನಾಲಿಗೆ ಹರಿಬಿಟ್ಟಿದ್ದಾನೆ.
ಈ ವಿಡಿಯೋದಲ್ಲಿ ಬೆಳಗಾವಿಯ ಮಾರಿಹಾಳ ಗ್ರಾಮದ ಬಳಿ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಪ್ರಯಾಣ ಮಾಡುತ್ತಿದ್ದು, ಎರಡು ಟಿಕೆಟ್ ಪಡೆದಿದ್ದಾರೆ. ಆಗ ನಿರ್ವಾಹಕ ಬಾಲಕಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾನೆ. ಈ ಬಗ್ಗೆ ಅಲ್ಲಿಯ ಸ್ಥಳೀಯರು ಕಂಡಕ್ಟರ್‌ನನ್ನು ಪ್ರಶ್ನೆ ಮಾಡಿದ್ದಾರೆ. ಆಗ ಉದ್ಧಟನದ ಉತ್ತರ ಕೊಟ್ಟ ನಿರ್ವಾಹಕನಿಗೆ ಸ್ಥಳೀಯರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ್ದನ್ನು ನಾವು ಖಂಡಿಸುತ್ತೇವೆ, ಸಮರ್ಥನೆ ಮಾಡಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ತನ್ನ ಕೆಲಸ ಮಾಡಲಿದೆ. ಆದರೆ, ಘಟನೆ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಇತರೆ ಸಂಘಟನೆಗಳು ಬೀದಿಗೆ ಇಳಿದಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ 2 ಕೋಟಿಯ ಅಂಬಾರಿ ಬಸ್‌ಗೆ ಮಸಿ ಬಳಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ!
ಈ ಘಟನೆಯಲ್ಲಿ ಕಂಡಕ್ಟರ್ ತಾನು ಮಾಡಿರೋ ಕೃತ್ಯ ಗೊತ್ತಾಗಬಾರದು ಎಂದು ಪ್ರಕರಣವನ್ನು ತಿರುಚಿದ್ದಾನೆ. ಈ ಮೂಲಕ ಬೆಳಗಾವಿಯ ಶಾಂತಿಗೆ ಭಂಗ ತಂದಿದ್ದಾನೆ. ಮರಾಠಿ ಬರಲ್ಲ ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಸೃಷ್ಟಿ ಮಾಡಿದ್ದಾನೆ. ಸತ್ಯಾಸತ್ಯತೆ ತಿಳಿಯದೇ ಮಹಾರಾಷ್ಟ್ರ ಸಾರಿಗೆ ನೌಕರ ಮೇಲೆ ಕನ್ನಡ ಹೋರಾಟಗಾರರು ಹಲ್ಲೆ ಮಾಡಿದ್ದಾರೆ. ಪೊಲೀಸ್ ಇಲಾಖೆಯ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಯಾವತ್ತು ಕನ್ನಡಿಗರ ಪರ ಇರುತ್ತದೆ. ನಿರ್ವಾಹಕನ ನೀಚ ಪ್ರವೃತ್ತಿಯನ್ನು ಖಂಡಿಸುವುದು ಬಿಟ್ಟು ಸಮರ್ಥನೆ ಮಾಡುತ್ತಿದ್ದಾರೆ. ಪೊಲೀಸರು ಪೋಕ್ಸೋ ಕೇಸ್ ದಾಖಲು ಮಾಡಿದ್ದಾರೆ. ಇಲ್ಲಿ ಕಂಡಕ್ಟರ್‌ನ ನೀಚ ವರ್ತನೆಯ ಬಗ್ಗೆ ಕನ್ನಡ ಸಂಘಟನೆಗಳು ಗಮನಿಸಬೇಕು ಎಂದು ಆಗ್ರಹಿಸಿದ್ದಾರೆ.
ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ಅಪ್ರಾಪ್ತ ಬಾಲಕಿಯ ಮೇಲಿನ ಕೃತ್ಯವನ್ನು ಸಮರ್ಥನೆ ಮಾಡಬಾರದು. ಇದರಿಂದ ಸಮಾಜಕ್ಕೆ ಏನ್ ಸಂದೇಶ ಕೊಡುತ್ತೀರಿ ಎಂಬುದು ಚಿಂತಿಸಬೇಕು. ಇಲ್ಲಿ ಶಾಂತಿಯುತ ವಾತಾವರಣ ಹಾಳಾಗಬಾರದು ಎಂದರೆ ಇದನ್ನು ಇಲ್ಲಿಗೆ ನಿಲ್ಲಿಸಬೇಕು. ನೀಚ ಕೃತ್ಯ ಸಮರ್ಥನೆ ಮಾಡೋ ನಾಲಾಯಕ ಸಂಘಟನೆಗಳ ಕ್ರಮವನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಬಸ್‌ನಲ್ಲಿ ಕನ್ನಡ ಮಾತನಾಡಿದ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಮರಾಠಿ ಪುಂಡರು!
