ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಪೈಶಾಚಿಕ ದಾಳಿಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ತೀವ್ರವಾಗಿ ಖಂಡಿಸಿದ್ದಾರೆ. 

Pahalgam Terror attack:ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಪೈಶಾಚಿಕ ದಾಳಿಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ತೀವ್ರವಾಗಿ ಖಂಡಿಸಿದ್ದಾರೆ. 

ಈ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿರುವುದು ಮತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ಮನಸ್ಸಿಗೆ ಆಘಾತವನ್ನುಂಟು ಮಾಡಿದೆ ಎಂದು ಸ್ವಾಮೀಜಿಯವರು ಕಂಬನಿ ಮಿಡಿದಿದ್ದಾರೆ.
ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಸ್ವಾಮೀಜಿಯವರು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. 

ಈ ದಾಳಿಯಲ್ಲಿ ಕರ್ನಾಟಕದ ಮೂವರು, ಇಬ್ಬರು ಶಿವಮೊಗ್ಗದವರು ಸೇರಿದಂತೆ, ಸಾವನ್ನಪ್ಪಿರುವುದು ಅತ್ಯಂತ ದುರದೃಷ್ಟಕರ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ (47) ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ:ಪಹಲ್ಗಾಮ್ ದಾಳಿ: ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡ್ಲಿ ಎಂದ ಅಜ್ಮೀರ್ ದರ್ಗಾ ಮುಖ್ಯಸ್ಥ!

ಶ್ರೀ ಮಠವು ಸಂತ್ರಸ್ತ ಕುಟುಂಬಗಳ ಜೊತೆಗಿದೆ ಎಂದು ಭರವಸೆ ನೀಡಿರುವ ಸ್ವಾಮೀಜಿಯವರು, ಮೃತರ ದೇಹಗಳನ್ನು ಜಮ್ಮು-ಕಾಶ್ಮೀರದಿಂದ ಅವರ ಸ್ವಗ್ರಾಮಗಳಿಗೆ ತರಲು ಸರ್ಕಾರ ಮುಂದಾಗಿರುವುದನ್ನು ಶ್ಲಾಘಿಸಿದ್ದಾರೆ. ಒಂದು ಕಾಲದಲ್ಲಿ ಅಶಾಂತಿಯ ಬೀಡಾಗಿದ್ದ ಜಮ್ಮು-ಕಾಶ್ಮೀರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರಗಳಿಂದ ಶಾಂತಿ ನೆಲೆಗೊಂಡಿತ್ತು. ಆದರೆ, ಈ ಶಾಂತಿಯನ್ನು ಸಹಿಸದ ಉಗ್ರರು ಮಾನವೀಯತೆಯನ್ನು ಮರೆತು ಬರ್ಬರವಾಗಿ ಗುಂಡಿನ ದಾಳಿ ನಡೆಸಿರುವುದು ಸಹಿಸಲಸಾಧ್ಯ ಎಂದು ಕಿಡಿಕಾರಿದ್ದಾರೆ.

'ಭಯೋತ್ಪಾದನೆಗೆ ಜಾತಿ, ಧರ್ಮದ ಬಣ್ಣ ಕಟ್ಟುವುದು ಸರಿಯಲ್ಲ. ಯಾರೇ ಇದರಲ್ಲಿ ಭಾಗಿಯಾಗಿದ್ದರೂ, ಅದನ್ನು ಖಂಡಿಸಲೇಬೇಕು. ಪಕ್ಷ ರಾಜಕಾರಣವನ್ನು ಮರೆತು, ಎಲ್ಲರೂ ಒಗ್ಗಟ್ಟಾಗಿ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕು. ಇದು ಭಾರತದ ಸಾರ್ವಭೌಮತೆಯ ಮೇಲಿನ ದಾಳಿಯಾಗಿದೆ. ಉಗ್ರರನ್ನು ಮಟ್ಟ ಹಾಕಲು ಸರ್ಕಾರ ಎಲ್ಲ ಸಾಧ್ಯ ಕ್ರಮಗಳನ್ನು ಕೈಗೊಳ್ಳಬೇಕು, ಮತ್ತು ನಾವೆಲ್ಲರೂ ಒಂದಾಗಿ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಬೇಕು' ತಿಳಿಸಿದ್ದಾರೆ. 

ಇದನ್ನೂ ಓದಿ: ಪಹಲ್ಗಾಮ್ ದಾಳಿಗೆ ಆರ್ಟಿಕಲ್ 370 ತೆಗೆದಿದ್ದೇ ಕಾರಣ; ಕಾಂಗ್ರೆಸ್ ಶಾಸಕ ವಿವಾದಾತ್ಮಕ ಹೇಳಿಕೆ!

ಈ ದಾಳಿಯನ್ನು ದಿ ರೆಸಿಸ್ಟೆನ್ಸ್ ಫ್ರಂಟ್ ಎಂಬ ಸಂಘಟನೆ, ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಸಂಗಡಿಗರೊಂದಿಗೆ, ಜವಾಬ್ದಾರಿ ಹೊತ್ತುಕೊಂಡಿದೆ. ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತುರ್ತು ಸಭೆ ಕರೆದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.