Mekedatu Padayatra: ಬೆಂಗ್ಳೂರಲ್ಲಿ 3 ದಿನ ಕಾಂಗ್ರೆಸ್ ಪಾದಯಾತ್ರೆ
* ಫೆ.28ರ ರಾತ್ರಿ ಕೆಂಗೇರಿ ತಲುಪಲಿರುವ ಮೇಕೆದಾಟು ಪಾದಯಾತ್ರೆ
* ಮಾ.1ರಿಂದ ನಗರದ ವಿವಿಧೆಡೆ ಸಂಚಾರ
* ಮಾ. 3ಕ್ಕೆ ಸಮಾರೋಪ: ರಾಮಲಿಂಗಾರೆಡ್ಡಿ
ಬೆಂಗಳೂರು(ಫೆ.26): ಕೊರೋನಾ(Coronavirus) ಕಾರಣದಿಂದ ಅರ್ಧಕ್ಕೆ ಮೊಟಕುಗೊಳಿಸಿದ್ದ ಮೇಕೆದಾಟು ಪಾದಯಾತ್ರೆ(Mekedatu Padayatra) ಫೆ.27ರಂದು ರಾಮನಗರದಿಂದ ಪುನರ್ ಆರಂಭಗೊಳ್ಳುತ್ತಿದ್ದು, ಮಾ.1ರಿಂದ 3ರ ವರೆಗೆ ಮೂರು ದಿನ ಬೆಂಗಳೂರು(Bengaluru) ನಗರ ಭಾಗದಲ್ಲಿ ಬೃಹತ್ ಪಾದಯಾತ್ರೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ(Ramalinga Reddy) ಹೇಳಿದ್ದಾರೆ.
ಕೆಪಿಸಿಸಿ(KPCC) ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.28ರ ವೇಳೆಗೆ ಪಾದಯಾತ್ರೆ ಕೆಂಗೇರಿ ತಲುಪಲಿದೆ. ಬಳಿಕ ಬೆಂಗಳೂರಿನಲ್ಲೇ 5 ದಿನ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಮಾ.4ರಂದು ಬಜೆಟ್ ಅಧಿವೇಶನ(Budget Session) ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಮೂರು ದಿನಗಳಿಗೆ ಸೀಮಿತಗೊಳಿಸಲಾಗಿದೆ.
ಪಾದಯಾತ್ರೆ ಮಾಡೋದು ಅವಿವೇಕಿಗಳ ಕೆಲಸ, ಮತ್ತೆ ಶುರುವಾಯ್ತು ಮೇಕೆದಾಟು ವಾಕ್ಸಮರ
ಅಂತಿಮ ದಿನವಾದ ಮಾ.3ರಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ತನ್ಮೂಲಕ ಯೋಜನೆಗೆ ಕೂಡಲೇ ಚಾಲನೆ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಕಿರಿಕಿರಿ ಆಗುತ್ತದೆ ಅನುಸರಿಸಿಕೊಳ್ಳಿ:
ಸಾವಿರಾರು ಜನ ಪಾದಯಾತ್ರೆಯಲ್ಲಿ ಭಾಗವಹಿಸುವುದರಿಂದ ಸಹಜವಾಗಿಯೇ ಸಂಚಾರದಟ್ಟಣೆ ಆಗುತ್ತದೆ. ಜನರಿಗೂ ಕಿರಿಕಿರಿಯಾಗುತ್ತದೆ. ಬೆಂಗಳೂರಿನ ಜನರಿಗೆ ನೀರೊದಗಿಸಲು ಪಾದಯಾತ್ರೆ ಮಾಡಲಾಗುತ್ತಿದೆ. ಹೀಗಾಗಿ ಸ್ವಲ್ಪ ಅನುಸರಿಸಿಕೊಳ್ಳಬೇಕು. ಬೆಂಗಳೂರಿನ ನೀರಿಗಾಗಿ ಕಾಳಜಿ ಇರುವವರೆಲ್ಲರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದು ಕರೆ ನೀಡಿದರು.
ಪಾದಯಾತ್ರೆ ಮಾರ್ಗದ ವಿವರ:
ಪಾದಯಾತ್ರೆ ಮಾರ್ಗದ ಬಗ್ಗೆ ವಿವರಿಸಿದ ಅವರು, ಮಾ.1 ರಿಂದ ಕೆಂಗೇರಿಯಿಂದ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಮಾ.1ರಂದು ಜ್ಞಾನಭಾರತಿ ಮೆಟ್ರೋ ನಿಲ್ದಾಣ, ನಾಯಂಡಹಳ್ಳಿ, ಕತ್ರಿಗುಪ್ಪೆ, ಕದಿರೇನಹಳ್ಳಿ, ಬನಶಂಕರಿ ದೇಗುಲ, ಜಯದೇವ ಆಸ್ಪತ್ರೆ ಬಳಿಯ ಜಂಕ್ಷನ್‌ಗೆ ತಲುಪಲಾಗುವುದು. ಅಂದು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಾಗುವುದು.
ಮಾ.2ರಂದು ಹೊಸೂರು ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ಹಾಸ್‌ಮ್ಯಾಟ್ ರಸ್ತೆ, ತಿರುವಳ್ಳವರ್ ಪ್ರತಿಮೆ ರಸ್ತೆ, ನಂದಿ ದುರ್ಗ ರಸ್ತೆ, ಜೆ.ಸಿ. ನಗರ, ಮೇಖ್ರಿ ವೃತ್ತದ ಮೂಲಕ ಅರಮನೆ ಮೈದಾನಕ್ಕೆ ತಲುಪಿ ಅಂದು ಅರಮನೆ ಮೈದಾನದಲ್ಲೇ ವಾಸ್ತವ್ಯ ಹೂಡಲಾಗುವುದು.
ಮಾ.3ರಂದು ಅಂತಿಮ ದಿನ ಅರಮನೆ ಮೈದಾನದಿಂದ ಕಾವೇರಿ ಜಂಕ್ಷನ್, ಸ್ಯಾಂಕಿರಸ್ತೆ, ಮಾರ್ಗೊಸಾ ರಸ್ತೆ, ಶೇಷಾದ್ರಿಪುರಂ, ಕಾಟನ್ ಪೇಟೆ, ರಾಯನ್ ವೃತ್ತ, ಈದ್ಗಾ ಮೈದಾನವಾಗಿ ಸಾಗಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ ಪಾದಯಾತ್ರೆಯನ್ನು ಕೊನೆಗೊಳಿಸಲಾಗುವುದು ಎಂದು ಹೇಳಿದರು.
ಮಲ್ಲೇಶ್ವರ ಮಾರ್ಗದಲ್ಲಿ ಪಾದಯಾತ್ರೆ ಏಕೆ?
ಪಾದಯಾತ್ರೆ ಮಲ್ಲೇಶ್ವರಂ ಮಾರ್ಗದಲ್ಲೇ ಬರಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದರೆ ಎಂಬ ಪ್ರಶ್ನೆಗೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಬಿ.ಕೆ. ಹರಿಪ್ರಸಾದ್(BK Hariprasad) ಅವರು ನಮ್ಮ ಕ್ಷೇತ್ರವನ್ನು ಪಾದಯಾತ್ರೆಯಿಂದ ಹೊರಗಿಡಬೇಡಿ ಎಂದಿದ್ದರು. ಅಲ್ಲದೆ ಅರಮನೆ ಮೈದಾನದಿಂದ ನೇರವಾಗಿ ಬಂದರೆ ಮುಖ್ಯಮಂತ್ರಿಗಳ ನಿವಾಸದ ಬಳಿ ಸಂಚಾರ ದಟ್ಟಣೆ ಉದ್ಭವಿಸುವ ಸಾಧ್ಯತೆ ಇದೆ. ಇದನ್ನು ತಡೆಯಲು ಮಲ್ಲೇಶ್ವರ ಮಾರ್ಗ ಆಯ್ಕೆ ಮಾಡಿದ್ದೇವೆ. ಇದರ ಹೊರತಾಗಿ ಬೇರೆ ರಾಜಕೀಯ ಕಾರಣವಿಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮೇಕೆದಾಟು ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ಪಡೆಯಲು ರಾಜ್ಯ ಸಂಸದರು ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರನ್ನು ಕೇಳುತ್ತಿಲ್ಲ. ತಿರುಪತಿ ದೇವಸ್ಥಾನಕ್ಕೆ ಹೋದಂತೆ ದೂರದಿಂದ ನಮಸ್ಕಾರ ಮಾಡಿಕೊಂಡು ಬಂದು ಬಿಡುತ್ತಿದ್ದಾರೆ. ಅವರಿಗೆ ಮೋದಿ ಜತೆ ಮಾತನಾಡುವ ತಾಕತ್ತಿಲ್ಲ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.