ಬೆಂಗಳೂರು(ಆ.10): ಉಸಿರಾಟಕಾರಕ ಕವಾಟ (ವಾಲ್ವಡ್‌ ರೆಸ್ಪಿರೇಟರ್‌) ಉಳ್ಳ ಎನ್‌-95 ಮಾಸ್ಕ್‌ ಬಳಕೆಯಿಂದ ಕೊರೋನಾ ಸೋಂಕು ಹರಡುವಿಕೆ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದ್ದರೂ ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತೆಯರಿಗೆ ಇದೇ ಮಾಸ್ಕ್‌ ನೀಡುತ್ತಿದ್ದು, ಈ ಕುರಿತು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ಮೆಮೋ ಸಲ್ಲಿಕೆಯಾಗಿದೆ.

ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಪಿಪಿಇ ಕಿಟ್‌ಗಳ ದರ ನಿಗದಿ ಸಂಬಂಧ ಡಾ. ರಾಜೀವ್‌ ರಮೇಶ್‌ ಗೋಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪೂರಕವಾಗಿ ವಕೀಲರಾದ ಗೀತಾ ಮಿಶ್ರಾ ಅವರು ಈ ಮೆಮೋ ಸಲ್ಲಿಸಿದ್ದಾರೆ.

ದೋಷಪೂರಿತ ಪಿಪಿಇ ಕಿಟ್, ಎನ್-95 ಮಾಸ್ಕ್ ಕುರಿತು ತನಿಖೆಗೆ ಆದೇಶಿಸಿದ ಸಚಿವ ಸುಧಾಕರ್

ಎನ್‌-95 ಮಾಸ್ಕ್‌ಗಳ ಬಳಕೆಯಿಂದ ಅದರಲ್ಲೂ ಮುಖ್ಯವಾಗಿ ‘ವಾಲ್ವಡ್‌ ರೆಸ್ಪಿರೇಟರ್‌’ ಹೊಂದಿರುವ ಎನ್‌-95 ಮಾಸ್ಕ್‌ಗಳ ಬಳಕೆಯಿಂದ ವೈರಸ್‌ ತಡೆಯಲು ಸಾಧ್ಯವಿಲ್ಲ. ಆದ್ದರಿಂದ, ಆರೋಗ್ಯ ಕಾರ್ಯಕರ್ತರೂ ಸೇರಿ ಜನಸಾಮಾನ್ಯರು ಮನೆಯಲ್ಲೇ ಸಿದ್ಧಪಡಿಸಿದ ಮಾಸ್ಕ್‌ಗಳನ್ನು ಬಳಸುವಂತೆ ಸಲಹೆ ನೀಡಿ ಆರೋಗ್ಯ ಸಚಿವಾಲಯ ಜು.20ರಂದು ಎಲ್ಲ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ. ಹೀಗಿದ್ದರೂ, ರಾಜ್ಯದಲ್ಲಿ ಅವುಗಳ ಬಳಕೆ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲ ಸರ್ಕಾರವೇ ಎನ್‌-95 ಮಾಸ್ಕ್‌ಗಳನ್ನು ಖರೀದಿಸುತ್ತಿದೆ. ಆದ್ದರಿಂದ, ಕೇಂದ್ರ ಸರ್ಕಾರದ ಸುತ್ತೋಲೆ ಅನುಸಾರ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.